ಪತ್ನಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಗಲಾಟೆ: ಸೋದರ ಸಂಬಂಧಿಗೆ ಇರಿದು ಕೊಂದವನ ಸೆರೆ
ಬೆಂಗಳೂರಿನ ತಿಲಕನಗರ ನಿವಾಸಿ ತಬ್ರೇಜ್ ಪಾಷಾ ಕೊಲೆಯಾದವ. ಕೃತ್ಯ ಎಸಗಿದ ಕೆಂಗೇರಿ ನಿವಾಸಿ ಶಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು(ನ.16): ಪತ್ನಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ಸೋದರ ಸಂಬಂಧಿಗೆ ಮಾರಕಾಸ್ತ್ರದಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಿಲಕನಗರ ನಿವಾಸಿ ತಬ್ರೇಜ್ ಪಾಷಾ(37) ಕೊಲೆಯಾದವ. ಕೃತ್ಯ ಎಸಗಿದ ಕೆಂಗೇರಿ ನಿವಾಸಿ ಶಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಬ್ರೇಜ್ ಪಾಷಾ ಮತ್ತು ಶಬೀರ್ ಸೋದರ ಸಂಬಂಧಿಗಳಾಗಿದ್ದು, ತಬ್ರೇಜ್ ಪಾಷಾ ಚೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶಬೀರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಶಬೀರ್ ಪತ್ನಿ ಜತೆ ತಬ್ರೇಜ್ ಪಾಷಾ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಒಂಬತ್ತು ತಿಂಗಳ ಹಿಂದೆ ಆರೋಪಿ ಶಬೀರ್, ತಬ್ರೇಜ್ ಪಾಷಾನ ಮನೆ ಬಳಿ ಬಂದು ಗಲಾಟೆ ಮಾಡಿದ್ದ. ಇದರಿಂದ ಇಬ್ಬರ ನಡುವೆ ದ್ವೇಷ ಬೆಳೆದಿತ್ತು.
ಪುತ್ತೂರು: ‘ಕಲ್ಲೇಗ ಟೈಗರ್ಸ್’ ತಂಡ ಮುಖ್ಯಸ್ಥ ಯುವಕನ ಕಗ್ಗೊಲೆ
ಅಡ್ಡಗಟ್ಟಿ ಹತ್ಯೆ ಮಾಡಿದ:
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎಂದಿನಂತೆ ತಬ್ರೇಜ್ ಪಾಷಾ ಕೆಲಸಕ್ಕೆ ತೆರಳಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ ಪತ್ನಿಗೆ ಕರೆ ಮಾಡಿ ಊಟಕ್ಕೆ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾನೆ. ಮಾರ್ಗ ಮಧ್ಯೆ ಎಸ್.ಆರ್.ಕೆ.ಗಾರ್ಡನ್ ಬಳಿ ತಬ್ರೇಜ್ ಪಾಷಾನನ್ನು ಅಡ್ಡಗಟ್ಟಿದ ಆರೋಪಿ ಶಬೀರ್, ಮಾರಕಾಸ್ತ್ರದಿಂದ ತಬ್ರೇಜ್ ಪಾಷಾನ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಹತ್ತಾರು ಬಾರಿ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ತಿಲಕನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.