ಕೌಟುಂಬಿಕ ಕಲಹ: ಪತ್ನಿ ಮೇಲೆ ಕೋಪಕ್ಕೆ ಮಲಮಗನ ಕೊಂದವನ ಬಂಧನ!

ಕೌಟುಂಬಿಕ ಕಲಹದಿಂದ ಪ್ರತ್ಯೇಕವಾಗಿ ನೆಲೆಸಿದ್ದ ಎರಡನೇ ಪತ್ನಿಯ ಮೇಲಿನ ಕೋಪದಿಂದ ಆಕೆಯ ಮಗನನ್ನು ಉಪಾಯದಿಂದ ಹಾಸ್ಟೆಲ್‌ನಿಂದ ಕರೆದೊಯ್ದು ಕೆರೆಗೆ ತಳ್ಳಿ ಕೊಲೆ ಮಾಡಿದ್ದ ಮಲತಂದೆಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 

accused arrested for boy kidnap and murder at bengaluru gvd

ಬೆಂಗಳೂರು (ಮಾ.13): ಕೌಟುಂಬಿಕ ಕಲಹದಿಂದ ಪ್ರತ್ಯೇಕವಾಗಿ ನೆಲೆಸಿದ್ದ ಎರಡನೇ ಪತ್ನಿಯ ಮೇಲಿನ ಕೋಪದಿಂದ ಆಕೆಯ ಮಗನನ್ನು ಉಪಾಯದಿಂದ ಹಾಸ್ಟೆಲ್‌ನಿಂದ ಕರೆದೊಯ್ದು ಕೆರೆಗೆ ತಳ್ಳಿ ಕೊಲೆ ಮಾಡಿದ್ದ ಮಲತಂದೆಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ ಚೇತನ್‌ ರೆಡ್ಡಿ (11) ಕೊಲೆಯಾದ ಬಾಲಕ. ಈತನ ಮಲತಂದೆ ಕೆಜಿಎಫ್‌ ನಿವಾಸಿ ಸಂಪತ್‌ ಕುಮಾರ್‌(35) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಫೆ.20ರಂದು ಬಾಗಲೂರು ಸಮೀಪದ ಚೊಕ್ಕನಹಳ್ಳಿಯಲ್ಲಿರುವ ಚಿಲ್ಡ್ರನ್‌ ವಿಲೇಜ್‌ ಫೌಂಡೇಷನ್‌ ಹಾಸ್ಟೆಲ್‌ನಿಂದ ಚೇತನ್‌ ರೆಡ್ಡಿಯನ್ನು ಕರೆದೊಯ್ದು ಕೆಜಿಎಫ್‌ ಸಮೀಪದ ಕ್ಯಾಸಂಬಹಳ್ಳಿ ಕೆರೆಗೆ ನೂಕಿ ಕೊಲೆ ಮಾಡಿದ್ದ. 

ಘಟನೆ ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್‌ ತಾಲೂಕಿನ ಕ್ಯಾಸಂಬಳ್ಳಿ ನಿವಾಸಿ ಪ್ರವೀಣ್‌ಕುಮಾರ್‌ ಹಾಗೂ ಕೃಷ್ಣರಾಜಪುರ ಗ್ರಾಮದ ಸಂಪತ್‌ಕುಮಾರ್‌ ಸ್ನೇಹಿತರಾಗಿದ್ದರು. ಪ್ರವೀಣ್‌ ಕುಮಾರ್‌ ಪುಷ್ಪಾವತಿಯನ್ನು ಮದುವೆಯಾಗಿದ್ದು, ಚೇತನ್‌ ರೆಡ್ಡಿ ಮತ್ತು ರಕ್ಷಿತಾ ಎಂಬ ಮಕ್ಕಳಿದ್ದಾರೆ. ಆರೋಪಿ ಸಂಪತ್‌ಕುಮಾರ್‌, ನಿರ್ಮಲಾ ಎಂಬುವರ ಜತೆ ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ. ಆಗಾಗ ಸ್ನೇಹಿತನ ಮಾತನಾಡಿಸುವ ನೆಪದಲ್ಲಿ ಮನೆಗೆ ಬರುತ್ತಿದ್ದ ಸಂಪತ್‌ಕುಮಾರ್‌ಗೆ ಪುಷ್ಪಾವತಿ ಜತೆಗೆ ಸಲುಗೆ ಬೆಳೆದು ಬಳಿಕ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಪತಿ ಪ್ರವೀಣ್‌ಕುಮಾರ್‌ಗೆ ಗೊತ್ತಾಗಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದ. ನ್ಯಾಯಾಲಯ ಇಬ್ಬರು ಮಕ್ಕಳ ಪೈಕಿ ಪುತ್ರ ಚೇತನ್‌ ರೆಡ್ಡಿಯನ್ನು ಪ್ರವೀಣ್‌ ಕುಮಾರ್‌ ಬಳಿ ಹಾಗೂ ಪುತ್ರಿ ರಕ್ಷಿತಾಳನ್ನು ತಾಯಿ ಪುಷ್ಪಾವತಿ ಜತೆಗೆ ಇರುವಂತೆ ಆದೇಶಿಸಿತ್ತು.

ಅಭ್ಯರ್ಥಿ ಆಯ್ಕೆಗೆ ಮಾ.15ರಂದು ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ: ಖರ್ಗೆ, ಸೋನಿಯಾ, ರಾಹುಲ್‌ ನೇತೃತ್ವ

ಮೊಬೈಲ್‌ ನಂಬರ್‌ ಬ್ಲಾಕ್‌: ಇದಾದ ಬಳಿಕ ಸಂಪತ್‌ ಕುಮಾರ್‌ ಪತ್ನಿ ನಿರ್ಮಲಾಗೆ ವಿಚ್ಛೇದನ ನೀಡಿ, 2021ರಲ್ಲಿ ಪುಷ್ಪಾವತಿಯನ್ನು ವಿವಾಹವಾಗಿದ್ದ. ಆರು ತಿಂಗಳ ಬಳಿಕ ದಂಪತಿ ನಡುವೆ ಕ್ಷುಲ್ಲಕ ಕಾರಣಗಳಿಗೆ ಗಲಾಟೆಗಳಾಗುತ್ತಿದ್ದವು, ಈತನ ಕಿರುಕುಳ ತಾಳಲಾರದೆ ಕಳೆದ ಒಂದು ವರ್ಷದಿಂದ ಪುಷ್ಪಾವತಿ ತನ್ನ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಸಂಪತ್‌ಕುಮಾರ್‌ನ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿಕೊಂಡು ತನ್ನಪಾಡಿಗೆ ತಾನಿದ್ದಳು.

ಕೊಲ್ಲೋದಾಗಿ ಬೆದರಿಕೆ: ಪುಷ್ಪಾವತಿ ಪ್ರತ್ಯೇಕವಾಗಿರುವುದಕ್ಕೆ ಕುಪಿತಗೊಂಡಿದ್ದ ಸಂಪತ್‌ಕುಮಾರ್‌ ‘ತನ್ನ ಜತೆಗೆ ಸಂಸಾರ ಮಾಡಬೇಕು. ಇಲ್ಲವಾದರೆ, ನಿನ್ನ ಮಗಳು ರಕ್ಷಿತಾಳನ್ನು ಹತ್ಯೆ ಮಾಡುತ್ತೇನೆ’ ಎಂದು ಪುಷ್ಪಾವತಿಗೆ ಬೆದರಿಕೆ ಹಾಕುತ್ತಿದ್ದ. ಈ ನಡುವೆ ಪುಷ್ಪಾವತಿ ಮನೆಗೆ ತೆರಳಿದ್ದ ಸಂಪತ್‌ಕುಮಾರ್‌ ಮನೆಯಲ್ಲಿದ್ದ ರಕ್ಷಿತಾಳನ್ನು ಹೊರಗೆ ಕರೆದೊಯ್ಯಲು ಮುಂದಾದಾಗ ಆಕೆ ಬಂದಿಲ್ಲ.

ಹಾಸ್ಟೆಲ್‌ನಲ್ಲಿದ್ದ ಮಗನ ಹತ್ಯೆ: ವಿಚ್ಛೇದನ ಆದೇಶದ ನಂತರ ಪ್ರವೀಣ ಕುಮಾರ್‌ ಮಗ ಚೇತನ್‌ರೆಡ್ಡಿಯನ್ನು ಬಾಗಲೂರು ಸಮೀಪದ ಚೊಕ್ಕನಹಳ್ಳಿಯ ಚಿಲ್ಡ್ರನ್ಸ್‌ ವಿಲೇಜ್‌ ಫೌಂಡೇಷನ್‌ನ ಹಾಸ್ಟೆಲ್‌ನಲ್ಲಿ ಇರಿಸಿದ್ದರು. ಅಲ್ಲಿನ ಖಾಸಗಿ ಶಾಲೆಯಲ್ಲಿ ಚೇತನ್‌ ರೆಡ್ಡಿ ವ್ಯಾಸಂಗ ಮಾಡುತ್ತಿದ್ದ. ಪುಷ್ಪಾವತಿ ಮತ್ತು ಸಂಪತ್‌ಕುಮಾರ್‌ ಸಹ ಹಾಸ್ಟೆಲ್‌ಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಪುಷ್ಪಾವತಿ ಪ್ರತ್ಯೇಕವಾದ ಬಳಿಕ ಕೋಪಗೊಂಡಿದ್ದ ಸಂಪತ್‌ಕುಮಾರ್‌ ಆಕೆಗೆ ಬುದ್ಧಿ ಕಲಿಸಲು ಫೆ.20ರಂದು ಸಂಜೆ 4.30ರ ಸುಮಾರಿಗೆ ಹಾಸ್ಟೆಲ್‌ಗೆ ಬಂದು ಚೇತನ್‌ ರೆಡ್ಡಿಗೆ ಬಿರಿಯಾನಿ, ಚಾಲೋಕೇಟ್‌ ಕೊಡಿಸುವುದಾಗಿ ಪುಸಲಾಯಿಸಿ ಹಾಸ್ಟೆಲ್‌ನಿಂದ ಕರೆದುಕೊಂಡು ಹೋದ. ಈ ಹಿಂದೆ ಸಹ ಸಂಪತ್‌ಕುಮಾರ್‌ ಹಾಸ್ಟೆಲ್‌ಗೆ ಬಂದಿದ್ದರಿಂದ ಅಲ್ಲಿನ ಸಿಬ್ಬಂದಿ ಆತನ ಜತೆಗೆ ಚೇತನ್‌ ರೆಡ್ಡಿಯನ್ನು ಕಳುಹಿಸಿದ್ದರು.

ಬಿರಿಯಾನಿ ತಿನ್ನಿಸಿ, ಕೆರೆಗೆ ನೂಕಿ ಕೊಲೆ: ಹಾಸ್ಟೆಲ್‌ನಿಂದ ಕೆಜಿಎಫ್‌ಗೆ ಚೇತನ್‌ ರೆಡ್ಡಿಯನ್ನು ಕರೆತಂದ ಆರೋಪಿ ಸಂಪತ್‌ಕುಮಾರ್‌, ಹೋಟೆಲ್‌ನಲ್ಲಿ ಬಿರಿಯಾನಿ, ಚಾಕೋಲೇಟ್‌ ಕೊಡಿಸಿದ್ದಾನೆ. ಬಳಿಕ ಪುಷ್ಪಾವತಿ ಮೊಬೈಲ್‌ಗೆ ಕರೆ ಮಾಡಿದಾಗ, ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಕೋಪಗೊಂಡ ಸಂಪತ್‌ ರಾತ್ರಿ 8ಕ್ಕೆ ಚೇತನ್‌ ರೆಡ್ಡಿಯನ್ನು ಕ್ಯಾಸಂಬಹಳ್ಳಿ ಕೆರೆ ಬಳಿ ಕರೆತಂದು ಕೆರೆಗೆ ತಳ್ಳಿ ಪರಾರಿಯಾಗಿದ್ದ. ಈ ನಡುವೆ ಚೇತನ್‌ ರೆಡ್ಡಿ ರಾತ್ರಿಯಾದರೂ ಹಾಸ್ಟೆಲ್‌ಗೆ ಬಾರದಿದ್ದರಿಂದ ಗಾಬರಿಗೊಂಡು ಸಿಬ್ಬಂದಿ ಬಾಗಲೂರು ಠಾಣೆಗೆ ಅಪಹರಣ ದೂರು ನೀಡಿದ್ದರು. ತಂದೆ ಪ್ರವೀಣ್‌ಕುಮಾರ್‌ಗೂ ಈ ಸಂಬಂಧ ಮಾಹಿತಿ ನೀಡಿದ್ದರು. ಮತ್ತೊಂದೆಡೆ ಪೊಲೀಸರು ಚೇತನ್‌ ರೆಡ್ಡಿ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದರು.

ಸಿದ್ದರಾಮಯ್ಯರಿಂದ ಬುರುಡೆ ಬಿಡುವ ಕೆಲಸ: ಸಿ.ಟಿ.ರವಿ ಆರೋಪ

ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನ: ಸಂಪತ್‌ಕುಮಾರ್‌ ಹಾಸ್ಟೆಲ್‌ಗೆ ಬಂದು ಚೇತನ್‌ ರೆಡ್ಡಿಯನ್ನು ಕರೆದೊಯ್ದಿರುವ ವಿಚಾರವನ್ನು ಪ್ರವೀಣ್‌ಕುಮಾರ್‌, ಪುಷ್ಪಾವತಿಗೆ ತಿಳಿಸಿದ್ದಾನೆ. ಬಳಿಕ ಇಬ್ಬರು ಸಂಪತ್‌ಕುಮಾರ್‌ ಮನೆಗೆ ತೆರಳಿ ಮಗನ ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದಾನೆ. ಬಳಿಕ ನೀನೇ ಕರೆದೊಯ್ದಿರುವ ಬಗ್ಗೆ ಹಾಸ್ಟೆಲ್‌ನ ಮುಖ್ಯಸ್ಥರು ಮಾಹಿತಿ ನೀಡಿರುವುದಾಗಿ ಹೇಳಿದಾಗ, ಗಾಬರಿಗೊಂಡು ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಬಾಗಲೂರು ಠಾಣೆ ಪೊಲೀಸರು, ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆಸ್ಪತ್ರೆಗೆ ತೆರಳಿ ವಿಚಾರಣೆ ಮಾಡಿದಾಗ, ಚೇತನ್‌ ರೆಡ್ಡಿಯನ್ನು ತಾನೇ ಕೆರೆಗೆ ನೂಕಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಕೆರೆಯನ್ನು ಶೋಧಿಸಿದಾಗ ಚೇತನ್‌ ರೆಡ್ಡಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios