ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾನಗಲ್ ತಾಲೂಕಿನ ಮನೋಹರ ಬಪ್ಪಣ್ಣ ಸಂಕಪಾಳೆ (55) ಮೂಲವ್ಯಾಧಿಯಿಂದ ಬಳಲುತ್ತಿದ್ದು, ಮನನೊಂದು ಜಲಾಶಯಕ್ಕೆ ಹಾರಿದ್ದಾರೆ.
ಮುಂಡಗೋಡ (ಜು.13): ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಶನಿವಾರ ನಡೆದಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮನೋಹರ ಬಪ್ಪಣ್ಣ ಸಂಕಪಾಳೆ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಕೆಲ ದಿನಗಳಿಂದ ಈತ ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದ. ಕಾಯಿಲೆ ವಾಸಿಯಾಗದ ಕಾರಣ ಮನನೊಂದು ಇಂತಹ ಅನಾಹುತ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾವೇರಿ ನದಿಗೆ ಹಾರಿದ್ದ ಯುವತಿ ಮೃತದೇಹ ಪತ್ತೆ:
ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದ ಯುವತಿ ಸಿಂಚನ ಮೃತ ದೇಹ ಶನಿವಾರ ಪತ್ತೆಯಾಯಿತು.
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ದಕ್ಷಿಣ ಕಾವೇರಿ ನದಿ ಸೇತುವೆ ಮೇಲಿಂದ ಮಂಗಳವಾರ ತಡರಾತ್ರಿ ಹಾರಿ ಯುವತಿ ಸಿಂಚನ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೂರು ದಿನಗಳ ಬಳಿಕ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ನದಿಯಲ್ಲಿ ನೀರು ಕಡಿಮೆಯಾಗಿದ್ದು, ಮೀನುಗಾರರ ಬಲೆಗೆ ಮೃತ ದೇಹ ಸಿಕ್ಕಿದೆ. ನದಿಯಲ್ಲಿದ್ದ ಮೃತ ದೇಹವವನ್ನು ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ, ಮೃತ ದೇಹದ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
