*  150 ಎಕರೆ ಭೂಮಿ ಹಂಚಿಕೆ ವಿವಾದ, ಅಣ್ಣನ ಕೃಷಿಗೆ ತಮ್ಮಂದಿರ ವಿರೋಧ*  ಬೆಳೆ ಹರಗಲು ಮುಂದಾದ ತಮ್ಮಂದಿರು*  ರೊಚ್ಚಿಗೆದ್ದ ಅಣ್ಣನಿಂದ ಗುಂಡಿನ ದಾಳಿ 

ಕೊಪ್ಪಳ(ಜೂ.05):  ಆಸ್ತಿ ವಿವಾದದ ಕಲಹ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ತಾಲೂಕಿನ ಕವಲೂರು ಗ್ರಾಮದ ಹೊಲದಲ್ಲಿ ತಮ್ಮಂದಿರ ಮೇಲೆ ಅಣ್ಣ ಗುಂಡಿನ ದಾಳಿ ಮಾಡಿದ್ದಾನೆ. ವಿನಾಯಕ (45) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ಯೋಗೀಶ್‌ ದೇಸಾಯಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮಂದಿರ ಮೇಲೆ ಗುಂಡಿನ ಮಳೆಗೆರೆದ ಆರೋಪಿ ರಾಘವೇಂದ್ರ ದೇಸಾಯಿಯನ್ನು ಬಂಧಿಸಲಾಗಿದೆ.

ಆಗಿದ್ದೇನು?:

ಮನೋಹರ ದೇಸಾಯಿ ಅವರಿಗೆ ಸೇರಿದ ಸುಮಾರು 150 ಎಕರೆ ಭೂಮಿ ಹಂಚಿಕೆ ವಿವಾದ ಹೈಕೋರ್ಚ್‌ನಲ್ಲಿದ್ದು, ಅವರಿಗೆ ರಾಘವೇಂದ್ರ ದೇಸಾಯಿ, ವಿನಾಯಕ ದೇಸಾಯಿ, ಯೋಗೀಶ ದೇಸಾಯಿ ಎನ್ನುವ ಮೂವರು ಮಕ್ಕಳು. ಈ ಪೈಕಿ ರಾಘವೇಂದ್ರ ದೇಸಾಯಿ ಕೃಷಿ ಮಾಡಿಕೊಂಡಿದ್ದಾರೆ. ವಿನಾಯಕ ದೇಸಾಯಿ ಮತ್ತು ಯೋಗೀಶ್‌ ದೇಸಾಯಿ ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದಾರೆ.

ಗಂಡನನ್ನು ಬಿಟ್ಟು ಮತ್ತೊಬ್ಬನೊಂದಿಗೆ ವಾಸಿಸುತ್ತಿದ್ದ ಮಹಿಳೆ, ಈಗ ಇಬ್ಬರೂ ಶವವಾಗಿ ಪತ್ತೆ!

ವಿವಾದಿತ ಭೂಮಿಯಲ್ಲಿ ಕೃಷಿ ಮಾಡದಂತೆ ಕೋರ್ಚ್‌ ಆದೇಶವಿದ್ದರೂ ರಾಘವೇಂದ್ರ ದೇಸಾಯಿ ಬಿತ್ತನೆ ಮಾಡಿದ್ದಾರೆ. ವಿಷಯ ತಿಳಿದ ವಿನಾಯಕ ದೇಸಾಯಿ ಮತ್ತು ಯೋಗೀಶ ದೇಸಾಯಿ ಶನಿವಾರ ಗ್ರಾಮಕ್ಕೆ ಆಗಮಿಸಿ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಪೂರ್ವ ಮುಂಗಾರು ಮಳೆಗೆ ಬಿತ್ತನೆ ಮಾಡಿದ್ದರಿಂದ ಹೊಲದಲ್ಲಿ ಬೆಳೆ ಬಂದಿದೆ. ವಿನಾಯಕ ದೇಸಾಯಿ ಮತ್ತು ಯೋಗೀಶ ದೇಸಾಯಿ ಟ್ರ್ಯಾಕ್ಟರ್‌ ಮೂಲಕ ಬೆಳೆ ಹರಗಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ರಾಘವೇಂದ್ರ ದೇಸಾಯಿ ಪತ್ನಿಯ ಜೊತೆಗೂಡಿ ತಮ್ಮಂದಿರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿನಾಯಕ ಮತ್ತು ಯೋಗೀಶ್‌ ಇಬ್ಬರು ಸೇರಿ ಅಣ್ಣ ರಾಘವೇಂದ್ರ ದೇಸಾಯಿಯನ್ನು ಥಳಿಸಿದ್ದಾರೆ. ಸಿಟ್ಟಿಗೆದ್ದ ರಾಘವೇಂದ್ರ ದೇಸಾಯಿ ಮನೆಗೆ ಹೋಗಿ ಡಬಲ್‌ ಬ್ಯಾರಲ್‌ ಗನ್‌ ತೆಗೆದುಕೊಂಡು ಬಂದು ಹೊಲದಲ್ಲಿದ್ದ ತಮ್ಮಿಂದರಾದ ವಿನಾಯಕ ಮತ್ತು ಯೋಗೀಶ್‌ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ವಿನಾಯಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಯೋಗೀಶ್‌ ಅವರಿಗೆ ಸಣ್ಣಪುಟ್ಟಗಾಯಗಳಾಗಿವೆ.

ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು:

ಎಸ್ಪಿ ಅರುಣಾಂಗ್ಶು ಗಿರಿ, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ವಿಶ್ವನಾಥ ಹಿರೇಗೌಡ್ರ ಸೇರಿದಂತೆ ಅನೇಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯೋಗೀಶ್‌ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿ ರಾಘವೇಂದ್ರ ದೇಸಾಯಿಯನ್ನು ಬಂಧಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.