ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ಶಿಕ್ಷಕಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಚಿನ್ನಾಭರಣ ಕದ್ದಿದ್ದಾರೆ. ₹14.3 ಲಕ್ಷ ಮೌಲ್ಯದ 143 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಜೆ.ಪಿ.ನಗರದಲ್ಲಿ ನಡೆದ ಈ ಘಟನೆಯಲ್ಲಿ ಮನೆಕೆಲಸದಾಳು ಶಾಂತಿ ಬಂಧಿತಳಾಗಿದ್ದಾಳೆ.

ಬೆಂಗಳೂರು (ಜೂ.25): ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಶಿಕ್ಷಕಿ ಮನೆಯಲ್ಲಿ ಚಿನ್ನಾಭರಣ ಕದ್ದು ಮಹಿಳೆಯೊಬ್ಬರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ರಾಗಿಗುಡ್ಡದ ನಿವಾಸಿ ಶಾಂತಿ ಅಲಿಯಾಸ್ ಶಾಂತಮ್ಮ ಬಂಧಿತರಾಗಿದ್ದು, ಆರೋಪಿಯಿಂದ ₹14.3 ಲಕ್ಷ ಮೌಲ್ಯದ 143 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜೆ.ಪಿ.ನಗರದ 2ನೇ ಹಂತದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಬಗ್ಗೆ ದೂರು ದಾಖಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಜೆ.ಪಿ.ನಗರ ಠಾಣೆ ಪೊಲೀಸರು, ಶಂಕೆ ಮೇರೆಗೆ ಮನೆ ಕೆಲಸದಾಳು ಶಾಂತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

ಹಲವು ವರ್ಷಗಳಿಂದ ಜೆ.ಪಿ.ನಗರದ 2ನೇ ಹಂತದಲ್ಲಿ ಶಿಕ್ಷಕಿ ಆಯೇಷಾ ಕುಟುಂಬ ನೆಲೆಸಿದ್ದು, ಇವರ ಮನೆಯಲ್ಲಿ ಶಾಂತಿ ಕೆಲಸಕ್ಕಿದ್ದಳು. ಮನೆಯೊಡತಿಗೆ ಗೊತ್ತಾಗದಂತೆ 4 ಚಿನ್ನದ ಬಳೆಗಳು ಹಾಗೂ ಒಂದು ನೆಕ್ಲೇಸ್‌ ಅನ್ನು ಆಕೆ ಕಳವು ಮಾಡಿ ಮಾರಾಟ ಮಾಡಿದ್ದಳು. ಸಂಬಂಧಿಕರ ಮದುವೆಗೆ ಹೋಗಲು ಆಭರಣ ನೋಡಿದಾಗ ಆಯೇಷಾಗೆ ಕಳ್ಳತನದ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಜೆ.ಪಿ.ನಗರ ಠಾಣೆಗೆ ಮನೆ ಕೆಲಸದಾಳು ಮೇಲೆ ಶಂಕಿಸಿ ಅವರು ದೂರು ನೀಡಿದ್ದರು. ಅದರಂತೆ ಮನೆಕೆಲಸದಾಳು ಶಾಂತಿಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದಾಗ ಕಳ್ಳತನ ಪತ್ತೆಯಾಗಿದೆ. ತನ್ನ ಮಗಳ ಮದುವೆಗೆ ₹5 ಲಕ್ಷ ಸಾಲ ಮಾಡಿಕೊಂಡಿದ್ದೆ. ಈ ಆರ್ಥಿಕ ಸಂಕಷ್ಟದಿಂದ ಸಾಲ ತೀರಿಸಲು ಮನೆಯೊಡತಿ ಆಭರಣ ಕಳವು ಮಾಡಿದ್ದಾಗಿ ಆಕೆ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.