Bengaluru: ನಿರ್ಮಾಣ ಹಂತ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು
ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಆರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಫೆ.26): ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಆರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಡುಸೊನ್ನಪ್ಪನಹಳ್ಳಿ ನಿವಾಸಿ ಮಹೇಶ್ವರಿ(6) ಮೃತ ಬಾಲಕಿ. ಸುಲ್ತಾನ್‌ಪೇಟೆ ಮುಖ್ಯರಸ್ತೆಯಲ್ಲಿ ವಿಕ್ರಮ್ ಎಂಬುವವರ ಮಾಲಿಕತ್ವದ ನಿರ್ಮಾಣ ಹಂತದ ಕಟ್ಟಡದಲ್ಲಿ ಶುಕ್ರವಾರ ಸಂಜೆ ಈ ದುರ್ಘಟನೆ ನಡೆದಿದೆ. ಮೃತ ಬಾಲಕಿಯ ತಂದೆ ಮಲ್ಲಪ್ಪ ನೀಡಿದ ದೂರಿನ ಮೇರೆಗೆ ಕಟ್ಟಡದ ಮಾಲಿಕ, ಉಸ್ತುವಾರಿ, ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾದಗಿರಿ ಮೂಲದ ಮಲ್ಲಪ್ಪ ದಂಪತಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆಲ ವರ್ಷಗಳಿಂದ ನಗರದ ಕಾಡುಸೊನ್ನಪ್ಪನಹಳ್ಳಿಯಲ್ಲಿ ನೆಲೆಸಿದ್ದರು. ಅನಾರೋಗ್ಯದ ನಿಮಿತ್ತ ಸಂಬಂಧಿಕರೊಬ್ಬರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ದಂಪತಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಶುಕ್ರವಾರ ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಸಂಬಂಧಿಕರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ತಮ್ಮ ಸಂಬಂಧಿಕ ಗಾರೆ ಮೇಸ್ತ್ರಿ ಉಮೇಶ್ ಅವರನ್ನು ಮಾತನಾಡಿಸಲು ಸುಲ್ತಾನ್ ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದ ಬಳಿ ಬಂದಿದ್ದಾರೆ. ಈ ವೇಳೆ ಉಮೇಶ್ ಅವರೊಂದಿಗೆ ಮಲ್ಲಪ್ಪ ದಂಪತಿ ಮಾತನಲ್ಲಿ ಮಗ್ನರಾಗಿದ್ದಾರೆ. ಈ ನಡುವೆ ಮಲ್ಲಪ್ಪನ ಹಿರಿಯ ಮಗಳು ಮಹೇಶ್ವರಿ ಆಟವಾಡುವುದಾಗಿ ಕಟ್ಟಡದ ನೆಲ ಅಂತಸ್ತಿಗೆ ತೆರಳಿದ್ದಾಗ ಆಯ ತಪ್ಪಿ ಲಿಫ್ಟ್ ಗುಂಡಿಗೆ ಬಿದ್ದು ಮೃತಪಟ್ಟಿದ್ದಾಳೆ.
ತುಮಕೂರಿನಲ್ಲಿ ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆ: ಆರೋಪಿ ಅಂದರ್
ಗುಂಡಿಯಲ್ಲಿ ತೆಲುತ್ತಿದ್ದ ಬಾಲಕಿಯ ಮೃತದೇಹ: ರಾತ್ರಿ 7 ಗಂಟೆಯಾದರೂ ಮಹೇಶ್ವರಿ ಕಾಣಿಸಿಲ್ಲ. ಬಳಿಕ ಇಡೀ ಕಟ್ಟಡವನ್ನು ಹುಡುಕಾಡಿದ್ದು, ಎಲ್ಲವೂ ಪತ್ತೆಯಾಗಿಲ್ಲ. ಕೊನೆಗೆ ನೆಲ ಅಂತಸ್ತಿನ ಲಿಫ್ಟ್ ಗುಂಡಿ ನೋಡಿದಾಗ ಮಹೇಶ್ವರಿಯ ದೇಹ ನೀರಿನ ಮೇಲೆ ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಮಹೇಶ್ವರಿ ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ. ನಿರ್ಮಾಣ ಹಂತದ ಕಟ್ಟದ ಲಿಫ್ಟ್ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ನೆಲ ಮಟ್ಟಕ್ಕೆ ಗುಂಡಿ ಇರುವುದರಿಂದ ಸರಿಯಾಗಿ ಕಾಣುವುದಿಲ್ಲ. ಗುಂಡಿಯ ಬಳಿ ಬೆಳಕಿನ ವ್ಯವಸ್ಥೆಯೂ ಇಲ್ಲ ಎಂದು ಆರೋಪಿಸಲಾಗಿದೆ.
ಮಾ.1ರಿಂದ ಬಿಬಿಎಂಪಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹ
ಹುಚ್ಚುನಾಯಿ ಕಡಿತ, ಬಾಲಕ ಸಾವು: ಕಳೆದ ಎರಡು ವಾರದ ಹಿಂದೆ ಹುಚ್ಚುನಾಯಿ ಕಡಿದು ತೀವ್ರವಾಗಿ ಗಾಯಗೊಂಡಿದ್ದ ನಗರದ ವಟ್ಟಪ್ಪಗೇರಿ ಪ್ರದೇಶದ ನಾಲ್ಕು ವರ್ಷ ತಯ್ಯಬಾ ಶನಿವಾರ ರಾತ್ರಿ ಮೃತಪಟ್ಟಿದ್ದಾಳೆ. ಫೆ. 7ರಂದು ವಟ್ಟಪ್ಪಗೆರೆ ಪ್ರದೇಶದ 30 ಜನರ ಮೇಲೆ ಹುಚ್ಚು ನಾಯಿ ದಾಳಿಮಾಡಿತ್ತು. ಇದರಿಂದ ಅನೇಕರು ಗಾಯಗೊಂಡಿದ್ದರು. ಈ ಪೈಕಿ ಬಾಲಕಿ ತಯ್ಯಬಾ ತೀವ್ರವಾಗಿ ಗಾಯಗೊಂಡಿದ್ದಳು. ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಬಳಿಕ ಈ ಮಗುವನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿತ್ತು. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಕಳೆದ ಎರಡು ತಿಂಗಳ ಹಿಂದೆ ಅಷ್ಟೇ ಕುರುಗೋಡು ತಾಲೂಕಿನ ಬಾದನಹಟ್ಟಿಗ್ರಾಮದ ಎರಡು ಮಕ್ಕಳು ಹುಚ್ವು ನಾಯಿ ಕಡಿತಕ್ಕೆ ಬಲಿಯಾಗಿದ್ದವು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮಗು ನಾಯಿ ದಾಳಿಗೆ ಬಲಿಯಾಗಿದೆ.