ಗೂಗಲ್‌ ಪೇ ಮತ್ತು ಫೋನ್‌ ಪೇ ಮೂಲಕ ಲಂಚ ಸ್ವೀಕರಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ಏಕಕಾಲದಲ್ಲಿ ಆರು ಮಂದಿ ನೌಕರರನ್ನು ಅಮಾನತು. 

ಬೆಂಗಳೂರು(ಡಿ.14): ರಜೆ ಮಂಜೂರು, ಡ್ಯೂಟಿ ನೀಡುವುದು ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಚಾಲಕರು ಮತ್ತು ನಿರ್ವಾಹಕರಿಂದ ಗೂಗಲ್‌ ಪೇ ಮತ್ತು ಫೋನ್‌ ಪೇ ಮೂಲಕ ಲಂಚ ಸ್ವೀಕರಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ಏಕಕಾಲದಲ್ಲಿ ಆರು ಮಂದಿ ನೌಕರರನ್ನು ಅಮಾನತುಗೊಳಿಸಿದೆ.

ಬಿಎಂಟಿಸಿ ಸಿಬ್ಬಂದಿಗೆ ನಿತ್ಯ ಡ್ಯೂಟಿ ಮತ್ತು ಅಗತ್ಯ ರಜೆಗಾಗಿ ಪರದಾಟ ನಡೆಸುತ್ತಿದ್ದಾರೆ. ಬಸ್‌ ಚಾಲಕರು ಮತ್ತು ನಿರ್ವಾಹಕರು ನಿತ್ಯ ಡ್ಯೂಟಿ ಬೇಕಾದರೆ ಡಿಪೋ ನಿರೀಕ್ಷರಿಗೆ ಅಥವಾ ಮೇಲಿನ ಅಧಿಕಾರಿಗಳಿಗೆ ಲಂಚ ನೀಡಬೇಕಿತ್ತು. ನಿತ್ಯ .100ನಂತೆ ಮಾಸಿಕ .2000 ರಿಂದ 3000 ವರೆಗೂ ಲಂಚ ಕೊಡಬೇಕಿತ್ತು. ನಗದು ಹಣದ ಬದಲಾಗಿ ಗೂಗಲ್‌ ಪೇ, ಫೋನ್‌ ಪೇ ಮೂಲಕ ಅಧಿಕಾರಿಗಳು ಪಡೆಯುತ್ತಿದ್ದರು. ಈ ಸಂಬಂಧ ಬಿಎಂಟಿಸಿಯ ಸುಮಾರು 90ಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ಆರೋಪಗಳ ಕೇಳಿ ಬಂದಿದ್ದವು. ಬಿಎಂಟಿಸಿ ಉನ್ನತ ಅಧಿಕಾರಿಗಳು ಏಕಾಏಕಿ ತನಿಖೆ ನಡೆಸಿದ್ದು, ಆರು ಅಧಿಕಾರಿಗಳು ಡಿಜಿಟಲ್‌ ಪೇ ಮೂಲಕ ಹಣ ಪಡೆದಿರುವುದು ತನಿಖೆಯಿಂದ ದೃಢಪಟ್ಟಿದೆ. ಈ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Bengaluru: ಜನರಿಂದ ಹಣ ಸುಲಿಗೆ ಮತ್ತಿಬ್ಬರು ಪೊಲೀಸರ ಮೇಲೆ ಆರೋಪ

ಅಮಾನತುಗೊಂಡವರಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರು ಹಾಗೂ ಅವರ ಮೇಲಿನ ಹಂತದ ಅಧಿಕಾರಿಗಳು ಇದ್ದಾರೆ. ದೂರುದಾರರು ನೀಡಿರುವ ಮಾಹಿತಿಯ ಪ್ರಕಾರ ಹಣ ವರ್ಗಾವಣೆ ಆಗಿರುವುದು ದೃಢಪಟ್ಟಿದೆ ಎಂದು ಬಿಎಂಟಿಸಿ ಭದ್ರತಾ ಮತ್ತು ಜಾಗೃತ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಪ್ತರ ಖಾತೆಗೆ ಹಣ

ಕೆಲ ಅಧಿಕಾರಿಗಳು ತಮ್ಮ ಖಾತೆ ಹಣ ವರ್ಗಾವಣೆಯಾದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಕುಟುಂಬಸ್ಥರು, ಸಂಬಂಧಿಕರು ಖಾತೆಯ ಮಾಹಿತಿ ನೀಡಿ ಅವರ ಮೂಲಕ ಲಂಚ ಸ್ವೀಕರಿಸುತ್ತಿದ್ದರು. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ಮತ್ತಷ್ಟುಅಧಿಕಾರಿಗಳು ಸಿಕ್ಕಿ ಬೀಳುವ ಸಾಧ್ಯತೆಗಳಿವೆ ಎಂದು ದೂರುದಾರರು ತಿಳಿಸಿದರು.

ಲಂಚದ ಕಾಟಕ್ಕೆ ಸಿಬ್ಬಂದಿ ಬಲಿ

ಕೆಲ ತಿಂಗಳ ಹಿಂದೆ ರಾಜರಾಜೇಶ್ವರಿ ನಗರ ಡಿಪೋ ಬಸ್‌ ಚಾಲಕ ಕಂ ನಿರ್ವಾಹಕ ಹೊಳೆಬಸಪ್ಪ ಎಂಬುವವರು ಹಿರಿಯ ಅಧಿಕಾರಿಗಳ ಕಾಟ ಮತ್ತು ಲಂಚಕ್ಕೆ ಬೇಸತ್ತು ಡಿಪೋ ಹಿಂಭಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಸಂದರ್ಭದಲ್ಲಿ ಡೆತ್‌ನೋಟ್‌ ಬರೆದಿದ್ದರು. ಆ ಪ್ರಕರಣವನ್ನು ಆಧಾರಿಸಿ ಬಿಎಂಟಿಸಿ ನಿರ್ದೇಶಕರು ತನಿಖೆಗೆ ಆದೇಶಿಸಿದ್ದರು. ಸದ್ಯ ಕೆಲವರನ್ನು ಅಮಾನತು ಮಾಡಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.