ಮದುವೆ ಆಗುವುದಾಗಿ ನಂಬಿಸಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ ಯುವತಿಯ ಪ್ರಿಯಕರನೇ ತನ್ನ ನಾಲ್ವರು ಸ್ನೇಹಿತರಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿಸಿದ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು (ಜು.17) :  ಮದುವೆ ಆಗುವುದಾಗಿ ನಂಬಿಸಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ ಯುವತಿಯ ಪ್ರಿಯಕರನೇ ತನ್ನ ನಾಲ್ವರು ಸ್ನೇಹಿತರಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿಸಿದ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಸ್ಸಾಂ ಮೂಲದ 20 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಕೆಯ ಪ್ರಿಯಕರ ಶಾಹೀದ್‌ ಉದ್ದೀನ್‌ ಹಾಗೂ ಆತನ ನಾಲ್ವರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪದಡಿ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಶೀಲ ಶಂಕಿಸಿ ಪ್ರಿಯತಮೆಯ ಕೊಂ​​ದಿ​ದ್ದ ಪ್ರೇಮಿಯ ಬಂಧನ: ತಿಂಗಳ ಬಳಿಕ ಸಿಕ್ಕಿಬಿ​ದ್ದ ಕೊಲೆಗಾರ

ಅಸ್ಸಾಂ ಮೂಲದ ಸಂತ್ರಸ್ತೆ ಮತ್ತು ಆರೋಪಿ ಶಾಹೀದ್‌ ಕಳೆದ ವರ್ಷ ಪಾರ್ಕ್ವೊಂದರಲ್ಲಿ ಪರಸ್ಪರ ಪರಿಚಿತರಾಗಿ ಮೊಬೈಲ್‌ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಪ್ರೀತಿಸಲು ಆರಂಭಿಸಿದ್ದರು. ಆರೋಪಿ ಶಾಹೀದ್‌ ಮದುವೆ ಆಗುವುದಾಗಿ ಸಂತ್ರಸ್ತೆಯನ್ನು ನಂಬಿಸಿ ಕಳೆದ ಜೂನ್‌ನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ. ದೊಡ್ಡನಾಗಮಂಗಲದ ಬಾಡಿಗೆ ಮನೆಯಲ್ಲಿ ಸಂತ್ರಸ್ತೆಯನ್ನು ಇರಿಸಿ, ಸಂತ್ರಸ್ತೆಯ ವಿರೋಧದ ನಡುವೆಯೂ ಆಕೆ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಈ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದ.

ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ

ಕೆಲ ದಿನಗಳ ಬಳಿಕ ಶಾಹೀದ್‌ಗೆ ಬೇರೆ ಹೆಂಗಸಿನ ಜತೆಗೆ ಮದುವೆ ಆಗಿರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಯು ಬೆಲ್ಟ್‌ನಿಂದ ಹಲ್ಲೆ ನಡೆಸಿ ಮನೆಯ ರೂಮ್‌ನಲ್ಲಿ ಕೂಡಿ ಹಾಕಿದ್ದ. ಬಳಿಕ ನಾಲ್ವರು ಅಪರಿಚಿತರನ್ನು ಮನೆಗೆ ಕರೆಸಿ ಸಂತ್ರಸ್ತೆಯ ರೂಮ್‌ಗೆ ಕಳುಹಿಸಿದ್ದ. ಈ ವೇಳೆ ಸಂತ್ರಸ್ತೆ ಎಷ್ಟೇ ಬೇಡಿಕೊಂಡರೂ ಬಿಡದೆ ಸಾಮೂಹಿಕ ಅತ್ಯಾಚಾರ ಮಾಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಾಯ್‌ಫ್ರೆಂಡ್‌ ಜತೆಗಿದ್ದ ಯುವತಿಯ ವಿಡಿಯೋ ರೆಕಾರ್ಡ್‌: ಪೊಲೀಸ್‌ ಎಂದು ಬ್ಲ್ಯಾಕ್‌ಮೇಲ್‌ ಮಾಡಿ, ರೇಪ್‌ ಮಾಡಿದ ಪಾಪಿ!

ವೇಶ್ಯಾವಾಟಿಕೆ ದಂಧೆಗೆ ಇಳಿಸುವ ಉದ್ದೇಶದಿಂದ ಆರೋಪಿ ಶಾಹೀದ್‌ ಸಂತ್ರಸ್ತೆಯನ್ನು ಪ್ರೀತಿಸುವ ನಾಟಕವಾಗಿ ಮದುವೆ ಆಗುವುದಾಗಿ ನಂಬಿಸಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿರುವುದು ಗೊತ್ತಾಗಿದೆ. ಬಳಿಕ ಸಂತ್ರಸ್ತೆ ಮನೆಯಿಂದ ತಪ್ಪಿಸಿಕೊಂಡು ಹೊರಬಂದು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ಬಂದು ತನ್ನ ಮೇಲಾದ ಅತ್ಯಾಚಾರ ಹಾಗೂ ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಆರೋಪದಡಿ ಪ್ರಿಯಕರ ಶಾಹೀದ್‌ ಹಾಗೂ ಆತನ ಸ್ನೇಹಿತರ ವಿರುದ್ಧ ದೂರು ನೀಡಿದ್ದಾಳೆ.