ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ಪ್ರಿಯತಮೆಯ ಮನೆಯಲ್ಲಿ ಲೈವ್‌ಬ್ಯಾಂಡ್ ಪಾಲುದಾರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಜೂ.22): ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ಪ್ರಿಯತಮೆಯ ಮನೆಯಲ್ಲಿ ಲೈವ್‌ಬ್ಯಾಂಡ್ ಪಾಲುದಾರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು ರಸ್ತೆ ಅಡಕಮಾರನಹಳ್ಳಿ ನಿವಾಸಿ ನಾಗೇಶ್ (28) ಮೃತ ದುರ್ದೈವಿ. ನಗರದ ಸರ್ ಎಂ.ವಿ.ವಿಶ್ವೇಶ್ವರಯ್ಯ ಲೇಔಟ್ ಸಮೀಪದ ಮುದ್ದನಪಾಳ್ಯದಲ್ಲಿರುವ ಹೈದರಾಬಾದ್ ಮೂಲದ ತನ್ನ ಸ್ನೇಹಿತೆ ಮನೆಯಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ನಾಗೇಶ್, ತನ್ನ ಕುಟುಂಬದ ಜತೆ ಅಡಕಮಾರನಹಳ್ಳಿಯಲ್ಲಿ ನೆಲೆಸಿದ್ದ. ಏಳು ವರ್ಷಗಳ ಹಿಂದೆ ಲೈವ್‌ಬ್ಯಾಂಡ್‌ನಲ್ಲಿ ಹೈದರಾಬಾದ್ ಮೂಲದ ಯುವತಿಯ ಪರಿಚಯವಾಗಿ ಬಳಿಕ ಆತನಿಗೆ ಪ್ರೇಮವಾಗಿತ್ತು. ಈ ಗೆಳತಿಯ ಸಂಬಂಧದಲ್ಲಿ ನಾಲ್ಕು ವರ್ಷದ ಮಗನಿದ್ದಾನೆ. ತನ್ನ ಗೆಳೆಯನ ಜತೆ ಎಂ.ಜಿ.ರಸ್ತೆಯಲ್ಲಿ ಪಾಲುದಾರಿಕೆಯಲ್ಲಿ ನಾಗೇಶ್ ಲೈವ್‌ಬ್ಯಾಂಡ್ ನಡೆಸುತ್ತಿದ್ದ. ಆದರೆ ಇತ್ತೀಚೆಗೆ ಲೈವ್‌ಬ್ಯಾಂಡನ್ನು ಪೊಲೀಸರು ಬಂದ್ ಮಾಡಿಸಿದ್ದರು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಆತ, ಇದೇ ನೋವಿನಲ್ಲಿ ಮಂಗಳವಾರ ರಾತ್ರಿ 11.30ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನ ರಕ್ಷಣೆಗೆ ಧಾವಿಸಿದ ನಾಗೇಶ್ ಗೆಳತಿ, ನೇಣಿನ ಕುಣಿಕೆಯಿಂದ ಇಳಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ನಾಗೇಶ್ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ವಿದ್ಯುತ್ ದರ ಏರಿಕೆ: ಉತ್ತರ, ಮಧ್ಯ ಕರ್ನಾಟಕದಲ್ಲಿಂದು ಉದ್ಯಮ ಬಂದ್!
ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಡೆತ್‌ನೋಟ್ ಬರೆದಿಟ್ಟು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಸತ್ಯನಾರಾಯಣ ಕಂಪೌಂಡ್‌ನಲ್ಲಿ ನಡೆದಿದೆ. ನಿತಿನ್ ಪೂಜಾರಿ (36) ಮೃತರು. ಈತ ಬುಧವಾರ ಮಧ್ಯಾಹ್ನ ಮನೆಯ ಕೋಣೆಯೊಳಗೆ ಸೇರಿದ್ದನೆನ್ನಲಾಗಿದೆ. ನೆರೆಯ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಆತನ ತಾಯಿ ಬಂದು ಕೋಣೆಯ ಬಾಗಿಲು ಬಡಿದಿದ್ದು ಬಾಗಿಲ ಎಡೆಯಿಂದ ನೋಡಿದಾಗ ಮಗ ಫ್ಯಾನಿಗೆ ನೇಣು ಬಿಗಿದ ವಿಚಾರ ತಿಳಿದಿದೆ. ನಿತಿನ್ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ನನ್ನ ಸಾವಿಗೆ ವ್ಯಕ್ತಿಯೊಬ್ಬರೇ (ಹೆಸರು ಉಲ್ಲೇಖಿಸಿದ್ದಾರೆ) ನೇರ ಕಾರಣ ಎಂದು ಬರೆದಿರುವುದು ಕಂಡುಬಂದಿದೆ. ಈ ಮೊದಲು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎನ್ನಾಗಿದೆ. ಈತ ಅಕ್ಕ, ಭಾವ, ತಾಯಿಯನ್ನು ಅಗಲಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ಕಿಭಾಗ್ಯ ಕಾಂಗ್ರೆಸ್ ಸ್ವಯಂಕೃತ ಅಪರಾಧ, ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನ: ಎಚ್‌ಡಿಕೆ
ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ: ನಿಟ್ಟೆಯ ಎಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಗಾರಿನಲ್ಲಿ ಭಾನುವಾರ ನಡೆದಿದೆ. ಪುರಸಭಾ ವ್ಯಾಪ್ತಿಯ ಆಲಂಗಾರು ಆಶ್ರಯ ಕಾಲನಿಯ ನಿವಾಸಿ, ಎಸ್.ಎನ್.ಎಂ. ಪಾಲಿಟೆಕ್ನಿಕ್‌ನ ಉಪನ್ಯಾಸಕ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ (21) ಮೃತ ವಿದ್ಯಾರ್ಥಿ. ಹೆತ್ತವರು, ಮೊಬೈಲ್ ಬಳಕೆ ಕಡಿಮೆ ಮಾಡಿ ಚೆನ್ನಾಗಿ ಓದುವಂತೆ ಬುದ್ಧಿಮಾತು ಹೇಳಿದ್ದು, ಅದರಂತೆ ಸಾತ್ವಿಕ್ ಕೂಡಾ ಹೆಚ್ಚಾಗಿ ಓದುವತ್ತ ಗಮನ ಹರಿಸಿದ್ದ. ಆದರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದು, ಈ ಬಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
