ಆನ್ಲೈನ್ನಲ್ಲೇ ಐದು ತಿಂಗಳಲ್ಲಿ 4 ಕೋಟಿ ರೂಪಾಯಿ ದೋಖಾ: ಕೊಡಗಿನ ವ್ಯಕ್ತಿಗೆ 2.20 ಕೋಟಿ ಪಂಗನಾಮ
ಬದುಕು ಎಲ್ಲವೂ ಡಿಜಿಟಲ್ ಮಯವಾಗುತ್ತಿದೆ ಎಂದು, ಜಗತ್ತೇ ಎಷ್ಟು ಹತ್ತಿರ ಎಂದು ಸಂಭ್ರಮಿಸುತ್ತಿರುವಾಗಲೇ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಆನ್ಲೈನ್ ಮೂಲಕ ಮೋಸ, ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.31): ಬದುಕು ಎಲ್ಲವೂ ಡಿಜಿಟಲ್ ಮಯವಾಗುತ್ತಿದೆ ಎಂದು, ಜಗತ್ತೇ ಎಷ್ಟು ಹತ್ತಿರ ಎಂದು ಸಂಭ್ರಮಿಸುತ್ತಿರುವಾಗಲೇ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಆನ್ಲೈನ್ ಮೂಲಕ ಮೋಸ, ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದಕ್ಕೆ ದೊಡ್ಡ ಉದಾಹರಣೆ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಆನ್ಲೈನ್ ಮೋಸದ ಜಾಲಗಳು ಹೆಚ್ಚುತ್ತಿದ್ದು ಕಳೆದ 5 ತಿಂಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 4 ಕೋಟಿ ರೂಪಾಯಿಯನ್ನು ಜನರು ಕಳೆದುಕೊಂಡಿದ್ದಾರೆ ಎನ್ನುವ ಸತ್ಯ ಬಯಲಾಗಿದೆ. ಅದರಲ್ಲೂ ಶೇರು ಮಾರ್ಕೆಟ್ ನಲ್ಲಿ ದೊಡ್ಡ ಬಂಡವಾಳ ಹೂಡುತ್ತಿದ್ದ ಹಿರಿಯ ನಾಗರಿಕರೊಬ್ಬರು ಇಂತಹದ್ದೇ ಆನ್ಲೈನ್ ಮೋಸದ ಜಾಲಕ್ಕೆ ಒಳಗಾಗಿ ನಾಲ್ಕೇ ದಿನದಲ್ಲಿ 2.20 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
ಇದು ಅಚ್ಚರಿ ಎನಿಸಿದರೂ, ಸತ್ಯ ಘಟನೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಹಿರಿಯ ನಾಗರಿಕರೊಬ್ಬರು ಇಷ್ಟು ದೊಡ್ಡ ಮೊತ್ತ ಕಳೆದುಕೊಂಡವರು. ಹೌದು ಕಳೆದ ಹಲವು ವರ್ಷಗಳ ಹಿಂದೆಯೇ ಅವರು ಶೇರು ಮಾರುಕಟ್ಟೆಯಲ್ಲಿ ಒಂದಷ್ಟು ಹಣ ಹೂಡಿಕೆ ಮಾಡಿದ್ದರು. ಅದರಿಂದ ಇತ್ತೀಚೆಗೆ 13 ಕೋಟಿಯಷ್ಟು ಲಾಭವಾಗಿತ್ತು. ಇದನ್ನೆಲ್ಲವನ್ನೂ ಗಮನಿಸಿದ್ದ ಆನ್ಲೈನ್ ಖದೀಮರು ಈ ಹಿರಿಯ ನಾಗರಿಕರಿಗೆ ವಾಟ್ಸಾಪ್ ಮೂಲಕವೇ ಕೊರಿಯರ್ ಆಫೀಸ್ ನವರಂತೆ ಕರೆ ಮಾಡಿದ್ದರು. ಕರೆಮಾಡಿ ನೀವು ಎಂಡಿಎಂಎ ಸೇರಿದಂತೆ ಹಲವು ಮಾದಕ ವಸ್ತುಗಳನ್ನು ಕಳುಹಿಸಿದ್ದೀರಾ ಎಂದಿದ್ದಾರೆ.
ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಅಶ್ವತ್ಥ ನಾರಾಯಣ್
ಜೊತೆಗೆ ಇದನ್ನು ಪೊಲೀಸ್ ಇಲಾಖೆಗೆ ತಿಳಿಸುತ್ತೇವೆ ಎಂದು ಹೇಳಿ ಆ ಖದೀಮನದೇ ಗುಂಪಿನ ಮತ್ತೊಬ್ಬನಿಗೆ ಫೋನ್ ಕನೆಕ್ಟ್ ಮಾಡಿ ಮಾತನಾಡಿಸಿದ್ದಾನೆ. ಅವನು ನಿಮ್ಮ ಮನೆಗೆ ನಮ್ಮ ಪೊಲೀಸಿನವರು ಬರುತ್ತಾರೆ ಎಂದು ಹೇಳಿದ್ದಾರೆ. ಹೀಗೆ ಹೇಳಿ ಪೊಲೀಸ್ ಡ್ರೆಸ್ ನಲ್ಲಿ ಇದ್ದ ತಮ್ಮ ಫೋಟೋ ಹಾಗೂ ಇತರರನ್ನು ಬಂಧಿಸಿದ್ದೇವೆ ಎಂದು ಯಾರದ್ದೋ ಫೋಟೋಗಳನ್ನೆಲ್ಲಾ ಈ ಹಿರಿಯ ನಾಗರಿಕನ ವಾಟ್ಸಾಪ್ ಗೆ ಕಳುಹಿಸಿದ್ದಾರೆ. ಇದನ್ನೆಲ್ಲಾ ನಂಬಿದ ಹಿರಿಯ ವ್ಯಕ್ತಿ ಒಂದೆರಡು ಸಾವಿರವಲ್ಲ ಬರೋಬ್ಬರಿ 1.20 ಕೋಟಿ ಹಣವನ್ನು ಕೊಟ್ಟಿದ್ದಾರೆ. ಯಾವುದೋ ಸರಿಯಾದ ಮಿಕ ಸಿಕ್ಕಿದೆ ಎಂದು ಗೊತ್ತಾಗುತ್ತಿದ್ದಂತೆ ಈ ಆನ್ಲೈನ್ ಖದೀಮರ ತಂಡದ ಮತ್ತೊಬ್ಬ ನಾವು ಆರ್.ಬಿ.ಐ ಅಧಿಕಾರಿಗಳು ನಿಮ್ಮ ಬಳಿ ದೊಡ್ಡ ಪ್ರಮಾಣದಲ್ಲಿ ಬ್ಲಾಕ್ ಮನಿ ಇದೆ.
ನಿಮ್ಮ ಮೇಲೆ ಕ್ರಮವಾಗುತ್ತದೆ ಎಂದೆಲ್ಲಾ ಹೆದರಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಖತರ್ನಾಕ್ ಗಳು ನಿಮ್ಮ ಖಾತೆಯಲ್ಲಿರುವ ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡಿಕೊಡುತ್ತೇವೆ. ಅದಕ್ಕಾಗಿ ಒಂದು ಕೋಟಿ ಕೊಡಿ ಎಂದು ಹೇಳಿದ್ದಾರೆ. ಇದನ್ನು ನಂಬಿದ ಹಿರಿಯ ವ್ಯಕ್ತಿ ಮತ್ತೆ ಒಂದು ಕೋಟಿ ಕೊಟ್ಟಿದ್ದಾನೆ. ಈ ಮೋಸ ಇಷ್ಟಕ್ಕೆ ನಿಲ್ಲುವುದಿಲ್ಲ. ಇದು ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಹೀಗೆ ಬರೋಬ್ಬರಿ 2.20 ಕೋಟಿ ಹಣ ಕಳೆದುಕೊಂಡ ಬಳಿಕ ಕೊಡಗು ಪೊಲೀಸರಿಗೆ ದೂರು ನೀಡಿದ್ದಾರೆ. ಇಲ್ಲದಿದ್ದರೆ ಈ ವ್ಯಕ್ತಿ ಇನ್ನಷ್ಟು ಹಣ ಕಳೆದುಕೊಳ್ಳಬೇಕಾಗಿತ್ತು.
ಮೈತ್ರಿಕೂಟದ ಅಭ್ಯರ್ಥಿ ರಿಯಲ್ ಎಸ್ಟೇಟ್ ಉದ್ಯಮಿ: ಸಚಿವ ಚಲುವರಾಯಸ್ವಾಮಿ ಲೇವಡಿ
ಇದೊಂದೇ ಪ್ರಕರಣ ಅಲ್ಲ, ಕಳೆದ ಐದು ತಿಂಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ 35 ಆನ್ಲೈನ್ ಮೋಸದ ಪ್ರಕರಣಗಳು ದಾಖಲಾಗಿವೆ. ಪ್ರತೀ ಪ್ರಕರಣದಲ್ಲಿ ನಾಲ್ಕು ಲಕ್ಷ, 10 ಲಕ್ಷ ಹೀಗೆ ಒಟ್ಟು ನಾಲ್ಕು ಕೋಟಿಯಷ್ಟು ಹಣವನ್ನು ಜನರು ಕಳೆದುಕೊಂಡಿದ್ದಾರೆ. ಜನರು ಇವುಗಳ ಬಗ್ಗೆ ಗಂಭೀರವಾಗಿ ಗಮನಹರಿಸಿ. ಯಾವುದೇ ಸಮಸ್ಯೆಗಳಾದರೂ, ಒಂದು ವೇಳೆ ನೀವು ತಪ್ಪೇ ಮಾಡಿದ್ದರೂ ನೇರವಾಗಿ ಇಲಾಖೆಗೆ ದೂರು ಕೊಡಿ. ಮುಂದೆ ನಿಮಗೆ ಆಗುವ ದೊಡ್ಡ ತೊಂದರೆಯಿಂದ ನೀವು ತಪ್ಪಿಸಿಕೊಳ್ಳಬಹುದು ಎಂದು ಕೊಡಗು ಎಸ್ಪಿ ಕೆ. ರಾಮರಾಜನ್ ಹೇಳಿದ್ದಾರೆ. ಒಟ್ಟಿನಲ್ಲಿ ಜನರ ಆನ್ಲೈನ್ ಮೋಸ ಜಾಲದ ಬಗ್ಗೆ ತಿಳುವಳಿಕೆ ಕಡಿಮೆ ಇರುವ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.