*   ಕಸ್ಟಮ್ಸ್‌ನಿಂದ 5 ಕೋಟಿ ಹೆರಾಯಿನ್‌ ಜಪ್ತಿ*   ಫೈಲ್‌ನಲ್ಲಿ ಅಡಗಿಸಿಟ್ಟದ್ದ ಡ್ರಗ್ಸ್‌ ವಶ*   ದುಬೈನಿಂದ ಬಂದ ಪ್ರಯಾಣಿಕರ ಆರೋಪಿಗಳ ವಶ 

ಬೆಂಗಳೂರು(ಜ.26):  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು(Customs Officers) ಮಂಗಳವಾರ 5.30 ಕೋಟಿ ರು. ಮೌಲ್ಯದ 754 ಗ್ರಾಂ ಹೆರಾಯಿನ್‌(Heroin) ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಕೊರಿಯರ್‌ ಮೂಲಕ ಅಕ್ರಮವಾಗಿ ಡಾಕ್ಯುಮೆಂಟ್‌ ಫೈಲ್‌ಗಳಲ್ಲಿ ನಗರಕ್ಕೆ ಹೆರಾಯಿನ್‌ ಆಮದು ಮಾಡಿಕೊಳ್ಳುವಾಗ ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್‌ ಪೆಡ್ಲರ್‌ಗಳು(Peddlers) ವಿದೇಶಗಳಿಂದ ಅಕ್ರಮವಾಗಿ ನಗರಕ್ಕೆ(Bengaluru) ಮಾದಕವಸ್ತು ಆಮದು ಮಾಡಿಕೊಂಡು, ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ. ವಿಮಾನಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪೇಸ್ಟ್‌, ಎಲೆಕ್ಟ್ರಾನಿಕ್‌ ಉಪಕರಣಗಳು, ಬಟ್ಟೆ ಸೇರಿದಂತೆ ಇತರೆ ವಸ್ತುಗಳಲ್ಲಿ ಮಾದಕವಸ್ತು ಬಚ್ಚಿಟ್ಟು ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ವಿದೇಶಗಳಿಂದ ಬರುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ತಪಾಸಣೆ ಬಿಗಿಗೊಳಿಸಿದ್ದಾರೆ. ಅದರಂತೆ ದುಬೈನಿಂದ ವಿಮಾನದ ಪ್ರಯಾಣಿಕರ ಲಗೇಜುಗಳು ಹಾಗೂ ಪಾರ್ಸೆಲ್‌ಗಳನ್ನು ತಪಾಸಣೆ ಮಾಡುವಾಗ ಡಾಕ್ಯುಮೆಂಟ್‌ ಫೈಲ್‌ನಲ್ಲಿ ಹೆರಾಯಿನ್‌ ಇರುವುದು ಪತ್ತೆಯಾಗಿದೆ.

Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್‌ ಕೊಡಿಸಲು ಶಿಷ್ಯರಿಂದ ಡ್ರಗ್ಸ್‌ ದಂಧೆ

ಪೇದೆಗಳು ಡ್ರಗ್ಸ್‌ ದಂಧೆ ಮಾತ್ರವಲ್ಲ ಸುಲಿಗೆಯೂ ಮಾಡಿದ್ರು

ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದಾಗ ಡ್ರಗ್ಸ್‌(Drugs) ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ಗಳ(Police Constables) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಐದು ಸಾವಿರ ರು. ಸುಲಿಗೆ ಮಾಡಿದ್ದಾರೆಂದು ಆಡುಗೋಡಿಯ ಇಲಿಯಾಜ್‌ ಎಂಬುವರ ದೂರಿನ ಮೇರೆಗೆ ಡ್ರಗ್ಸ್‌ ಪ್ರಕರಣ ಆರೋಪಿಗಳಾದ ಕೋರಮಂಗಲ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ಗಳಾದ ಶಿವಕುಮಾರ್‌ ಮತ್ತು ಸಂತೋಷ್‌ನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಅ.25ರಂದು ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ದೂರುದಾರರಾದ ಇಲಿಯಾಜ್‌ ಹಾಗೂ ಆತನ ಸ್ನೇಹಿತ ಸೈಯದ್‌ ಅಲಿ ಕೋರಮಂಗಲ 3ನೇ ಬ್ಲಾಕ್‌ನ ಬಿಡಿಎ ಕಾಂಪ್ಲೆಕ್ಸ್‌ ಬಳಿ ಕುಳಿತು ಗಾಂಜಾ ಸೇವಿಸುತ್ತಿದ್ದರು. ಈ ವೇಳೆ ಕಾನ್ಸ್‌ಟೇಬಲ್‌ಗಳಾದ ಶಿವಕುಮಾರ್‌ ಹಾಗೂ ಸಂತೋಷ್‌ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಸೈಯದ್‌ ಅಲಿ ಹೆದರಿ ಓಡಿ ಹೋಗಿದ್ದಾನೆ. ಬಳಿಕ ಇಲಿಯಾಜ್‌ನನ್ನು ಹಿಡಿದುಕೊಂಡು ತಪಾಸಣೆ ಮಾಡಿದಾಗ 2-3 ಸಿಗರೇಟ್‌ಗೆ ತುಂಬುವಷ್ಟುಗಾಂಜಾವಿದ್ದ ಪೊಟ್ಟಣ ಸಿಕ್ಕಿದೆ. ಆಗ ಇಲಿಯಾಜ್‌ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದಿರುವ ಕಾನ್ಸ್‌ಟೇಬಲ್‌ ಶಿವಕುಮಾರ್‌ ಹಾಗೂ ಸಂತೋಷ್‌ ಕೇಸ್‌ ಹಾಕುವುವಾಗಿ ಹೆದರಿಸಿದ್ದಾರೆ.

Drugs Bust in Bengaluru: ವಿದೇಶಿ ಸಹೋದರರ ಡ್ರಗ್ಸ್‌ ಫ್ಯಾಕ್ಟರಿ ರಾಜಧಾನಿಯಲ್ಲಿ ಪತ್ತೆ..!

1 ಲಕ್ಷಕ್ಕೆ ಬೇಡಿಕೆ:

1 ಲಕ್ಷ ಕೊಟ್ಟರೆ ಕೇಸ್‌ ಹಾಕದೆ ಈಗಲೇ ಬಿಡುವುದಾಗಿ ಇಲಿಯಾಜ್‌ಗೆ ಹೇಳಿದ್ದಾರೆ. ಈ ವೇಳೆ ಇಲಿಯಾಜ್‌ ಅಷ್ಟೊಂದು ಹಣವಿಲ್ಲವೆಂದು ತನ್ನ ಬಳಿಯಿದ್ದ ಐದು ಸಾವಿರ ರು. ಮಾತ್ರವಿದೆ ಎಂದು ಹೇಳಿದ್ದಾನೆ. ಬಳಿಕ ಈ ಇಬ್ಬರು ಕಾನ್ಸ್‌ಟೇಬಲ್‌ಗಳು ಇಲಿಯಾಜ್‌ನಿಂದ ಐದು ಸಾವಿರ ರು. ಕಿತ್ತುಕೊಂಡು ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಾರೆ. ಯಾರಿಗಾದರೂ ಹೇಳಿದರೂ ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿ ಠಾಣೆಯಿಂದ ಕಳುಹಿಸಿದ್ದಾರೆ.

ಬಂಧನದ ಸುದ್ದಿ ತಿಳಿದು ದೂರು:

ಬಳಿಕ ಇಲಿಯಾಜ್‌ ಈ ವಿಚಾರವನ್ನು ಎಲ್ಲಿಯಾದರೂ ಹೇಳಿದರೆ, ಜೈಲಿಗೆ ಹಾಕುತ್ತಾರೆಂದು ಹೆದರಿ ಯಾವುದೇ ದೂರು ನೀಡದೇ ಸುಮ್ಮನಾಗಿದ್ದರು. ಇತ್ತೀಚೆಗೆ ಈ ಇಬ್ಬರು ಕಾನ್ಸ್‌ಟೇಬಲ್‌ಗಳು ಡ್ರಗ್ಸ್‌ ದಂಧೆಯಲ್ಲಿ(Drugs Racket) ಭಾಗಿಯಾಗಿ, ಜೈಲು ಸೇರಿರುವ ಸುದ್ದಿ ತಿಳಿದು ಇಲಿಯಾಜ್‌ ಜ.19ರಂದು ಕೋರಮಂಗಲ ಠಾಣೆಗೆ ಬಂದು ಅ.25ರಂದು ತಮ್ಮ ಬಳಿ ಐದು ಸಾವಿರ ರು. ಸುಲಿಗೆ ಮಾಡಿದ್ದರೆಂದು ಈ ಇಬ್ಬರು ಪೇದೆಗಳ ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.