ತರಗತಿ ಕೊಠಡಿಯ ಮೇಲ್ಛಾವಣಿ ಕುಸಿದು 5 ವಿದ್ಯಾರ್ಥಿಗಳಿಗೆ ಗಾಯ, ತಪ್ಪಿದ ಅನಾಹುತ
* ಶಾಲೆಯ ಮೇಲ್ಛಾವಣಿ ಪದರು ಕುಸಿದು ಐದು ವಿದ್ಯಾರ್ಥಿಗಳಿಗೆ ಗಾಯ
* ಉತ್ತರಕನ್ನಡ ಜಿಲ್ಲೆಯ ಅಂಕೋಲಾ ನಗರದ ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ಘಟನೆ
* ಗಾಯಗೊಂಡ ವಿದ್ಯಾರ್ಥಿಗಳನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲು
ಕಾರವಾರ, (ಮಾ.09): ಶಾಲೆಯ ಕೊಠಡಿಯ ಮೇಲ್ಛಾವಣಿಗೆ ಮಾಡಲಾಗಿದ್ದ ಪ್ಲಾಸ್ಟರಿಂಗ್ ಕಳಚಿ School Roof Collapsed) ಬಿದ್ದು 5 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಅಂಕೋಲಾ (Ankola) ನಗರದ ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ನಡೆದಿದೆ.
ಇಂದು(ಬುಧವಾರ) ಮದ್ಯಾಹ್ನ ಊಟದ ವಿರಾಮದ ವೇಳೆ ಕುಸಿದು ಬಿದ್ದಿದೆ. ಈ ವೇಳೆ ತರಗತಿ (Class) ಒಳಗಡೆ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ (Students Injured). 4ನೇ ತರಗತಿ ಸುಹಾನಿ, ಸಪನ್, ಸಾಧ್ವೀನ್ ಸೇರಿದಂತೆ ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲದೇ ಘಟನೆಯಿಂದ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಕ್ ಸೇರಿದಂತೆ, ತರಗತಿ ಒಳಗಡೆಯ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ತರಗತಿಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬಹುಪಾಲು ವಿದ್ಯಾರ್ಥಿಗಳು ತರಗತಿಯ ಹೊರಗೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಘಟನೆ ಕುರಿತಂತೆ ಹಲವಾರು ಜನ ವಿದ್ಯಾರ್ಥಿಗಳ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಯ ಬಹುತೇಕ ಎಲ್ಲಾ ಕೊಠಡಿಗಳ ಮೇಲ್ಛಾವಣಿ ಭಾಗ ಕುಸಿಯುವ ಸ್ಥಿತಿಯಲ್ಲಿ ಇದೆ. ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಆದರೆ ಹೊಣೆ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೋಲಿಸರು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಗೆ ಯತ್ನಿಸಿದ ಆರೋಪಿ ಅರೆಸ್ಟ್
ಶಿವಮೊಗ್ಗದಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ಚಾಕುವಿನಿಂದ ಇರಿತಕ್ಕೊಳಗಾದ ಪಾಶಾಖಾನ್(45). ಪಾಶಾಖಾನ್ ನನ್ನು ಕೊಲೆ ಮಾಡಲು ಯತ್ನಿಸಿದ ಸೈಯದ್ ದಸ್ತಗೀರ್ ಬಂಧನವಾಗಿದೆ.
ದಸ್ತಗೀರ್ ಬಂಧನ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಲಕ್ಷ್ಮೀ ಪ್ರಸಾದ್, ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದಲ್ಲಿ ದನದ ಮಾಂಸ ಮಾರಾಟ ಮಾಡುವ ಪಾಶಾಖಾನ್ ದಸ್ತಗೀರ್ ಬಳಿ ಒಂದು ಲಕ್ಷ ರೂ. ಸಾಲ ಪಡೆದಿದ್ದ.
ಇದಕ್ಕೆ ಪ್ರತಿಯಾಗಿ ಎರಡೂವರೆ ಲಕ್ಷ ರೂ. ಬಡ್ಡಿ ಸಮೇತ ಹಿಂತಿರುಗಿಸಿದ್ದ. ಇಷ್ಟಾದರೂ ಸೈಯದ್ ದಸ್ತಗೀರ್ ಮತ್ತೆ ಬಡ್ಡಿ ಕೊಡುವಂತೆ ಒತ್ತಾಯಿಸಿ ಗಲಾಟೆ ಮಾಡುತ್ತಿದ್ದ. ಹಳೆಯ ವೈಷಮ್ಯ ಹಾಗೂ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಎಂದು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದ ಕೋಟೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇರಿತಕ್ಕೊಳಗಾದ ಪಾಶಾಖಾನ್ ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರೈಲು ಡಿಕ್ಕಿಯಾಗಿ ಪ್ರಯಾಣಿಕ ಸಾವು
ಕೋಲಾರ: ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಪ್ರಯಾಣಿಕ ಸಾವನ್ನಪ್ಪಿದ ದುರ್ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.
ತಾಂತ್ರಿಕ ದೋಷ ಹಿನ್ನೆಲೆ ರೈಲೊಂದು ಮಾರ್ಗ ಮಧ್ಯೆ ನಿಂತಿತ್ತು. ನಿಂತಿದ್ದ ರೈಲಿನಿಂದ ಇಳಿಯುತ್ತಿದ್ದ ಪ್ರಯಾಣಿಕರು, ರೈಲಿನಿಂದ ಇಳಿದು ಮತ್ತೊಂದು ಹಳಿ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರನ್ನು ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ ಶಹಬಾಜ್ ಅಹಮದ್ ಎಂದು ಗುರುತಿಸಲಾಗಿದೆ. ಹತ್ತಾರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡಕ್ಕೆ ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯ ಎಂದು ಸ್ಥಳೀಯರ ಆಕ್ರೋಶ ಕೇಳಿಬಂದಿದೆ. ಸ್ಥಳಕ್ಕೆ ಕಂಟ್ರೋನ್ಮೆಂಟ್ ಪೊಲೀಸರು ಭೇಟಿ ನೀಡಿದ್ದಾರೆ.