ಬೆಂಗಳೂರು(ಡಿ.22): ಕೋ ಅಪರೇಟಿವ್‌ ಸೊಸೈಟಿಯ ಅಕೌಂಟೆಂಟ್‌ ಸೊಸೈಟಿಗೆ ಸೇರಿದ 2.76 ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ದಿ ಬೆಂಗಳೂರು ಮೋಟಾರ್‌ ಓನರ್ಸ್‌ ಕನ್ಸೂಮರ್ಸ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ ಸಂಸ್ಥೆಯಲ್ಲಿ ವಂಚನೆ ನಡೆದಿದೆ. ಸೊಸೈಟಿ ಕಾರ್ಯದರ್ಶಿ ಕೆ.ಎ.ಅನಿಲ್‌ ಕುಮಾರ್‌ ಎಂಬುವರು ನೀಡಿ ದೂರಿನ ಮೇರೆಗೆ ಸಂಸ್ಥೆ ಅಕೌಂಟೆಂಟ್‌ ಸತೀಶ್‌ ಕುಮಾರ್‌ ರೆಡ್ಡಿ(52) ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಶಂಕರಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪಿಎ​ಸ್‌ಐ ಹೆಸ​ರಿ​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿ​ಕೆ

ಪ್ರಕರಣದ ವಿವರ:

ಸೊಸೈಟಿಯ ಅಕೌಂಟೆಂಟ್‌ ಆಗಿದ್ದ ಆರೋಪಿ ಸಂಘದ ವ್ಯವಹಾರದ ಲೆಕ್ಕ ಪುಸ್ತಕಗಳ ಜತೆಗೆ ಸಂಪೂರ್ಣ ಬ್ಯಾಂಕಿನ ವ್ಯವಹಾರದ ನಿರ್ವಹಣೆ ನೋಡಿಕೊಳ್ಳುತ್ತಿದ್ದ. ಕೊರೋನಾ ಬಳಿಕ ಬ್ಯಾಂಕಿನ ವ್ಯವಹಾರವನ್ನು ಲೆಕ್ಕ ಪರಿಶೋಧಕರ ವರದಿಯನ್ನು ಸಾಮಾನ್ಯ ಸಭೆಯಲ್ಲಿ ಆರ್ಥಿಕ ವರ್ಷದಲ್ಲಿ ಒಪ್ಪಿಸಬೇಕಾಗಿತ್ತು. ಅಂದಿನಿಂದ ಸತೀಶ್‌, ಕೆಲಸಕ್ಕೆ ಬಾರದೇ ಗೈರಾಗಿದ್ದ. ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದಾದ ಮೇಲೆ ಕರೊನಾ ದೃಢವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಗಿ ಹೇಳಿದ್ದರು. ಸಂಘದ ಬ್ಯಾಂಕ್‌ ಖಾತೆಗೂ ಚಾಮರಾಜಪೇಟೆ ಶಾಖೆ ಬ್ಯಾಂಕಿನ ಖಾತೆಗೂ ತಾಳೆ ಮಾಡಿದಾಗ ಅಕ್ರಮ ನಡೆದಿರುವುದು ಗೊತ್ತಾಯಿತು.

ಸತೀಶ್‌, ಆದಾಯ ತೆರಿಗೆ ಇಲಾಖೆ, ವೃತ್ತಿ ತೆರಿಗೆ ಮತ್ತು ಇನ್ನಿತರ ಸರ್ಕಾರಿ ಇಲಾಖೆಗಳಿಗೆ ಹಣ ಪಾವತಿ ಮಾಡಬೇಕೆಂದು ತನ್ನ ಹೆಸರಿಗೆ ಡಿಮ್ಯಾಂಡ್‌ ಡ್ರಾಫ್ಟ್‌ ಮತ್ತು ಚೆಕ್‌ಗಳಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾರೆ. 2019-20 ಸಾಲಿನಲ್ಲಿ 1.98 ಕೋಟಿ ಹಾಗೂ 2020ರ ಏಪ್ರಿಲ್‌ನಿಂದ ನ.1ರ ವರೆಗೆ 78 ಲಕ್ಷ ಸೇರಿ ಒಟ್ಟು 2.76 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.