ಬೆಂಗಳೂರು(ಅ.11): ರಾಮಮೂರ್ತಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಯ್ಸಳ ನಗರದಲ್ಲಿ ಬ್ಯೂಟಿ ಸಲೂನ್‌ ಮತ್ತು ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ದಂಧೆಯಲ್ಲಿ ಸಿಲುಕಿದ್ದ ಐವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಬ್ಯೂಟಿ ಸಲೂನ್‌ ಹಾಗೂ ಮತ್ತು ಸ್ಪಾ ಮಾಲೀಕನಾದ ಮಠದಹಳ್ಳಿ ನಿವಾಸಿ ಅನೂಪ್‌ ನೈರ್‌ (27) ಮತ್ತು ಬಿಲ್ಡಿಂಗ್‌ ಮಾಲೀಕ ಬೆನ್ಸನ್‌ ಟೌನ್‌ನ ಅಣ್ಣಯ್ಯಪ್ಪ ಬ್ಲಾಕ್‌ನ ಜಯರಾಂ (59) ಬಂಧಿತರು. ಗಿರಾಕಿ ಉಮ್ಮರ್‌ನಗರ ನಿವಾಸಿ ನವಾಜ್‌ ಖಾನ್‌ ಸಿದ್ದಿಕಿ (34) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆರೋಪಿಗಳಿಂದ ಎರಡು ಮೊಬೈಲ್‌ ಫೋನ್‌, 2 ಸಾವಿರ ರು.ನಗದು ಹಾಗೂ ಮೂರು ಕಾಂಡೋಮ್‌ ಜಪ್ತಿ ಮಾಡಿದ್ದಾರೆ.

ಆರೋಪಿಗಳು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕೆಲಸ ಹಾಗೂ ಅಪಾರ ಹಣದ ಆಸೆ ತೋರಿಸಿ ಹೊರರಾಜ್ಯದ ಯುವತಿಯರನ್ನು ಕರೆತಂದು ಬ್ಯೂಟಿ ಸಲೂನ್‌ ಮತ್ತು ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಟೀಲಿ ಡ್ರಗ್ಸ್‌ ಜತೆ ವೇಶ್ಯಾವಾಟಿಕೆ: ವಿದೇಶಿಗರಿಗೆ ಹುಡುಗಿಯರ ಪೂರೈಕೆ

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ

ಕೋರಮಂಗಲದ ಅಶ್ವಿನಿ ಪೈ ಲೇಔಟ್‌ನ ಇಂಟರ್‌ ಮೀಡಿಯೇಟ್‌ ರಿಂಗ್‌ ರಸ್ತೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ದಂಧೆಯಲ್ಲಿ ಸಿಲುಕಿದ್ದ ಹೊರರಾಜ್ಯದ ಏಳು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
ಇಕೋ ಬಾಡಿ ಸ್ಪಾ ಅಂಡ್‌ ಸಲೂನ್‌ ಮಾಲೀಕನಾಗಿರುವ ಆರೋಪಿ ಸಿದ್ಧಾರ್ಥ್‌ ಅಲಿಯಾಸ್‌ ಬಿನು ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ದಾಳಿ ವೇಳೆ 30 ಸಾವಿರ ರು.ನಗದು, ಡೆಬಿಟ್‌ ಕಾರ್ಡ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಸ್ವೈಪಿಂಗ್‌ ಮಷಿನ್‌, ಮೊಬೈಲ್‌ ಜಪ್ತಿ ಮಾಡಲಾಗಿದೆ.

ಸ್ಪಾ ಅಂಡ್‌ ಸಲೂನ್‌ ನಡೆಸುತ್ತಿದ್ದ ಆರೋಪಿ ಹೊರರಾಜ್ಯದ ಯುವತಿಯರಿಗೆ ಹಣದ ಆಮಿಷವೊಡ್ಡಿ ನಗರಕ್ಕೆ ಕರೆಸಿ ಅಕ್ರಮವಾಗಿ ಇರಿಸಿಕೊಂಡು ವೇಶ್ಯಾವಾಟಿಕೆಗೆ ನೂಕಿದ್ದ. ಸ್ಪಾಗೆ ಬರುವ ಗಿರಾಕಿಗಳಿಂದ ಸಾವಿರಾರು ರು. ಪಡೆದು ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದ. ಆರೋಪಿ ಸಂಘಟಿತ ರೀತಿಯಲ್ಲಿ ತನ್ನದೇ ಜಾಲ ಸೃಷ್ಟಿಸಿಕೊಂಡು ಈ ದಂಧೆಯಲ್ಲಿ ತೊಡಗಿದ್ದು, ವಿಸ್ತಾರವಾದ ಜಾಲ ಹೊಂದಿದ್ದಾನೆ. ಆರೋಪಿ ಬಂಧನ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.