ವಿಜಯಪುರ: ಬಿಸಿಯೂಟದ ಅಕ್ಕಿ, ಸಾಮಗ್ರಿಗಳ ಕಳವು; 8 ಆರೋಪಿಗಳ ಬಂಧನ
ಬುರಣಾಪುರ, ಇಟ್ಟಂಗಿಹಾಳ ಹಾಗೂ ಹಿಟ್ನಳ್ಳಿ ಗ್ರಾಮಗಳ ಶಾಲೆಯ ಬಿಸಿಯೂಟ ಕೊಠಡಿಗೆ ಕನ್ನ ಹಾಕಿ ಪರಾರಿಯಾಗಿದ್ದ ಕಳ್ಳರು
ವಿಜಯಪುರ(ಅ.23): ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಬಿಸಿಯೂಟದ ಅಕ್ಕಿ ಸೇರಿದಂತೆ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ತಿಳಿಸಿದರು. ಶನಿವಾರ ಸಂಜೆ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬುರಣಾಪುರ, ಇಟ್ಟಂಗಿಹಾಳ ಹಾಗೂ ಹಿಟ್ನಳ್ಳಿ ಗ್ರಾಮಗಳ ಶಾಲೆಯ ಬಿಸಿಯೂಟ ಕೊಠಡಿಗೆ ಕನ್ನ ಹಾಕಿ ಕಳ್ಳರು ಪರಾರಿಯಾಗಿದ್ದರು ಎಂದರು.
ವಿಜಯಪುರ ತಾಲೂಕಿನ ಕನ್ನಾಳ ಗ್ರಾಮದ ಸರ್ಪಭೂಷಣ ಶರತಭೀಮಾಶಂಕರ ದೊಡಮನಿ (22), ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀಕಾಂತ ದೇವೇಂದ್ರೆಪ್ಪ ಕಟ್ಟಿಮನಿ (22), ಮಲ್ಲಿಕಾರ್ಜುನ ರಾಮಪ್ಪ ಮೋಪಗಾರ (21), ಸಂಜೀವಪ್ಪ ಉಫ್‌ರ್ ಸಂಜು ಮಾಳಪ್ಪ ಮ್ಯಾಗೇರಿ (22), ಸಚಿನ ಲಕ್ಷ್ಮಣ ಹುಣಶ್ಯಾಳ (22) ಹಾಗೂ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಸತೋಷ ಜಗದೀಶ ಹೊಸಕೋಟಿ (19) ಅಕ್ಕಿ ಕಳ್ಳರನ್ನು ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಕಳ್ಳತನದ ಅಕ್ಕಿ ಖರೀದಿಸುತ್ತಿದ್ದ ಮಿಂಚನಾಳ ತಾಂಡಾದ ರಾಹುಲ್ ಶಂಕರ ಪವಾರ (33), ವಿಜಯಪುರದ ಉಪ್ಪಲಿ ಬುರುಜ ಬಳಿಯ ನಾಗರಾಜ ಬಸವರಾಜ ಉಪ್ಪಿನ (41) ಎಂಬುವರನ್ನು ಬಂಧಿಸಲಾಗಿದೆ. ಈ ಪೈಕಿ ಇನ್ನೊಬ್ಬ ಆರೋಪಿ ಹಂಗರಗಿ ಗ್ರಾಮದ ಸಚಿನ ಅಲ್ಲಮಪ್ರಭು ಇಂಗಳೇಶ್ವರ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ತೀವ್ರ ಶೋಧನೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Vijayapura: ಮಹಾನಗರ ಪಾಲಿಕೆ ಚುನಾವಣೆ ನಡುವೆ ಮಾಟಮಂತ್ರದ ಕಾಟ!
ಗೂಡ್ಸ್ ವಾಹನಗಳಲ್ಲಿ ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಳಸಂತೆಯಲ್ಲಿ ಅಕ್ಕಿ ಮತ್ತಿತರ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ವಿಶೇಷ ತನಿಖಾ ತಂಡ ಹಠಾತ್ ದಾಳಿ ನಡೆಸಿ ಕನ್ನಾಳ ಕ್ರಾಸ್ ಬಳಿ ಬಿಸಿಯೂಟದ ಅಕ್ಕಿ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ಕಳ್ಳರು ಸಿಕ್ಕಿ ಬಿದ್ದಿದ್ದಾರೆ ಎಂದು ವಿವರಿಸಿದರು.
ಬಬಲೇಶ್ವರ, ಆದರ್ಶನಗರ, ಸಿಂದಗಿ, ಕಲಕೇರಿ, ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 13 ಪ್ರಕರಣಗಳಲ್ಲಿ ಬಿಸಿಯೂಟದ ಅಕ್ಕಿ ಮತ್ತಿತರ ದವಸ ಧಾನ್ಯಗಳನೇನು ಕಳ್ಳತನ ಮಾಡಿದ ಬಗ್ಗೆ ಬಂಧಿತ ಆರೋಪಿಗಳನ್ನು ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಆನಂದಕುಮಾರ ತಿಳಿಸಿದರು.
ಬಂಧಿತ ಆರೋಪಿಗಳಿಂದ . 2.70 ಲಕ್ಷ ಮೌಲ್ಯದ 50 ಕ್ವಿಂಟಲ್ ಅಕ್ಕಿ, . 2.24 ಲಕ್ಷ ಮೌಲ್ಯದ 15 ಕ್ವಿಂಟಲ್ ತೊಗರಿ ಬೇಳೆ, . 1.06ಲಕ್ಷ ನಗದು, . 8ಲಕ್ಷ ಮೌಲ್ಯದ ಅಶೋಕ ಲೇಲ್ಯಾಂಡ್ ಕಂಪನಿ ಮಿನಿ ಗೂಡ್ಸ್ ವಾಹನ, . 6.50 ಲಕ್ಷ ಮೌಲ್ಯದ ಇನ್ನೊಂದು ಮಿನಿ ಗೂಡ್ಸ್ ಹಾಗೂ . 4.50 ಲಕ್ಷ ಮೌಲ್ಯದ ಕ್ರೂಸರ್ ವಾಹನ ಸೇರಿದಂತೆ ಒಟ್ಟು . 25 ಲಕ್ಷ ಮೌಲ್ಯದ ಆಹಾರ ಸಾಮಗ್ರಿ ಹಾಗೂ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆನಂದಕುಮಾರ ತಿಳಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ದಿ, ಡಿಎಸ್ಪಿ ಸಿದ್ದೇಶ್ವರ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.