ಬೆಂಗಳೂರು(ಅ.10): ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬ ಆರ್‌ಎಂಸಿ ಯಾರ್ಡ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಥಣಿಸಂದ್ರದ ಆದಿಲ್‌ ಪಾಷ ಬಂಧಿತ. ಆರೋಪಿಯಿಂದ 10 ಲಕ್ಷ ಮೌಲ್ಯದ 155 ಗ್ರಾಂ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಮಹಿಳಾ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಕೆಲವು ತಿಂಗಳ ಹಿಂದೆ ಬಸ್‌ಗಳಲ್ಲಿ ಕಳ್ಳತನ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಬಸ್‌ಗಳ ನಿಲ್ದಾಣದಲ್ಲಿ ನಿಗಾವಹಿಸಿದ್ದರು. ಇತ್ತೀಚಿಗೆ ಕಳ್ಳತನ ಯತ್ನದಲ್ಲಿದ್ದಾಗ ಆದಿಲ್‌ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"

ಫ್ರೆಂಡ್‌ ಮನೆಯಲ್ಲೇ ಚಿನ್ನ ಕದ್ದ ಚಾಲಾಕಿ ಕಳ್ಳಿ, ಅಕೆಯ ಸ್ನೇಹಿತ ಅರೆಸ್ಟ್

3 ವರ್ಷದ ಕೇಸ್‌ ಪತ್ತೆ:

ಥಣಿಸಂದ್ರದ ಆದಿಲ್‌ ವೃತ್ತಿಪರ ಕಳ್ಳನಾಗಿದ್ದು, ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುವುದು ಆತನ ಕೃತ್ಯವಾಗಿತ್ತು. ಬೆಂಗಳೂರು ಸೇರಿದಂತೆ ಹಲವು ಕಡೆ ಆತನ ಮೇಲೆ ಪ್ರಕರಣ ದಾಖಲಾಗಿವೆ. ಆರೋಪಿ ಬಂಧನದಿಂದ ಮೂರು ವರ್ಷದ ಹಿಂದೆ ಯಶವಂತಪುರದ ಬಳಿ ನಡೆದಿದ್ದ ಕಳ್ಳತನ ಪ್ರಕರಣ ಒಳಗೊಂಡಂತೆ ಆರ್‌ಎಂಸಿ ಯಾರ್ಡ್‌, ಎಚ್‌ಎಎಲ್‌ ಹಾಗೂ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2017ರ ಫೆಬ್ರವರಿಯಲ್ಲಿ ಶಿವಮೊಗ್ಗಕ್ಕೆ ತೆರಳಲು ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ್ನು ಸಂಜೀವಿನಿ ನಗರದ ನಿವಾಸಿ ಮಾಲತಿ ಎಂಬುವರು ಹತ್ತಿದ್ದರು. ಅದೇ ಬಸ್ಸಿಗೆ ಯಶವಂತಪುರದ ಗೋವರ್ಧನ್‌ ಚಿತ್ರಮಂದಿರ ಬಳಿ ಮಕ್ಕಳ ಜತೆ ಹತ್ತಿದ ಅಪರಿಚಿತ ಮಹಿಳೆಯರು, ಮಾಲತಿ ಕುಳಿತಿದ್ದ ಸೀಟಿನ ಪಕ್ಕದಲ್ಲೇ ಅಸೀನರಾಗಿದ್ದರು. ಆಗ ಮಾಲತಿ ಅವರ ಬ್ಯಾಗಿನ ಮೇಲೆ ಚಿಲ್ಲರೆ ನಾಣ್ಯಗಳನ್ನು ಬೀಳಿಸಿ, ಅದನ್ನು ಎತ್ತಿಕೊಳ್ಳುವ ನೆಪದಲ್ಲಿ ಬ್ಯಾಗಿನಲ್ಲಿದ್ದ 155 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಆದಿಲ್‌ ವಿಚಾರಣೆ ನಡೆಸಿದಾಗ ಮಾಲತಿ ಚಿನ್ನಾಭರಣ ಕಳ್ಳತನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.