ಬೆಂಗಳೂರು: ಮನೆ ಬಿಟ್ಟು ಹೋಗು ಎಂದ ಅಣ್ಣನ ಮಗನನ್ನು ಕೊಂದ ಚಿಕ್ಕಪ್ಪನ ಬಂಧನ
ಕೆಂಗೇರಿ ಗಾಂಧಿನಗರ ನಿವಾಸಿ ಕುಮಾರ್ ಬಂಧಿತ. ಜೂ.1ರಂದು ರಾತ್ರಿ 8.30ರ ಸಮಯದಲ್ಲಿ ಕೆಂಗೇರಿ ಉಪನಗರದ 80 ಅಡಿ ರಸ್ತೆಯ ಹ್ಯಾಪಿಡೇ ಬಾರ್ ಆ್ಯಂಡ್ ರೆಸ್ಟೋರೆಂಟ್ ಪಕ್ಕದ ರಸ್ತೆಯಲ್ಲಿ ತನ್ನ ಸಹೋದರನ ಪುತ್ರ ನವೀನ್ ಕುಮಾರ್ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಬೆಂಗಳೂರು(ಜೂ.04): ಮನೆ ಬಿಟ್ಟು ಹೋಗುವಂತೆ ಪದೇ ಪದೇ ತೊಂದರೆ ಕೊಡುತ್ತಿದ್ದ ಅಣ್ಣನ ಮಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಚಿಕ್ಕಪ್ಪನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಗಾಂಧಿನಗರ ನಿವಾಸಿ ಕುಮಾರ್(36) ಬಂಧಿತ. ಜೂ.1ರಂದು ರಾತ್ರಿ 8.30ರ ಸಮಯದಲ್ಲಿ ಕೆಂಗೇರಿ ಉಪನಗರದ 80 ಅಡಿ ರಸ್ತೆಯ ಹ್ಯಾಪಿಡೇ ಬಾರ್ ಆ್ಯಂಡ್ ರೆಸ್ಟೋರೆಂಟ್ ಪಕ್ಕದ ರಸ್ತೆಯಲ್ಲಿ ತನ್ನ ಸಹೋದರನ ಪುತ್ರ ನವೀನ್ ಕುಮಾರ್(25) ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಘಟನೆ ದಿನ ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಕುಮಾರ್‌ಗೆ ಮದುವೆಯಾಗಿ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳು ಕುಮಾರ್‌ನನ್ನು ಬಿಟ್ಟು ಹೋಗಿದ್ದರು. ಹೀಗಾಗಿ ಆರೋಪಿ ಕುಮಾರ್, ತನ್ನ ಅಣ್ಣನ ಮನೆಯಲ್ಲೇ ನೆಲೆಸಿದ್ದ. ಈ ವೇಳೆ ಅಣ್ಣನ ಮಗನಾದ ನವೀನ್‌ಕುಮಾರ್, ‘ನಮ್ಮ ಮನೆಗೆ ಬಂದು ಏಕೆ ಸೇರಿಕೊಂಡಿದ್ದೀಯಾ’ ಎಂದು ಪ್ರತಿ ದಿನ ಕುಮಾರ್‌ನನ್ನು ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದ. ಆಗಾಗ ದೈಹಿಕ ಹಲ್ಲೆ ಮಾಡುತ್ತಿದ್ದ.
ಬೆಂಗಳೂರು: 1800 ವಿದ್ಯಾರ್ಥಿಗಳ ದಾಖಲೆ ಬಳಸಿ 19 ಕೋಟಿ ಸಾಲ ಪಡೆದು ಟೋಪಿ!
ಬಾರ್‌ಗೆ ಕರೆಸಿಕೊಂಡು ಕೊಲೆಯಾದ!:
ಈ ವಿಚಾರ ಸಂಬಂಧ ಜೂ.1ರಂದು ಸಂಜೆ 4ರ ಸುಮಾರಿಗೆ ನವೀನ್ ಕುಮಾರ್, ಆರೋಪಿ ಕುಮಾರ್ ಜತೆಗೆ ಜಗಳ ತೆಗೆದು, ‘ನಮ್ಮ ಮನೆಯಲ್ಲಿ ಏಕೆ ಇದ್ದೀಯಾ? ಮನೆ ಬಿಟ್ಟು ಹೋಗು’ ಎಂದು ಬೈದು ಗಲಾಟೆ ಮಾಡಿದ್ದ. ಈ ವೇಳೆ ನವೀನ್‌ನ ತಾಯಿ ಗಲಾಟೆ ಬಿಡಿಸಿ ಇಬ್ಬರನ್ನೂ ಸುಮ್ಮನಾಗಿಸಿದ್ದರು. ಅದೇ ದಿನ ರಾತ್ರಿ 8ರ ಸುಮಾರಿಗೆ ನವೀನ್ ಕುಮಾರ್ ಕೆಂಗೇರಿ ಉಪನಗರದ 80 ಅಡಿ ರಸ್ತೆಯ ಹ್ಯಾಪಿಡೇ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಿದ್ದಾನೆ. ಬಳಿಕ ಆರೋಪಿ ಕುಮಾರ್‌ನನ್ನು ಬಾರ್‌ಗೆ ಕರೆಸಿಕೊಂಡು ಮತ್ತೆ ಹಳೆಯ ವಿಚಾರ ಪ್ರಸ್ತಾಪಿಸಿ, ‘ನೀನು ನಮ್ಮ ಮನೆಯನ್ನು ಬಿಟ್ಟು ಹೋಗು. ಇಲ್ಲವಾದರೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾನೆ.
ಇದರಿಂದ ಕೋಪಗೊಂಡ ಕುಮಾರ್, ಪಾನಮತ್ತ ನವೀನ್‌ಕುಮಾರ್‌ನನ್ನು ಬಾರ್ ಪಕ್ಕದ ರಸ್ತೆಗೆ ಕರೆದುಕೊಂಡು ಹೋಗಿ ಮನೆಯಿಂದ ತಂದಿದ್ದ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.