*  ನಾಲ್ವರು ಬಾಲಕಿಯರು ಅತ್ಮಹತ್ಯೆಗೆ ಶರಣು*  ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿ*  ಶಿಕ್ಷಣ ಇಲಾಖೆ, ಸರ್ಕಾರೇತರ ಸಂಘಸಂಸ್ಥೆಗಳಿಂದ ಜಾಗೃತಿ ಮೂಡಿಸಿದ್ದರೂ ನಿಲ್ಲದ ಆತ್ಮಹತ್ಯೆ  

ಬೆಂಗಳೂರು(ಜೂ.19): ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಮನನೊಂದು ರಾಜ್ಯದ ವಿವಿಧೆಡೆ 7 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಶಿಕ್ಷಣ ಇಲಾಖೆ, ಸರ್ಕಾರೇತರ ಸಂಘಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದ ಪೂಜಾ ರಾಚಪ್ಪ ಚಳಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬೀದರ್‌ ಜಿಲ್ಲೆ ಹುಮನಾಬಾದ್‌ ಗ್ರಾಮದ ದಿಲೀಪ್‌ ಮಚಾಪೂರೆ, ವಿಜಯನಗರ ಜಿಲ್ಲೆ ಗರಗ ಗ್ರಾಮದ ನಿವಾಸಿ ಶ್ಯಾಮರಾಜ, ಗದಗ ತಾಲೂಕಿನ ಹರ್ತಿ ಗ್ರಾಮದ ಪವಿತ್ರಾ ಲಿಂಗದಾಳ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಸ್ಪಂದನಾ, ಕೊಡಗಿನ ಕುಶಾಲನಗರ ಸಮೀಪದ ಬಸವನಹಳ್ಳಿಯ ಸಂಧ್ಯಾ, ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಪ್ರಣಮ್‌ ನಾಯ್ಕ ನೇಣಿಗೆ ಶರಣಾಗಿದ್ದಾರೆ.

ಆನ್‌ಲೈನ್‌ ಟ್ರೇಡಿಂಗಲ್ಲಿ 2 ಕೋಟಿ ನಷ್ಟ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಪೂಜಾ ರಾಚಪ್ಪ ಚಳಗೇರಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದು ಇಂಗ್ಲಿಷ್‌ ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು. ಉಳಿದ 6 ಮಂದಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾಗಿದ್ದು ಹೆಚ್ಚಿನವರು ಸಣ್ಣ ಅಂತರದಿಂದ ಫೇಲಾಗಿದ್ದರು.
ಇವರಲ್ಲಿ ಫಲಿತಾಂಶದ ಬಗ್ಗೆ ತೀವ್ರ ಆತಂಕದಿಂದಿದ್ದ ಕುಶಾಲನಗರದ ಬಸವನಹಳ್ಳಿ ಗ್ರಾಮದ ಸಂಧ್ಯಾ ಶನಿವಾರ ಪಿಯುಸಿ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ನೇಣಿಗೆ ಶರಣಾಗಿದ್ದಾಳೆ. ಆದರೆ ಈಕೆ ಶೇ.67 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಈಕೆ ನಿವೃತ್ತ ಯೋಧ ಸುಭಾಷ್‌ ಮತ್ತು ಸೌಮ್ಯಾ ದಂಪತಿ ಪುತ್ರಿ.

ಇನ್ನು ಕುಮಟಾದ ಪ್ರಣಮ್‌ ವಿಜ್ಞಾನ ವಿಭಾಗದಲ್ಲಿ 4 ವಿಷಯದಲ್ಲಿ ಫೇಲಾದ್ದಕ್ಕೆ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ತಂದೆ ಆಟೋ ಚಾಲಕನಾಗಿದ್ದು, ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.