ರಸ್ತೆಯಲ್ಲಿ ಬೀದಿ ನಾಯಿ ಅಟ್ಟಿಸಿಕೊಂಡು ಬಂದಿದ್ದಕ್ಕೆ ವಿನಾಕಾರಣ ವೃದ್ಧರೊಬ್ಬರ ಜತೆಗೆ ಜಗಳ ತೆಗೆದು ಚಾಕುವಿನಿಂದ ಇರಿದಿದ್ದ ಪ್ರಕರಣ ಸಂಬಂಧ ಮಲ್ಲೇಶ್ವರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಬೆಂಗಳೂರು (ಆ.28): ರಸ್ತೆಯಲ್ಲಿ ಬೀದಿ ನಾಯಿ ಅಟ್ಟಿಸಿಕೊಂಡು ಬಂದಿದ್ದಕ್ಕೆ ವಿನಾಕಾರಣ ವೃದ್ಧರೊಬ್ಬರ ಜತೆಗೆ ಜಗಳ ತೆಗೆದು ಚಾಕುವಿನಿಂದ ಇರಿದಿದ್ದ ಪ್ರಕರಣ ಸಂಬಂಧ ಮಲ್ಲೇಶ್ವರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಹುಲಿಯೂರುದುರ್ಗ ಮೂಲದ ರಾಜು (57) ಬಂಧಿತ. ಆರೋಪಿಯು ಆ.21ರಂದು ರಾತ್ರಿ 8ರ ಸುಮಾರಿಗೆ ಮಲ್ಲೇಶ್ವರದ ಗಣೇಶ ದೇವಸ್ಥಾನದ ಬಳಿ ಬಾಲಸುಬ್ರಹ್ಮಣ್ಯ(62) ಎಂಬುವವರಿಗೆ ಚಾಕುನಿಂದ ಇರಿದಿದ್ದ.

ಏನಿದು ಪ್ರಕರಣ: ದೂರುದಾರ ಬಾಲಸುಬ್ರಹ್ಮಣ್ಯ ಅವರು ಆ.21ರಂದು ರಾತ್ರಿ 8ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದರು. ಆರೋಪಿ ರಾಜು ಮುಂದೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಬಾಲಸುಬ್ರಹ್ಮಣ್ಯ ಅವರ ಹಿಂದೆ ಬರುತ್ತಿದ್ದ ಬೀದಿ ನಾಯಿಯೊಂದು ರಾಜುನನ್ನು ಕಂಡು ಬೊಗಳಲು ಶುರು ಮಾಡಿದೆ. ಇದರಿಂದ ರಾಜು ಗಾಬರಿಗೊಂಡು ತಿರುಗಿ ನೋಡಿದ್ದಾನೆ. ಈ ವೇಳೆ ಆ ನಾಯಿ ರಾಜುನನ್ನು ಅಟ್ಟಿಸಿಕೊಂಡು ಸ್ವಲ್ಪ ದೂರ ಹಿಂಬಾಲಿಸಿದೆ. ಬಳಿಕ ಆ ನಾಯಿ ರಸ್ತೆ ಇನ್ನೊಂದು ಬದಿಯ ಪಾದಾಚಾರಿ ಮಾರ್ಗದತ್ತ ಓಡಿ ಕಣ್ಮರೆಯಾಗಿದೆ.

ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್‌ ಲಾಡ್‌

ನಾಯಿ ಛೂ ಬಿಟ್ಟರೆಂದು ಭಾವಿಸಿದ: ಆದರೆ, ರಾಜು ತನ್ನ ಹಿಂದೆ ನಡೆದು ಬರುತ್ತಿದ್ದ ವೃದ್ಧನೇ ತನ್ನ ನಾಯಿಯನ್ನು ನನ್ನ ಮೇಲೆ ಛೂ ಬಿಟ್ಟಿದ್ದಾನೆ ಎಂದು ಭಾವಿಸಿ ಬಾಲಸುಬ್ರಹ್ಮಣ್ಯ ಅವರ ಬಳಿ ಏಕಾಏಕಿ ಜಗಳಕ್ಕೆ ಬಿದ್ದಿದ್ದಾನೆ. ಬಾಲಸುಬ್ರಹ್ಮಣ್ಯ ಅವರು ಮಾತನಾಡಲು ಅವಕಾಶ ನೀಡದೆ ತನ್ನ ಬಳಿ ಇದ್ದ ಚಾಕು ತೆಗೆದು ಕುತ್ತಿಗೆಗೆ ಇರಿಯಲು ಮುಂದಾದಾದರೂ ಅದು ದವಡೆಗೆ ಚುಚ್ಚಿದೆ. ಮತ್ತೊಮ್ಮೆ ಇರಿಯಲು ಮುಂದಾದಾಗ ಬಾಲಸುಬ್ರಹ್ಮಣ್ಯ ಬಲಗೈ ಕೈ ಅಡ್ಡ ಹಿಡಿದಿದ್ದಾರೆ. ಆಗ ಕೈ ಬೆರಳಿಗೆ ಗಾಯವಾಗಿದೆ. ಅಷ್ಟರಲ್ಲಿ ಬಾಲಸುಬ್ರಹ್ಮಣ್ಯ ಸಹಾಯಕ್ಕಾಗಿ ಕಿರುಚಾಡಿದ ಪರಿಣಾಮ ದಾರಿಹೋಕರು ಅತ್ತ ಓಡಿ ಬಂದಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿ ರಾಜು ಸ್ಥಳದಿಂದ ಪರಾರಿಯಾಗಿದ್ದಾನೆ.

ಇರಿತದಿಂದ ಗಾಯಗೊಂಡಿದ್ದ ಬಾಲಸುಬ್ರಹ್ಮಣ್ಯ ಅವರನ್ನು ಸ್ಥಳೀಯರು ಕೆ.ಸಿ.ಜನರಲ್‌ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಮಲ್ಲೇಶ್ವರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ರಾಜುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌಜನ್ಯ ಕೇಸ್‌ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ

ಇಬ್ಬರೂ ಅನಾಥರು!: ಚಾಕು ಇರಿತಕ್ಕೆ ಒಳಗಾದ ಬಾಲಸುಬ್ರಹ್ಮಣ್ಯ ಹಾಗೂ ಆರೋಪಿ ರಾಜುವಿಗೆ ಮಡದಿ-ಮಕ್ಕಳು ಯಾರೂ ಇಲ್ಲ. ಹಲವು ವರ್ಷಗಳಿಂದ ನಗರದಲ್ಲಿ ಓಡಾಡಿಕೊಂಡು ರಸ್ತೆ ಬದಿಯ ಅಂಗಡಿಗಳು ಹಾಗೂ ಕಚೇರಿಗಳ ಜಗಲಿಗಳ ಮೇಲೆ ರಾತ್ರಿ ವೇಳೆ ಮಲಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.