ತಿಂಗಳ ಹಿಂದೆ ಶೀಲ ಶಂಕಿಸಿ ತನ್ನ ಪ್ರಿಯತಮೆ ಕೊಂದು ಪರಾರಿಯಾಗಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಕೊನೆಗೂ ಜೀವನ್‌ಭೀಮಾ ನಗರ (ಜೆ.ಬಿ) ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಬೆಂಗಳೂರು (ಜು.05): ತಿಂಗಳ ಹಿಂದೆ ಶೀಲ ಶಂಕಿಸಿ ತನ್ನ ಪ್ರಿಯತಮೆ ಕೊಂದು ಪರಾರಿಯಾಗಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಕೊನೆಗೂ ಜೀವನ್‌ ಭೀಮಾ ನಗರ (ಜೆ.ಬಿ) ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ದೆಹಲಿ ಮೂಲದ ಅರ್ಪಿತ್‌ ಗುರ್ಜಾಲ್‌ ಬಂಧಿತನಾಗಿದ್ದು, ಜೂ.5ರಂದು ತನ್ನ ಪ್ರಿಯತಮೆ ಕೋಡಿಹಳ್ಳಿ ನಿವಾಸಿ ಆಕಾಂಕ್ಷಾ ಬಿದ್ಯಾಸರಳನ್ನು (23) ಕತ್ತು ಹಿಸುಕಿ ಹತ್ಯೆಗೈದು ಆರೋಪಿ ಪರಾರಿಯಾಗಿದ್ದ. ಈ ಕೃತ್ಯ ಎಸಗಿದ ಬಳಿಕ ಅಸ್ಸಾಂ ಸೇರಿದಂತೆ ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್‌ ಗುಳೇದ್‌ ತಿಳಿಸಿದ್ದಾರೆ.

ಶೀಲ ಶಂಕಿಸಿ ಕೊಲೆ: ಎರಡು ವರ್ಷಗಳ ಹಿಂದೆ ನಗರದ ಖಾಸಗಿ ಕಂಪನಿಯಲ್ಲಿ ಹೈದರಾಬಾದ್‌ನ ಆಕಾಂಕ್ಷಾ ಹಾಗೂ ದೆಹಲಿ ಮೂಲದ ಅರ್ಪಿತ್‌ ಸಹೋದ್ಯೋಗಿಗಳಾಗಿದ್ದರು. ಆಗ ಪರಸ್ಪರ ಆತ್ಮೀಯ ಒಡನಾಟ ಬೆಳೆದು ಪ್ರೇಮಾಂಕುರವಾಗಿತ್ತು. ಆರಂಭದಲ್ಲಿ ಈ ಪ್ರೇಮಿಗಳು ಅನ್ಯೋನ್ಯವಾಗಿಯೇ ಇದ್ದರು. ಈ ನಡುವೆ ಹೈದರಾಬಾದ್‌ನ ಕಂಪನಿಗೆ ಅರ್ಪಿತ್‌ ಕೆಲಸಕ್ಕೆ ಸೇರಿದ್ದ. ಇತ್ತ ಆಕಾಂಕ್ಷಾ ಸಹ ಬೆಂಗಳೂರಿನಲ್ಲೇ ಇದ್ದು ಬೇರೆ ಕಂಪನಿಯಲ್ಲಿ ಉದ್ಯೋಗ ಪಡೆದು ತನ್ನ ಸ್ನೇಹಿತೆ ಜತೆ ಕೋಡಿಹಳ್ಳಿಯಲ್ಲಿ ನೆಲೆಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರತಿಪಕ್ಷ ನಾಯಕ, ಅಧ್ಯಕ್ಷ ಬಿಜೆಪಿ ಕಸರತ್ತು: ಅಭಿಪ್ರಾಯ ಪಡೆದು ವೀಕ್ಷಕರು ದಿಲ್ಲಿಗೆ ವಾಪಸ್‌

ಇತ್ತೀಚೆಗೆ ಮತ್ತೊಬ್ಬ ಯುವಕನ ಜತೆ ಆಕಾಂಕ್ಷಾಳಿಗೆ ಸ್ನೇಹವಾಗಿತ್ತು. ಈ ಗೆಳೆತನ ವಿಚಾರದಲ್ಲಿ ತಿಳಿದು ಕೆರಳಿದ ಅರ್ಪಿತ್‌, ತನ್ನನ್ನು ಮದುವೆ ಆಗುವಂತೆ ಪ್ರಿಯತಮೆಗೆ ಒತ್ತಾಯಿಸಿದ್ದ. ಅಲ್ಲದೆ ಒಂದು ಬಾರಿ ಹೈದರಾಬಾದ್‌ನಿಂದ ದಿಢೀರ್‌ ಬೆಂಗಳೂರಿಗೆ ಬಂದಿದ್ದ ಅರ್ಪಿತ್‌, ತನ್ನ ಗೆಳೆಯನೊಟ್ಟಿಗೆ ಆಕಾಂಕ್ಷಾ ಸಲುಗೆಯಿಂದ ಇದ್ದಿದ್ದನ್ನು ಕಣ್ಣಾರೆ ಕಂಡು ಮತ್ತಷ್ಟು ಕ್ರುದ್ಧಗೊಂಡಿದ್ದ. ಇದೇ ವಿಚಾರವಾಗಿ ಮಾತುಕತೆಗೆ ಜೂ.5ರಂದು ಗೆಳತಿಯನ್ನು ಹೈದರಾಬಾದ್‌ನಿಂದ ಬಂದು ಆತ ಭೇಟಿಯಾಗಿದ್ದ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಪ್ರಿಯತಮೆಯ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದ ಎಂದು ಪೊಲೀಸು ಹೇಳಿದ್ದಾರೆ.

ಸ್ನೇಹಿತನಿಗೆ ಕರೆ ಮಾಡಿ ಸಿಕ್ಕಿಬಿದ್ದ: ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ ಬಳಿಕ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತೆರಳಿ ದೆಹಲಿಗೆ ಟಿಕೆಟ್‌ ಪಡೆದು ಅರ್ಪಿತ್‌ ರೈಲು ಹತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿ ತನಿಖಾ ತಂಡ ಅಲ್ಲಿಗೆ ತೆರಳಿತು. ಆದರೆ ಅಷ್ಟರಲ್ಲಿ ಮಧ್ಯಪ್ರದೇಶದ ಭೂಪಾಲ್‌ನಲ್ಲೇ ರೈಲಿನಿಂದಿಳಿದು ಆತ ಅಸ್ಸಾಂ ರಾಜ್ಯಕ್ಕೆ ಪರಾರಿಯಾದ. ಬಳಿಕ ದೆಹಲಿಯಲ್ಲಿ ಅರ್ಪಿತ್‌ ತಾಯಿಯನ್ನು ವಿಚಾರಣೆ ನಡೆಸಿದ ತನಿಖಾ, ಆರೋಪಿಗೆ ಹುಡುಕಾಟ ಮುಂದುವರೆಸಿತು ಎಂದು ಭೀಮಾಶಂಕರ್‌ ತಿಳಿಸಿದ್ದಾರೆ.

ಗ್ಯಾರಂಟಿಗೆ ಬಿಜೆಪಿ ಹೋರಾಟ: ಬಿಎಸ್‌ವೈ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ

ಅರ್ಪಿತ್‌ ಪತ್ತೆಗಾಗಿ ಆತನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಮೇಲೂ ನಿಗಾವಹಿಸಲಾಗಿತ್ತು. ಅಲ್ಲದೆ ಆತನ ಬ್ಯಾಂಕ್‌ ಖಾತೆ ಕಾರ್ಯಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಖರ್ಚಿಗೆ ಹಣವಿಲ್ಲದೆ ಆತ ಪರದಾಡುವಂತಾಯಿತು. ಕೊನೆಗೆ ಇತ್ತೀಚೆಗೆ ಹಣಕ್ಕಾಗಿ ತನ್ನ ಸ್ನೇಹಿತನೊಬ್ಬನಿಗೆ ಆರೋಪಿ ಕರೆ ಮಾಡಿದ್ದ. ಈ ವಿಚಾರ ತಿಳಿದು ಜಾಗೃತರಾದ ಪೊಲೀಸರು, ಬೆಂಗಳೂರಿನಲ್ಲಿ ಸ್ನೇಹಿತನ ಭೇಟಿಗೆ ಬಂದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.