ಶೋಕಿವಾಲ ಕಳ್ಳ ಪೊಲೀಸರ ಬಲೆಗೆ, 8.50 ಲಕ್ಷ ರು.ಮೌಲ್ಯದ ಚಿನ್ನಾಭರಣ, ಮೊಬೈಲ್‌ ಜಪ್ತಿ

ಬೆಂಗಳೂರು(ಅ.26): ವಿಲಾಸಿ ಜೀವನ ನಡೆಸಲು ದುಬೈಗೆ ತೆರಳಲು ವೀಸಾ-ಪಾಸ್‌ಪೋರ್ಟ್‌ ಮಾಡಿಸಲು ಮನೆಗಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಎಚ್‌.ಎಸ್‌.ಆರ್‌.ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಅರುಣ್‌ಕುಮಾರ್‌ ರೆಡ್ಡಿ (28) ಬಂಧಿತ. ಆರೋಪಿ ನೀಡಿದ ಮಾಹಿತಿ ಮೇರೆಗೆ 8.50 ಲಕ್ಷ ರು. ಮೌಲ್ಯದ 178 ಗ್ರಾಂ ತೂಕದ ಚಿನ್ನಾಭರಣ, ಲ್ಯಾಪ್‌ಟಾಪ್‌ ಹಾಗೂ ಎರಡು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎಚ್‌ಎಸ್‌ಆರ್‌ ಲೇಔಟ್‌ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈಗೆ ಹೋಗುವ ಕನಸು:

ಆಂಧ್ರಪ್ರದೇಶದ ಕದರಿ ಮೂಲದ ಆರೋಪಿ ಅರುಣ್‌ ಬಿ.ಕಾಂ ಪದವಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದ. ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಬೊಮ್ಮನಹಳ್ಳಿಯಲ್ಲಿ ಬಾಡಿಗೆಗೆ ರೂಮ್‌ ಪಡೆದು ನೆಲೆಸಿದ್ದ. ವಿಲಾಸಿ ಜೀವನ ನಡೆಸಲು ದುಬೈಗೆ ಹೋಗುವ ಕನಸು ಕಂಡಿದ್ದ. ಇದಕ್ಕಾಗಿ ಪಾಸ್‌ಪೋರ್ಟ್‌ ಮತ್ತು ವೀಸಾ ಮಾಡಿಸಲು ಹಣ ಹೊಂದಿಸಲು ಸಂಬಂಧಿಕರ ಮನೆಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ. ವೀಸಾ-ಪಾಸ್‌ಪೋರ್ಟ್‌ ಮಾಡಿಸಲು ತನ್ನ ಅಕ್ಕನ ಸ್ನೇಹಿತನನ್ನು ಪರಿಚಯಿಸಿಕೊಂಡು ಆಗಾಗ ಹಣ ನೀಡುತ್ತಿದ್ದ. ಆದರೆ, ಅಕ್ಕನ ಸ್ನೇಹಿತ ಹಣ ಪಡೆದು ವೀಸಾ-ಪಾಸ್‌ಪೋರ್ಟ್‌ ಮಾಡಿಸದೆ ವಂಚನೆ ಮಾಡಿದ ಪರಿಣಾಮ ಬೆಂಗಳೂರಿನಲ್ಲೇ ವಿಲಾಸಿ ಜೀವನ ನಡೆಸಲು ತೀರ್ಮಾನಿಸಿದ್ದ. ಹೀಗಾಗಿ ಸುಲಭವಾಗಿ ಹಣ ಗಳಿಸಲು ಮನೆಗಳವು ಕೃತ್ಯಕ್ಕೆ ಇಳಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Belagavi : ಬಾಯಿಗೆ ಬಟ್ಟೆ ತುರುಕಿ ಮಾಜಿ ಗ್ರಾಪಂ ಅಧ್ಯಕ್ಷನ ಮನೆ ಕಳ್ಳತನ

ಆರೋಪಿ ಅರುಣ್‌ ಹಗಲಿನಲ್ಲಿ ಸುತ್ತಾಡಿ ಬೀಗ ಗಾಕಿದ ಮನೆಗಳನ್ನು ಗುರುತಿಸುತ್ತಿದ್ದ. ಶೂ ಸ್ಟ್ಯಾಂಡ್‌, ಕಿಟಕಿ ಇತರೆ ಬೀಗ ಕೀಗಾಗಿ ಹುಡುಕುತ್ತಿದ್ದ. ಕೀ ಸಿಕ್ಕರೆ ಬಾಗಿಲು ತೆರೆದು ನಗದು, ಚಿನ್ನಾಭರಣ ದೋಚಿ ಪರಾರಿ
ಯಾಗುತ್ತಿದ್ದ. ಕೀ ಸಿಗದಿದ್ದರೆ ಬೀಗ ಮೀಟಿ ಕಳವು ಮಾಡುತ್ತಿದ್ದ. ಕದ್ದ ಚಿನ್ನಾಣರಣಗಳನ್ನು ಆರೋಪಿಯು ಆಂಧ್ರಪ್ರದೇಶದ ಕದರಿಗೆ ಕೊಂಡೊಯ್ದು ಫೈನಾನ್ಸ್‌ ಕಂಪನಿಯಲ್ಲಿ ಅಡವಿರಿಸಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ವಿಲಾಸಿ ಜೀವನದ ಶೋಕಿ:

ಆರೋಪಿಯು ಕದ್ದ ಚಿನ್ನಾಭರಣ ವಿಲೇವಾರಿ ಮಾಡಿ ಬಂದ ಹಣದಿಂದ ವಿಲಾಸಿ ಜೀವನ ಮಾಡುತ್ತಿದ್ದ. ಬ್ರ್ಯಾಂಡೆಡ್‌ ಬಟ್ಟೆಗಳು, ಬ್ರ್ಯಾಂಡೆಡ್‌ ವಸ್ತುಗಳನ್ನು ಖರೀದಿಸುತ್ತಿದ್ದ. ಸ್ಟಾರ್‌ ಹೋಟೆಲ್‌ಗಳಲ್ಲಿ ಉಳಿದುಕೊಂಡು ಮಜಾ ಮಾಡುತ್ತಿದ್ದ. ಐಪಿಎಸ್‌ ಸಮಯದಲ್ಲಿ ಬೆಟ್ಟಿಂಗ್‌ ಆಡುತ್ತಿದ್ದ. ಮೋಜು-ಮಸ್ತಿ ಮಾಡಿಕೊಂಡು ಶ್ರೀಮಂತಿಕೆ ಪ್ರದರ್ಶಿಸುತ್ತಿದ್ದ. ಈತನ ಬಂಧನದಿಂದ ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಬೇಗೂರು ಠಾಣೆಯಲ್ಲಿ ದಾಖಲಾಗಿದ್ದ ಎರಡು ಮನೆಗಳವು ಪ್ರಕರಣ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.