ಪತ್ನಿ ಜತೆ ಜಗಳ ಮಾಡಿಕೊಂಡು ರಸ್ತೆ ಬದಿಯ ಮರಕ್ಕೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು(ಫೆ.28): ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿ, ಪತ್ನಿ ಜತೆ ಜಗಳ ಮಾಡಿಕೊಂಡು ರಸ್ತೆ ಬದಿಯ ಮರಕ್ಕೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಾಪರೆಡ್ಡಿ ಪಾಳ್ಯ ನಿವಾಸಿ ಮಹದೇವ (46) ಮೃತ. ಭಾನುವಾರ ರಾತ್ರಿ 10.30ರ ಸುಮಾರಿಗೆ ಪಾಪರೆಡ್ಡಿ ಪಾಳ್ಯದ ರಸ್ತೆ ಬದಿ ಈ ಘಟನೆ ನಡೆದಿದೆ. ಮಂಡ್ಯ ಕೆ.ಎಂ.ದೊಡ್ಡಿ ಮೂಲದ ಮೃತ ಮಹದೇವನಿಗೆ ಮೂವರು ಪತ್ನಿಯರು. ಕುಡಿತದ ಚಟಕ್ಕೆ ಬಿದ್ದಿದ್ದ ಮಹದೇವ ಪ್ರತಿ ದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ಮೊದಲ ಹಾಗೂ ಮೂರನೇ ಪತ್ನಿ ಈತನನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದ ಆರು ತಿಂಗಳಿಂದ ಎರಡನೇ ಪತ್ನಿ ಯಶೋಧಾ ಜತೆಗೆ ಪಾಪರೆಡ್ಡಿಪಾಳ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಪತ್ನಿ ಯಶೋಧಾ ರಸ್ತೆ ಬದಿ ಊಟದ ಗಾಡಿಯಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಳು. ಮಹದೇವನಿಗೆ ನಿರ್ದಿಷ್ಟ ಕೆಲಸವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನ 1 ಕೋಟಿ ರೂ. ಕದಿಯುವುದು ಸೈಬರ್ ಕಳ್ಳರ ಟಾರ್ಗೆಟ್: ನಿಮ್ಮ ಹಣ ಸೇಫ್ಟಿಗೆ ಇಲ್ಲಿದೆ ಮಾರ್ಗ..!
ಭಾನುವಾರ ರಾತ್ರಿ ಕುಡಿದು ಮನೆಗೆ ಬಂದಿರುವ ಮಹದೇವ, ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ಬೇಸರಗೊಂಡು ಪತ್ನಿ ಮನೆಯಿಂದ ಹೊರಗಡೆ ಹೋಗಿದ್ದರು. ಈ ವೇಳೆ ಮಹದೇವ ಹೊರಗೆಲ್ಲ ಪತ್ನಿಗಾಗಿ ಹುಡುಕಾಡಿ ಮನೆಗೆ ವಾಪಾಸ್ ಹೋಗಿದ್ದ. ಅಷ್ಟರಲ್ಲಿ ಪತ್ನಿ ಮನೆಗೆ ಬಂದಿದ್ದರು. ಈ ವೇಳೆ ಮತ್ತೆ ಜಗಳ ಶುರು ಮಾಡಿದ ಮಹದೇವ, ಊಟವನ್ನು ಮನೆಯಲ್ಲಿ ಎಸೆದು ರಾದ್ಧಾಂತ ಮಾಡಿದ್ದಾನೆ. ಬಳಿಕ ರಾತ್ರಿ 10.30ರ ಸುಮಾರಿಗೆ ಒಂದು ಜತೆ ಬಟ್ಟೆಯನ್ನು ಬ್ಯಾಗ್ ಹಾಕಿಕೊಂಡು ಮನೆಯಿಂದ ಹೊರಗೆ ಬಂದಿದ್ದಾನೆ. ಬಳಿಕ ಪಾಪರೆಡ್ಡಿ ಪಾಳ್ಯದ ರಸ್ತೆ ಬದಿಯ ಮರಕ್ಕೆ ಪಂಚೆಯಿಂದ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
