ಬೆಂಗಳೂರು: ಬಾಡಿಗೆದಾರನ ಜತೆ ಸೊಸೆ ಲವ್ವಡವ್ವಿ, ಮುದ್ದೆಗೆ ನಿದ್ರೆ ಮಾತ್ರೆ ಹಾಕಿ ಅತ್ತೆಯ ಹತ್ಯೆ..!
ಬ್ಯಾಡರಹಳ್ಳಿ ವಿನಾಯಕನಗರ ನಿವಾಸಿ, ಪ್ರಮುಖ ಆರೋಪಿ ರಶ್ಮಿ, ಆಕೆಯ ಪ್ರಿಯಕರ, ಕುಂದಾಪುರ ಮೂಲದ ಅಕ್ಷಯ್ ಹಾಗೂ ಸ್ನೇಹಿತ ಪುರುಷೋತ್ತಮ್ ನನ್ನು ಬಂಧಿಸಲಾಗಿದೆ. ಆರೋಪಿಗಳು ಅ.5ರಂದು ಲಕ್ಕಮ್ಮ ಎಂಬುವವರನ್ನು ಕೊಲೆಗೈದಿದ್ದರು. ಈ ಸಂಬಂಧ ಲಕ್ಕಮ್ಮ ಪುತ್ರ ಮಂಜುನಾಥ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು(ಅ.18): ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅತ್ತೆಗೆ ರಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ ಸೇರಿಸಿ ಬಳಿಕ ಕತ್ತು ಹಿಸುಕಿ ಕೊಲೆಗೈದು ‘ಹೃದಯಾಘಾತದ ಕಥೆ’ ಕಟ್ಟಿದ್ದ ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ವಿನಾಯಕನಗರ ನಿವಾಸಿ, ಪ್ರಮುಖ ಆರೋಪಿ ರಶ್ಮಿ (30), ಆಕೆಯ ಪ್ರಿಯಕರ, ಕುಂದಾಪುರ ಮೂಲದ ಅಕ್ಷಯ್(35) ಹಾಗೂ ಸ್ನೇಹಿತ ಪುರುಷೋತ್ತಮ್(35) ನನ್ನು ಬಂಧಿಸಲಾಗಿದೆ. ಆರೋಪಿಗಳು ಅ.5ರಂದು ಲಕ್ಕಮ್ಮ(52) ಎಂಬುವವರನ್ನು ಕೊಲೆಗೈದಿದ್ದರು. ಈ ಸಂಬಂಧ ಲಕ್ಕಮ್ಮ ಪುತ್ರ ಮಂಜುನಾಥ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವನ ಹೆಣ ಹಾಕಿದ್ದು ಅಣ್ಣ-ತಮ್ಮಂದಿರು..! ಜಮೀನಿಗಾಗಿ ಅಣ್ಣನನ್ನೇ ಕೊಂದು ಬಿಟ್ಟರಾ..?
ಪ್ರಕರಣದ ಹಿನ್ನೆಲೆ:
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು ಮುದಿಗೆರೆ ಶೆಟ್ಟಿಪಾಳ್ಯ ಮೂಲದ ಮಂಜುನಾಥ್ ಹಲವು ವರ್ಷಗಳಿಂದ ಬ್ಯಾಡರಹಳ್ಳಿ ವಿನಾಯಕನಗರದಲ್ಲಿ ತಂದೆ-ತಾಯಿ ಜತೆಗೆ ನೆಲೆಸಿದ್ದಾರೆ. ಮೂರು ಅಂತಸ್ತಿನ ಸ್ವಂತ ಮನೆ ಹೊಂದಿರುವ ಮಂಜುನಾಥ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 11 ವರ್ಷದ ಹಿಂದೆ ಬ್ಯಾಡರಹಳ್ಳಿಯ ರಶ್ಮೀ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಹತ್ತು ಹಾಗೂ ಎರಡೂವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ. ಮಂಜುನಾಥ್ ತಾಯಿ ಲಕ್ಕಮ್ಮ ಚೀಟಿ ಹಾಗೂ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದರು.
ಬಾಡಿಗೆದಾರನ ಜತೆಗೆ ಅನೈತಿಕ ಸಂಬಂಧ!
ಪೇಂಟಿಂಗ್ ಕಂಪನಿಯಲ್ಲಿ ಕೆಲಸ ಮಾಡುವ ಕುಂದಾಪುರ ಮೂಲದ ಅಕ್ಷಯ್, ಮಂಜುನಾಥ್‌ಗೆ ಸೇರಿದ ಕಟ್ಟಡದ ಮೊದಲ ಮಹಡಿಯಲ್ಲಿ ಕಳೆದ ಆರು ವರ್ಷಗಳಿಂದ ಬಾಡಿಗೆಗೆ ನೆಲೆಸಿದ್ದ. ಈ ನಡುವೆ ರಶ್ಮೀ ಹಾಗೂ ಅಕ್ಷಯ್ ನಡುವೆ ಆತ್ಮೀಯತೆ ಬೆಳೆದು ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಸೊಸೆ ರಶ್ಮೀ ವರ್ತನೆ ಬಗ್ಗೆ ಅನುಮಾನಗೊಂಡ ಲಕ್ಕಮ್ಮ, ಸದಾ ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ರಶ್ಮೀ ಹಾಗೂ ಅಕ್ಷಯ್ ಆತ್ಮೀಯವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರಶ್ಮೀ ಮತ್ತು ಅಕ್ಷಯ್ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಲಕ್ಕಮ್ಮನ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ಬಯಲಾಗಿದೆ.
ಮಾವನನ್ನು ಹೊರಕ್ಕೆ ಕರೆದೊಯ್ದು ಅತ್ತೆ ಹತ್ಯೆ
ಆರೋಪಿ ರಶ್ಮೀ ಪ್ರಿಯಕರ ಅಕ್ಷಯ್ ಸೂಚನೆ ಮೇರೆಗೆ ಅ.5ರಂದು ಮಧ್ಯಾಹ್ನ ರಾಗಿ ಮುದ್ದೆಗೆ ನಿದ್ದೆ ಮಾತ್ರೆ ಬೆರೆಸಿ ಅತ್ತೆ ಲಕ್ಕಮ್ಮನಿಗೆ ಊಟ ನೀಡಿದ್ದಳು. ಈ ವೇಳೆ ಮನೆಯಲ್ಲಿ ಇದ್ದ ಮಾವನನ್ನು ತರಕಾರಿ ತರಲು ಜತೆಯಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಳು. ಈ ನಡುವೆ ಊಟ ಮಾಡಿದ ಬಳಿಕ ಲಕ್ಕಮ್ಮ ಗಾಢ ನಿದ್ದೆಗೆ ಜಾರಿದ್ದಾರೆ. ತಾನು ಹೊರಗೆ ಹೋಗಿರುವ ಬಗ್ಗೆ ರಶ್ಮೀ ವಾಟ್ಸಾಪ್‌ನಲ್ಲಿ ಪ್ರಿಯಕರ ಅಕ್ಷಯ್‌ಗೆ ಸಂದೇಶ ಕಳುಹಿಸಿದ್ದಾಳೆ. ಅದರಂತೆ ಆರೋಪಿ ಅಕ್ಷಯ್ ಮತ್ತು ಆತನ ಸ್ನೇಹಿತ ಪುರುಷೋತ್ತಮ್ ರಶ್ಮೀಯ ಮನೆಗೆ ಬಂದು ಗಾಢ ನಿದ್ದೆಯಲ್ಲಿದ್ದ ಲಕ್ಕಮ್ಮ ಅವರ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದಾರೆ.
ಹಾರ್ಟ್ ಅಟ್ಯಾಕ್ ಡ್ರಾಮಾ!
ಕೆಲ ಹೊತ್ತಿನ ಬಳಿಕ ರಶ್ಮೀ ಹಾಗೂ ಮಾವ ತರಕಾರಿ ತೆಗೆದುಕೊಂಡು ಮನೆಗೆ ಬಂದಿದ್ದಾರೆ. ಲಕ್ಕಮ್ಮ ಅವರನ್ನು ಎಚ್ಚರಗೊಳಿಸುವಂತೆ ರಶ್ಮೀ ನಾಟಕ ಮಾಡಿದ್ದಾಳೆ. ಎಷ್ಟೇ ಕೂಗಿದರೂ ಲಕ್ಕಮ್ಮ ಎಚ್ಚರಗೊಂಡಿಲ್ಲ. ಬಳಿಕ ಅತ್ತೆಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಅಳಲು ಆರಂಭಿಸಿದ್ದಾಳೆ. ಕೆಲಸಕ್ಕೆ ಹೋಗಿದ್ದ ಪತಿ ಮಂಜುನಾಥ್ ಸಹ ಮನೆಗೆ ಬಂದಾಗ ತಾಯಿ ಮೃತಪಟ್ಟಿದ್ದಾರೆ ಎಂದು ನಂಬಿಸಿದ್ದಾಳೆ. ಬಳಿಕ ಮಂಜುನಾಥ್ ಸಂಬಂಧಿಕರ ಜತೆಗೆ ತಾಯಿ ಲಕ್ಕಮ್ಮನ ಮೃತದೇಹವನ್ನು ಕುಣಿಗಲ್ ತಾಲೂಕಿನ ಮುದಿಗೆರೆ ಶೆಟ್ಟಿಪಾಳ್ಯದ ಸ್ವಂತ ಜಮೀನಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿದ್ದರು.
ಮಗಳನ್ನೇ ಕೊಲೆ ಮಾಡಲು ಅಪ್ಪ ನಿರ್ಧರಿಸಿದ್ದೇಕೆ..? ಮರ್ಯಾದಾ ಹತ್ಯೆಯಿಂದಿತ್ತು ಕರುಣಾಜನಕ ಕಥೆ..!
ವಾಟ್ಸಾಪ್ ಚಾಟ್‌ನಲ್ಲಿ ಕೊಲೆ ರಹಸ್ಯ ಬಯಲು
ಕೆಲ ದಿನಗಳ ಹಿಂದೆ ಬಳಿಕ ಆರೋಪಿ ಅಕ್ಷಯ್‌ನ ಸ್ನೇಹಿತ ರಾಘವೇಂದ್ರನಿಗೆ ಲಕ್ಕಮ್ಮನ ಸಾವಿನ ಬಗ್ಗೆ ಅನುಮಾನ ಬಂದಿದೆ. ಈ ವೇಳೆ ಅಕ್ಷತ್‌ನ ಮೊಬೈಲ್ ಪಡೆದು ವಾಟ್ಸಾಪ್ ಚಾಟ್ ನೋಡುವಾಗ, ಅಕ್ಷಯ್ ಮತ್ತು ರಶ್ಮೀ ನಡುವೆ ಲಕ್ಕಮ್ಮನ ಕೊಲೆಗೆ ನಡೆದಿದ್ದ ಸಂಚಿನ ಸಂದೇಶಗಳು ಕಂಡು ಬಂದಿವೆ. ಈ ವಾಟ್ಸಾಪ್ ಚಾಟ್ ಸಂದೇಶಗಳ ಫೋಟೋ ತೆಗೆದುಕೊಂಡ ರಾಘವೇಂದ್ರ ಬಳಿಕ ಕಟ್ಟಡದ ಮಾಲೀಕ ಮಂಜುನಾಥ್‌ಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಮೇರೆಗೆ ಮಂಜುನಾಥ್ ಪತ್ನಿ ರಶ್ಮೀ ಸೇರಿ ಮೂವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಇನ್‌ಸ್ಪೆಪೆಕ್ಟರ್ ಕೆ.ಓ.ಪುಟ್ಟ ಓಬಳರೆಡ್ಡಿ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.