ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ದೂರಿನ ಹಿನ್ನಲೆಯಲ್ಲಿ ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇರೆಗೆ ಮೂವರು ಬಾಂಗ್ಲಾ ಪ್ರಜೆಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಆ.09): ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ದೂರಿನ ಹಿನ್ನಲೆಯಲ್ಲಿ ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇರೆಗೆ ಮೂವರು ಬಾಂಗ್ಲಾ ಪ್ರಜೆಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾದೇಶದ ಪ್ರಜೆಗಳಾದ ಖಲೀಲ್‌ ಚಪ್ರಾಸಿ, ಅಬ್ದುಲ್‌ ಖಾದರ್‌ ಹಾಗೂ ಮೊಹಮ್ಮದ್‌ ಜೈಹೀದ್‌ ಬಂಧಿತರು.

ಆರೋಪಿಗಳಿಂದ ವೀಸಾ ಹಾಗೂ ಪಾಸ್‌ಪೋರ್ಟ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಗರಕ್ಕೆ ಪ್ರವಾಸದ ವೀಸಾದಲ್ಲಿ ಬಂದಿದ್ದ ಆರೋಪಿಗಳು, ವೀಸಾ ಅವಧಿ ಮುಗಿದ ಬಳಿಕ ಮರಳದೆ ಅಕ್ರಮವಾಗಿ ನೆಲೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎನ್‌ಆರ್‌ಐ ಫೋರಂಗೆ ಬಲ ತುಂಬಲು ಅನಿವಾಸಿ ಕನ್ನಡಿಗರ ಆಗ್ರಹ

ಗಡಿದಾಟಿಸಲು ಸಹಕರಿಸಿದ ಆರೋಪ: ಪ್ರವಾಸದ ವೀಸಾದಡಿ ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಖಲೀಲ್‌, ಆನಂತರ ಬೆಂಗಳೂರಿಗೆ ಬಂದು ಬೆಳ್ಳಂದೂರು ಸಮೀಪ ನೆಲೆಸಿದ್ದ. ಖಾಸಗಿ ಕಂಪನಿಯಲ್ಲಿ ಸ್ವಚ್ಛತಾ ವಿಭಾಗದಲ್ಲಿ ಆತ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಅದೇ ರೀತಿ ಹದಿನೈದು ದಿನಗಳ ಹಿಂದೆ ಅಬ್ದುಲ್‌ ಖಾದರ್‌ ಹಾಗೂ ಮೊಹಮ್ಮದ್‌ ನಗರಕ್ಕೆ ಬಂದಿದ್ದರು. 

ಪೈಕಿ ಖಾದರ್‌, ನಗರದಲ್ಲಿ ಕಡಿಮೆ ಬೆಲೆಗೆ ಬಟ್ಟೆ ಖರೀದಿಸಿ ತನ್ನೂರಿನಲ್ಲಿ ಮಾರಾಟ ಮಾಡಲು ಅವುಗಳನ್ನು ತೆಗೆದುಕೊಂಡು ಮರಳುತ್ತಿದ್ದ. ಇನ್ನು ತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ಮೊಹಮ್ಮದ್‌ ದುಡಿಯುತ್ತಿದ್ದ. ಮೂರು ದಿನಗಳ ಹಿಂದೆ ತಾನು ಖರೀದಿಸಿದ್ದ ಬಟ್ಟೆಗಳನ್ನು ತೆಗೆದುಕೊಂಡು ಊರಿಗೆ ಮರಳಲು ಖಾದರ್‌ ಮುಂದಾಗಿದ್ದಾಗ ಎನ್‌ಐಎ ಬಲೆಗೆ ಬಿದ್ದಿದ್ದಾನೆ. ಆನಂತರ ಆತನ ಮಾಹಿತಿ ಆಧರಿಸಿ ಇನ್ನುಳಿದ ಇಬ್ಬರನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಕಾಂಗ್ರೆಸ್‌ ಶಾಸಕ, ಸಚಿವರ ಬಳಿ ಡಿಸಿಎಂ ಚರ್ಚೆ

ಬೆಂಗಳೂರಿಗೆ ಬಿಬಿಎಂಪಿಯಲ್ಲಿ ಕಸ ಸಾಗಾಣಿಕೆ ಹಾಗೂ ಸ್ವಚ್ಛತಾ ಕೆಲಸ (ಹೌಸ್‌ ಕಿಂಪಿಂಗ್‌) ಸೇರಿ ಇತರೆ ಕೆಲಸಗಳಿಗೆ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳನ್ನು ನೇಮಿಸುವ ಜಾಲದಲ್ಲಿ ಈ ಮೂವರು ಸಕ್ರಿಯವಾಗಿದ್ದರು ಎಂಬ ಶಂಕೆ ಮೂಡಿದೆ. ಅಕ್ರಮವಾಗಿ ಬಾಂಗ್ಲಾ ಗಡಿ ದಾಟಿಸಿ ಬಳಿಕ ಅವುಗಳನ್ನು ನಗರಕ್ಕೆ ಕರೆತಂದು ನೇಮಿಸುತ್ತಿದ್ದರು. ಗಡಿದಾಟಿಸಲು ಬಾಂಗ್ಲಾ ಪ್ರಜೆಗಳಿಗೆ ಖಾದರ್‌, ಖಲೀಲ್‌ ಹಾಗೂ ಮೊಹಮ್ಮದ್‌ ಸಹಕರಿಸಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.