Accident ಯುವತಿಯ ದುರಂತ ಸಾವು, ಜನ್ಮದಿನವೇ ಸಾವಿನ ದಿನವಾಯ್ತು
* ಗೆಳೆಯನ ಹಿಂದೆ ಹೋಗಿ ಹೆಣವಾದಳು
* ಯುವತಿಯ ಜನ್ಮದಿನವೇ ಸಾವಿನ ದಿನವಾಯ್ತು
* ಮನೆಮಾರಲು ಯತ್ನಿಸಿದ ಮಗನನ್ನ ಕೊಂದ ತಾಯಿ
ಬೆಂಗಳೂರು, (ಜ.21): ಮನುಷ್ಯನಿಗೆ ಸಾವು ಹೇಗೆ? ಯಾವ ಸಂದರ್ಭದಲ್ಲಿ ಬರುತ್ತೆ ಎನ್ನುವುದು ಗೊತ್ತಾಗುವುದಿಲ್ಲ. ಬೆಂಗಳೂರಿನ ಯುವತಿಗೆ ಜನ್ಮದಿನವೇ ಸಾವಿನ ದಿನವಾಗಿದೆ.
ಹೌದು...ಇಂದು(ಜ.21) ಬೆಂಗಳೂರಿನ (Bengaluru) ಮಹಶ್ರೀ ಎನ್ನುವ ಯುವತಿಗೆ ಜನ್ಮದಿನ. ಜನ್ಮದಿನದಂದ ಕೆಲಸ ಹೋಗುವುದು ಬೇಡ ಎಂದು ಪೋಷಕರು ಹೇಳಿದ್ದಾರೆ. ಆದ್ರೆ, ಅವರ ಮಾತು ಕೇಳದೇ ಕೆಲಸಕ್ಕೆ ಅಂತ ಹೋದವಳು ವಾಪಸ್ ಹೆಣವಾಗಿ ಬಂದಿದ್ದಾಳೆ.
Suvarna FIR : ಸಾಲ, ಅಕ್ರಮ ಸಂಬಂಧ, ಕೊಣನೂರು ಲಾಡ್ಜ್ ನಲ್ಲಿ ಸಿಕ್ತು ಮೃತದೇಹ
ಇಂಥದ್ದೊಂದು ದುರಂತ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದೆ. ಮನೆಯವರು ಬೇಡ ಎಂದರೂ ಕೇಳದೆ ಹೋಗಿದ್ದವಳು ಸಾವಿಗೀಡಾದಂಥ ಪ್ರಕರಣವೊಂದು ಸಂಭವಿಸಿದೆ
ಮಹಶ್ರೀ ಸಾವಿಗೀಡಾದ ಯುವತಿ. ಈಕೆ ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಜತೆಗೆ ಪಾರ್ಟ್ಟೈಮ್ ಆಗಿ ಟೆಕ್ಸ್ಟೈಲ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಇವತ್ತು ಜನ್ಮದಿನದ ಖುಷಿಯಲ್ಲಿ ಈಕೆ ಹೊರಗೆ ಹೋಗಿದ್ದು, ಮನೆಯವರ ಪಾಲಿಗಂತೂ ಅದು ಶೋಕದ ದಿನವಾಗಿ ಪರಿಣಮಿಸಿದೆ.
ಇವತ್ತು ಜನ್ಮದಿನವಾದ್ದರಿಂದ ಕೆಲಸಕ್ಕೆ ಹೋಗಬೇಡ, ಮನೆಯಲ್ಲೇ ಇರು..' ಎಂದು ಪಾಲಕರು ಹೇಳಿದ್ದರು. ಆದರೂ ಕೇಳದ ಈಕೆ ಕೆಲಸಕ್ಕೆ ಹೊರಟಿದ್ದಳು. ನ್ಯೂ ಬಿಇಎಲ್ ಬಸ್ ನಿಲ್ದಾಣದವರೆಗೂ ಚಿಕ್ಕಪ್ಪನೇ ಈಕೆಯನ್ನು ಬಿಟ್ಟು ಬಂದಿದ್ದರು. ಆದರೆ ಆ ನಂತರ ದುರಂತವೊಂದು ಸಂಭವಿಸಿದೆ.
ಅಲ್ಲಿಂದ ಈಕೆ ಗೆಳೆಯನ ಜತೆ ಬೈಕ್ನಲ್ಲಿ ಹೋಗಿದ್ದಳು. ಆಗ ಮಾರ್ಗಮಧ್ಯೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಅದೇ ಸಮಯಕ್ಕೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ವಾಹನ ಯುವತಿಯ ಮೇಲೆ ಸಾಗಿದೆ. ಇದರಿಂದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಸ್ಥಳಕ್ಕೆ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕ್ಯಾಂಟರ್ ಡ್ರೈವರ್ ಹಾಗೂ ಯುವತಿಯ ಗೆಳೆಯನನ್ನು ವಿಚಾರಣೆ ನಡೆಸಿದ್ದಾರೆ.
ಮನೆಮಾರಲು ಯತ್ನಿಸಿದ ಮಗನನ್ನ ಕೊಂದ ತಾಯಿ
ಮದ್ಯವ್ಯಸನದ ಜೊತೆ ಇಸ್ಪೀಟ್ ಶೋಕಿಯೂ ಇದ್ದ ಮಗ ಮನೆಯನ್ನೇ ಮಾರಲು ಮುಂದಾದಾಗ ತಾಯಿಯೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ಶುಕ್ರವಾರ ನಡೆದಿದೆ. ಮನೆ ಮಾರಾಟಕ್ಕೆ ತಾಯಿ, ಅಕ್ಕ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಜಗಳವು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ಅಮರೀಶ್ (43) ಎಂದು ಗುರುತಿಸಲಾಗಿದೆ. ಈತನ ತಾಯಿ ಲಕ್ಷ್ಮೀ, ಅಕ್ಕ ನಿರ್ಮಲಾ ಹಾಗೂ ಸೋದರ ಅಳಿಯ ಸಂತೋಷ್ ಕೊಲೆ ಆರೋಪಿಗಳು. ಮೃತ ಅಮರೇಶ್ನ ಪತ್ನಿ ಸೌಭಾಗ್ಯ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ನಾಟಿ ಔಷಧ ಪಡೆಯಲು ಬಂದ ಮಹಿಳೆಯ ಹತ್ಯೆಗೈದ
ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ಚಿನ್ನದ ಸರಕ್ಕಾಗಿ ಮಹಿಳೆಯೋರ್ವರನ್ನು ಹತ್ಯೆ ಮಾಡಿರುವ ಪ್ರಕರಣ ನಡೆದಿದೆ. ಸಿದ್ದಮ್ಮ (55) ಅವರನ್ನು ಹತ್ಯೆಗೈದು, ಸರ ಕಸಿದು ಸಲೀಂ (50) ಎಂಬಾತ ಪರಾರಿಯಾಗಿದ್ದಾನೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿದ್ದಮ್ಮ ಆರೋಪಿ ಸಲೀಂ ಬಳಿ ನಾಟಿ ಔಷಧಿ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ ನಿನ್ನೆ ಕೂಡ ಆರೋಪಿ ಮನೆಗೆ ಹೋಗಿದ್ದಾರೆ. ಈ ವೇಳೆ ಸಲೀಂ ಕೊಲೆ ಮಾಡಿ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ
ಬಿಹಾರ ಮೂಲದ ಸಲೀಂ 20 ವರ್ಷದಿಂದ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದ. ಊರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ, ಐದಾರು ವರ್ಷದಿಂದ ಶುಗರ್ ಖಾಯಿಲೆಗೆ ನಾಟಿ ಔಷಧಿ ಕೊಡುತ್ತಿದ್ದ. ಆದರೆ ಊರಲ್ಲಿದ್ದವರ ಜೊತೆಗೆ ಹೆಚ್ಚು ಒಡನಾಟ ಇರಲಿಲ್ಲ. ಮೃತ ಸಿದ್ದಮ್ಮ ಕೂಡ ಸಲೀಂ ಬಳಿ ನಾಟಿ ಔಷಧಿ ಪಡೆಯುತ್ತಿದ್ದರು. ಹಾಗೆಯೇ ನಿನ್ನೆ ಕೂಡ ಸಲೀಂ ಇದ್ದ ಮನೆಗೆ ನಾಟಿ ಔಷಧಿ ಪಡೆಯಲು ಬಂದಿದ್ದರು.
ಸಲೀಂ ಪತ್ನಿ ಜೊತೆಗೆ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದ. ನಿನ್ನೆ ಸಿದ್ದಮ್ಮ ಬರುವ ವೇಳೆಗೆ ಸಲೀಂ ಪತ್ನಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆ ಕತ್ತಲ್ಲಿದ್ದ ಚಿನ್ನದ ಸರ, ಓಲೆ, ಕಾಲು ಚೈನು ಕಳ್ಳತನ ಮಾಡಲಾಗಿದೆ. ಪ್ರಕರಣದ ಕುರಿತು ಮತ್ತಷ್ಟು ಅನುಮಾನಗಳಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.