ಆದೇಶ್‌, ಅರ್ಚನಾಳನ್ನು ಕೋಪದಿಂದ ನಾಲ್ಕನೇ ಮಹಡಿಯಿಂದ ಜೋರಾಗಿ ನೂಕಿದ ಪರಿಣಾಮ ಕೆಳಗೆ ಬಿದ್ದ ಅರ್ಚನಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಳು.

ಬೆಂಗಳೂರು(ಮಾ.15):  ಇತ್ತೀಚೆಗೆ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಗನಸಖಿ ಮೃತಪಟ್ಟ ಘಟನೆ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಆಕೆಯ ಪ್ರಿಯಕರ ಆದೇಶ್‌ನನ್ನು ಬಂಧಿಸಿದ್ದಾರೆ.

ಗಗನಸಖಿ ಅರ್ಚನಾ ಧಿಮಾನ್‌(28) ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಪ್ರಿಯಕರ ಆದೇಶ್‌ ಆಕೆಯನ್ನು ನಾಲ್ಕನೇ ಮಹಡಿಯಿಂದ ನೂಕಿ ಕೊಲೆಗೈದಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್‌, ದುಬೈನಲ್ಲಿ ಗಗನಸಖಿಯಾಗಿದ್ದಳು. ಮಾ.6ರಂದು ಪ್ರಿಯಕರನ ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದಳು. ಮಾ.10ರಂದು ತಡರಾತ್ರಿ ಪ್ರಿಯಕರ ಆದೇಶ್‌ ಹಾಗೂ ಅರ್ಚನಾ ಕೋರಮಂಗಲದ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು.

ಬೆಂಗಳೂರು: ಅಪಾರ್ಟ್‌ಮೆಂಟ್‌ನ 4ನೇ ಫ್ಲೋರಿಂದ ಬಿದ್ದು ಗಗನಸಖಿ ಸಾವು, ಪ್ರಿಯಕರ ಪೊಲೀಸ್‌ ವಶಕ್ಕೆ

ನಂತರ ತಡರಾತ್ರಿ 12.30ರ ಸುಮಾರಿಗೆ ನಾಲ್ಕನೇ ಮಹಡಿ ಬಳಿ ನಿಂತು ಮಾತಾಡುವಾಗ ಮದುವೆ ವಿಚಾರದ ಪ್ರಸ್ತಾಪವಾಗಿದೆ. ಈ ವೇಳೆ ಅರ್ಚನಾ ಧಿಮಾನ್‌, ನಮ್ಮ ಮನೆಯಲ್ಲಿ ಮದುವೆಗೆ ಒತ್ತಾಯಿಸುತ್ತಿದ್ದಾರೆ. ಬೇಗ ನಿನ್ನ ಪೋಷಕರ ಬಳಿ ನಮ್ಮ ಪ್ರೀತಿಯ ವಿಚಾರ ಹೇಳಿ ತನ್ನನ್ನು ಮದುವೆಯಾಗುವಂತೆ ಹೇಳಿದ್ದಾಳೆ. ಮದುವೆಯಾಗಲು ಸಾಧ್ಯವಿಲ್ಲ. ಹೀಗೆ ಸ್ನೇಹಿತರಾಗಿ ಇರೋಣ ಎಂದು ಪ್ರಿಯಕರ ಆದೇಶ್‌ ಹೇಳಿದ್ದಾನೆ. ಆಗ ಅರ್ಚನಾ, ನೀನು ಹಲವು ಬಾರಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದೀಯ. ಈಗ ಮದುವೆ ಆಗಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ್ದಾಳೆ. ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಈ ವೇಳೆ ಆದೇಶ್‌, ಅರ್ಚನಾಳನ್ನು ಕೋಪದಿಂದ ನಾಲ್ಕನೇ ಮಹಡಿಯಿಂದ ಜೋರಾಗಿ ನೂಕಿದ ಪರಿಣಾಮ ಕೆಳಗೆ ಬಿದ್ದ ಅರ್ಚನಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಳು.

ತನಿಖೆಯ ಆರಂಭದಲ್ಲಿ ಆದೇಶ್‌, ಅರ್ಚನಾ ಮದ್ಯದ ನಶೆಯಲ್ಲಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಿಕೆ ನೀಡಿದ್ದ. ಮೃತಳ ಪೋಷಕರು ಆದೇಶ್‌ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ಆದೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ವರ್ಷದ ಹಿಂದೆ ಅರ್ಚನಾ ಮತ್ತು ಟೆಕ್ಕಿ ಆದೇಶ್‌ ಡೇಟಿಂಗ್‌ ಆ್ಯಪ್‌ ನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಅರ್ಚನಾ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆಗಾಗ ಬೆಂಗಳೂರಿಗೆ ಬಂದು ಪ್ರಿಯಕರ ಆದೇಶ್‌ ನನ್ನು ಭೇಟಿಯಾಗಿ ವಾಪಾಸಾಗುತ್ತಿದ್ದಳು. ಇತ್ತೀಚೆಗೆ ಆದೇಶ್‌, ಅರ್ಚನಾಳನ್ನು ನಿರ್ಲಕ್ಷ್ಯಿಸಲು ಆರಂಭಿಸಿದ್ದ. ಮದುವೆ ಆಗು ಎಂದಾಲೆಲ್ಲಾ ಸಬೂಬು ಹೇಳುತ್ತಿದ್ದ. ಈ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಅರ್ಚನಾ ಮನೆಯವರು ವರನ ಹುಡುಕಾಟದಲ್ಲಿ ತೊಡಗಿದ್ದರು. ಹೀಗಾಗಿ ಅರ್ಚನಾ ಈ ವಿಚಾರವನ್ನು ಪ್ರಿಯಕರ ಆದೇಶ್‌ಗೆ ತಿಳಿಸಿ, ಬೇಗ ಮದುವೆಯಾಗುವಂತೆ ಹೇಳಲು ದುಬೈನಿಂದ ಬೆಂಗಳೂರಿಗೆ ಬಂದಿದ್ದಳು.