Asianet Suvarna News Asianet Suvarna News

ಬೆಂಗಳೂರು: ನಿಮ್ಮ ಹೆಸರಿಗೆ ಡ್ರಗ್ಸ್‌ ಬಂದಿದೆ ಎಂದು 1.8 ಕೋಟಿ ಸುಲಿಗೆ: 8 ಖದೀಮರು ಅರೆಸ್ಟ್‌..!

ದಾವಣಗೆರೆ ನಗರದ ಎನ್.ವಸೀಂ, ಎಂ.ಹಬೀಬುಲ್ಲಾ, ನಿಜಾಮುದ್ದೀನ್‌, ಮುಷಾರಫ್‌, ಫ್ರೇಜರ್ ಟೌನ್‌ನ ನೂರುಲ್ಲಾ ಖಾನ್‌, ಮೊಹಮ್ಮದ್‌ ಉಮರ್‌, ಸೈಯದ್ ಅಹಮದ್‌, ಸೈಯದ್ ಹುಸೇನ್‌ ಬಂಧಿತರು. ಆರೋಪಿಗಳಿಂದ ₹13.17 ಲಕ್ಷ ನಗದು, ಕೃತ್ಯಕ್ಕೆ ಬಳಸುತ್ತಿದ್ದ 11 ಮೊಬೈಲ್‌ ಫೋನ್‌ಗಳು, ಚೆಕ್‌ ಬುಕ್‌, ಪಾಸ್‌ಬುಕ್‌ ಹಾಗೂ ಎಟಿಎಂಗಳ ಜಪ್ತಿ. 

8 Arrested For Fraud Case to in the name of Marijuana in Bengaluru grg
Author
First Published Dec 2, 2023, 4:19 AM IST

ಬೆಂಗಳೂರು(ಡಿ.02): ಪ್ರತಿಷ್ಠಿತ ಕೊರಿಯರ್‌ ಕಂಪನಿಗೆ ಮಾದಕವಸ್ತು ಪಾರ್ಸೆಲ್‌ ಬಂದಿದೆ ಎಂದು ಮುಂಬೈ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಕೋಟ್ಯಂತರ ಹಣ ಸುಲಿಗೆ ಮಾಡುತ್ತಿದ್ದ ಸೈಬರ್‌ ವಂಚಕರ ಜಾಲವೊಂದನ್ನು ದೇಶದಲ್ಲಿ ಮೊದಲ ಬಾರಿಗೆ ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬೇಧಿಸಿದ್ದು, ಈ ಸಂಬಂಧ 8 ಮಂದಿಯ ಬಂಧಿಸಿದ್ದಾರೆ.

ದಾವಣಗೆರೆ ನಗರದ ಎನ್.ವಸೀಂ, ಎಂ.ಹಬೀಬುಲ್ಲಾ, ನಿಜಾಮುದ್ದೀನ್‌, ಮುಷಾರಫ್‌, ಫ್ರೇಜರ್ ಟೌನ್‌ನ ನೂರುಲ್ಲಾ ಖಾನ್‌, ಮೊಹಮ್ಮದ್‌ ಉಮರ್‌, ಸೈಯದ್ ಅಹಮದ್‌, ಸೈಯದ್ ಹುಸೇನ್‌ ಬಂಧಿತರು. ಆರೋಪಿಗಳಿಂದ ₹13.17 ಲಕ್ಷ ನಗದು, ಕೃತ್ಯಕ್ಕೆ ಬಳಸುತ್ತಿದ್ದ 11 ಮೊಬೈಲ್‌ ಫೋನ್‌ಗಳು, ಚೆಕ್‌ ಬುಕ್‌, ಪಾಸ್‌ಬುಕ್‌ ಹಾಗೂ ಎಟಿಎಂಗಳ ಜಪ್ತಿ ಮಾಡಲಾಗಿದೆ. ಅಂತೆಯೇ ವಿವಿಧ ಬ್ಯಾಂಕ್‌ ಖಾತೆಗಳಿದ್ದ ₹19 ಲಕ್ಷ ಹಾಗೂ 148 ವಿವಿಧ ಬ್ಯಾಂಕ್‌ ಖಾತೆಗಳ ಫ್ರೀಜ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ: ಸೆಂಟ್ರಲ್‌ ಜೈಲಿನಲ್ಲಿ ಗಾಂಜಾ ಸರಬರಾಜಿಗೆ ಯತ್ನ

ಇತ್ತೀಚೆಗೆ ಮಲ್ಲೇಶ್ವರದ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ಎಂದು ಕರೆ ಮಾಡಿ ಫೆಡೆಕ್ಸ್‌ ಕೊರಿಯರ್‌ನಲ್ಲಿ ನಿಮ್ಮ ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರ ವಸ್ತುಗಳು ಬಂದಿವೆ. ತನಿಖೆಗಾಗಿ ಬ್ಯಾಂಕ್‌ ದಾಖಲೆಗಳು ಹಾಗೂ ಹಣ ನೀಡಬೇಕು ಎಂದು ಹೇಳಿ ವಿವಿಧ ಹಂತಗಳಲ್ಲಿ ₹1.8 ಕೋಟಿ ಹಣ ವರ್ಗಾಯಿಸಿ ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ.

ಪ್ರಕರಣದ ವಿವರ:

ಮಲ್ಲೇಶ್ವರದ ವ್ಯಕ್ತಿಯೊಬ್ಬರಿಗೆ ನ.10ರಂದು ಅಪರಿಚಿತ ವ್ಯಕ್ತಿಯಿಂದ ವಾಟ್ಸಾಪ್‌ ಆಡಿಯೋ ಕಾಲ್‌ ಬಂದಿದೆ. ಆತ ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಅನಂತರ ನಿಮ್ಮ ಪತ್ನಿ ಹೆಸರಿನಲ್ಲಿ ಫೆಡೆಕ್ಸ್‌ ಕೊರಿಯರ್‌ನಲ್ಲಿ ಮುಂಬೈನಿಂದ ಥೈಲ್ಯಾಂಡ್‌ಗೆ ಕಳುಹಿಸುತ್ತಿದ್ದ ನಾಲ್ಕು ಅವಧಿ ಮೀರಿದ ಪಾಸ್‌ಪೋರ್ಟ್‌, 2.35 ಕೆ.ಜಿ. ಬಟ್ಟೆಗಳು, 2 ಪೆನ್‌ ಡ್ರೈವ್‌, 1 ಲ್ಯಾಪ್‌ಟಾಪ್‌, ಕ್ರೆಡಿಟ್‌ ಕಾರ್ಡ್‌, ಬ್ಯಾಂಕ್‌ ದಾಖಲಾತಿಗಳು, 140 ಗ್ರಾಂ ಎಂಡಿಎಂಎ ಮಾದಕವಸ್ತುಗಳು ಸಿಕ್ಕಿವೆ. ಅಲ್ಲದೆ, ನಿಮ್ಮ ಹೆಸರಿನಲ್ಲಿ ಹಲವು ಬ್ಯಾಂಕ್‌ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾಯಿಸಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಆರ್‌ಬಿಐ ನಿಮ್ಮ ಬ್ಯಾಂಕ್‌ ಖಾತೆಯನ್ನು ಫ್ರೀಜ್‌ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾನೆ.

ದುಷ್ಕರ್ಮಿಗಳಿಗೆ ₹1.8 ಕೋಟಿ ವರ್ಗ:

ತನಿಖೆ ಹಿನ್ನೆಲೆಯಲ್ಲಿ ನಿಮ್ಮ ಬ್ಯಾಂಕ್‌ ಸ್ಟೇಟೆಮೆಂಟ್‌ ಪರಿಶೀಲಿಸಬೇಕು ಮತ್ತು ತನಿಖಾ ವಿಚಾರಣೆಗಾಗಿ ಮುಂಗಡವಾಗಿ ನೀವು ಹಣ ನೀಡಬೇಕು. ತನಿಖೆ ಮುಗಿದ ಬಳಿಕ ಆ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುವುದಾಗಿ ಹೇಳಿ ಬ್ಯಾಂಕ್‌ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಈತನ ಮಾತು ನಂಬಿದ ದೂರುದಾರ, ವಿವಿಧ ಹಂತಗಳಲ್ಲಿ ಒಟ್ಟು ₹1.8 ಕೋಟಿಯನ್ನು ದುಷ್ಕರ್ಮಿಗಳು ನೀಡಿದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ.

ಹಣ ವರ್ಗಾವಣೆಯಾದ ಬಳಿಕ ದುಷ್ಕರ್ಮಿಗಳು ಯಾವುದೇ ಕರೆ ಮಾಡಿಲ್ಲ. ಬಳಿಕ ದೂರುದಾರರಿಗೆ ಅನುಮಾನ ಬಂದು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಈ ಪ್ರಕರಣ ಭೇದಿಸಲು ಮಲ್ಲೇಶ್ವರದ ಉಪವಿಭಾಗದ ಎಸಿಪಿ ಮೇರಿ ಶೈಲಜಾ ಮತ್ತು ಸೈಬರ್‌ ಕ್ರೈಂ ಠಾಣೆ ಇನ್‌ಸ್ಪೆಕ್ಟರ್‌ ಶಿವರತ್ನ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. 

ದಾವಣಗೆರೆ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿ ವಿತ್‌ ಡ್ರಾ!

ಪ್ರಕರಣದ ತನಿಖೆ ಇಳಿದ ಪೊಲೀಸರು ದೂರುದಾರರ ಹಣ ವರ್ಗಾವಣೆಯಾಗಿದ್ದ ದುಷ್ಕರ್ಮಿಗಳ ಬ್ಯಾಂಕ್‌ ಖಾತೆ ವಿವರಗಳನ್ನು ಪರಿಶೀಲಿಸಿದಾಗ ಆ ಖಾತೆಗೆ ₹9.34 ಲಕ್ಷ ಹಣ ಜಮೆ ಆಗಿರುವುದು ಕಂಡು ಬಂದಿದೆ. ಈ ಹಣವನ್ನು ದಾವಣೆಗೆರೆಯ ಆರ್‌ಬಿಎಲ್‌ ಬ್ಯಾಂಕ್‌ನಿಂದ ವಿತ್‌ ಡ್ರಾ ಮಾಡಿರುವುದು ಗೊತ್ತಾಗಿದೆ. ಈ ಸುಳಿವಿನ ಮೇರೆಗೆ ಆರ್‌ಬಿಎಲ್‌ ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಸಿಕ್ಕ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೋಲಾರ: ಪೌಲ್ಟ್ರಿ ಫಾರಂ ಆವರಣದಲ್ಲಿ ಗಾಂಜಾ ಗಿಡ ಬೆಳೆದಿದ್ದ ಮೂವರ ಬಂಧನ

75 ಸೈಬರ್‌ ವಂಚನೆ ಕೇಸ್‌ ಪತ್ತೆ

ಆರೋಪಿಗಳ ಬಂಧನದಿಂದ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು ಹಾಗೂ ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ದಾಖಲಾಗಿದ್ದ 75 ಸೈಬರ್‌ ವಂಚನೆ ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ₹4,500 ಮೌಲ್ಯದ ಬಿಟ್‌ ಕಾಯಿನ್‌ ಫ್ರೀಜ್‌ ಮಾಡಲಾಗಿದೆ.

ಬಿಟ್‌ಕಾಯಿನ್‌ಗೆ ಬದಲಿಸಿ ಕಮಿಷನ್‌

ಬಂಧಿತ ಆರೋಪಿಗಳು ರಿಯಲ್‌ ಎಸ್ಟೇಟ್‌, ಆರ್‌ಟಿಒ ಬ್ರೋಕರ್‌, ಟ್ರೇಡಿಂಗ್‌ ಕೆಲಸ ಮಾಡಿಕೊಂಡಿದ್ದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ವಂಚನೆ ದಂಧೆಯಲ್ಲಿ ಭಾಗಿಯಾಗಿದ್ದರು. ತಲೆಮರೆಸಿರುವ ಪ್ರಕರಣದ ಪ್ರಮುಖ ಕಿಂಗ್‌ಪಿನ್‌ ಸೂಚನೆ ಮೇರೆಗೆ ವಿವಿಧ ಬ್ಯಾಂಕ್‌ ಖಾತೆಗಳ ತೆರೆದು ವಂಚನೆಯಿಂದ ಬರುವ ಹಣವನ್ನು ಡ್ರಾ ಮಾಡಿ ಬಿಟ್‌ಕಾಯಿನ್‌ಗೆ ಬದಲಿಸಿ, ಕಮಿಷನ್‌ ಪಡೆಯುತ್ತಿದ್ದರು. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ತನಿಖೆ ಮುಂದುವರಿದಿದೆ. ಪ್ರಕರಣ ಪ್ರಮುಖ ಕಿಂಗ್‌ಪಿನ್‌ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios