Asianet Suvarna News Asianet Suvarna News

ಮಂಗಳೂರು: ಪಿಸ್ತೂಲ್‌, ಡ್ರಗ್ಸ್‌ ಸಹಿತ 3 ಪೆಡ್ಲರ್‌ಗಳ ಬಂಧನ

ಬಂಧಿತರಿಂದ 180 ಗ್ರಾಂ ತೂಕದ 9 ಲಕ್ಷ ರು. ಮೌಲ್ಯದ ಎಂಡಿಎಂಎ, 2 ಮಾರುತಿ ಸ್ವಿಫ್ಟ್‌ ಕಾರುಗಳು, 4 ಮೊಬೈಲ್‌ ಫೋನ್‌ಗಳು 22,050 ರು. ನಗದು, ಪಿಸ್ತೂಲ್‌, ಸಜೀವ ಗುಂಡು, 2 ಡ್ರಾಗನ್‌ ಚೂರಿಗಳು, ಡಿಜಿಟಲ್‌ ತೂಕದ ಮಾಪನ ಸೇರಿದಂತೆ 27.62 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

3 Drug Peddlers Arrested in Mangaluru grg
Author
First Published Jul 22, 2023, 2:00 AM IST

ಮಂಗಳೂರು(ಜು.22): ಡ್ರಗ್ಸ್‌ ಮುಕ್ತ ಮಂಗಳೂರು ಕಾರ್ಯಾಚರಣೆಯನ್ನು ಮತ್ತಷ್ಟುಬಿಗುಗೊಳಿಸಿರುವ ಮಂಗಳೂರು ನಗರ ಪೊಲೀಸರು ನಗರದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಡ್ರಗ್‌ ಪೆಡ್ಲರ್‌ಗಳನ್ನು ಪಿಸ್ತೂಲ್‌ ಹಾಗೂ ಡ್ರಗ್‌ ಸಮೇತ ಬಂಧಿಸಿದ್ದಾರೆ.

ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌, ಉಳ್ಳಾಲದ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ಸಿಸಿಬಿ ಪೊಲೀಸ್‌ ತಂಡ ದಾಳಿ ನಡೆಸಿ, ಬಂಟ್ವಾಳ ಫರಂಗಿಪೇಟೆಯ ಪುದು ಗ್ರಾಮದ ಮುಹಮ್ಮದ್‌ ನಿಯಾಝ್‌ (28), ತಲಪಾಡಿ ಕೆಸಿ ರೋಡ್‌ನ ನಿಶಾದ್‌ (31), ಪಡೀಲ್‌ ಕಣ್ಣೂರಿನ ಮಹಮ್ಮದ್‌ ರಝೀನ್‌ (24) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ದಕ್ಷಿಣ ಕನ್ನಡ: ಮಾದಕ ವಸ್ತು ಮಿಶ್ರಿತ 100 ಕೆ.ಜಿ.ಚಾಕೊಲೆಟ್‌ ವಶ

ಬಂಧಿತರಿಂದ 180 ಗ್ರಾಂ ತೂಕದ 9 ಲಕ್ಷ ರು. ಮೌಲ್ಯದ ಎಂಡಿಎಂಎ, 2 ಮಾರುತಿ ಸ್ವಿಫ್ಟ್‌ ಕಾರುಗಳು, 4 ಮೊಬೈಲ್‌ ಫೋನ್‌ಗಳು 22,050 ರು. ನಗದು, ಪಿಸ್ತೂಲ್‌, ಸಜೀವ ಗುಂಡು, 2 ಡ್ರಾಗನ್‌ ಚೂರಿಗಳು, ಡಿಜಿಟಲ್‌ ತೂಕದ ಮಾಪನ ಸೇರಿದಂತೆ 27.62 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿ ನಿಯಾಝ್‌ ಎಂಬಾತನ ವಿರುದ್ಧ ನಗರದ ಉರ್ವಾ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರತ ಎಎಸ್‌ಐಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಹಲ್ಲೆ ಪ್ರಕರಣ, ಸುರತ್ಕಲ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸೆನ್‌ ಕ್ರೈಂ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 2 ಪ್ರಕರಣ, ಉಡುಪಿಯ ಗಂಗೊಳ್ಳಿ ಠಾಣೆಯಲ್ಲಿ 2 ದರೋಡೆ ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ, ಕೊಣಾಜೆ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ 2 ಪ್ರಕರಣಗಳು ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯದ ವಿಚಾರಣೆ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ವಾರೆಂಟ್‌ ಜಾರಿಯಾಗಿರುತ್ತದೆ ಎಂದು ಪೊಲೀಸ್‌ ಕಮಿಷನರ್‌ ವಿವರಿಸಿದರು.

ಮಹಮ್ಮದ್‌ ರಝೀನ್‌ ಎಂಬಾತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.

ಡಿಕ್ಷನರಿ ಒಳಗೆ ಡ್ರಗ್‌್ಸ ಬಚ್ಚಿಟ್ಟು ಪೂರೈಸುತ್ತಿದ್ದ ವಿದೇಶಿಗ

ಹೆದರಿಸಲು ಪಿಸ್ತೂಲ್‌ ಬಳಕೆ:

ಆರೋಪಿಗಳು ಡ್ರಗ್ಸ್‌ ಪೂರೈಕೆ ವೇಳೆ ಅಡ್ಡಿಪಡಿಸುವವರನ್ನು ಹೆದರಿಸಲು ಪಿಸ್ತೂಲ್‌ ಹಾಗೂ ಡ್ರಾಗನ್‌ ಚೂರಿಗಳನ್ನು ಹೊಂದಿದ್ದರು. ಮೇಲ್ನೋಟಕ್ಕೆ ಡ್ರಗ್ಸ್‌ನ್ನು ಉತ್ತರ ಭಾರತದಿಂದ ತರಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಡ್ರಗ್ಸ್‌ನ್ನು ಮಾರಾಟಕ್ಕೆ ಹಿಂದೇಟು ಹಾಕುವವರಿಗೆ ಪಿಸ್ತೂಲ್‌ ತೋರಿಸಿ ಹೆದರಿಸುತ್ತಿರುವ ಅಂಶ ಗೊತ್ತಾಗಿದೆ. ಅಲ್ಲದೆ ಪ್ರಮುಖ ಆರೋಪಿ ಮೊಹಮ್ಮದ್‌ ನಿಯಾಜ್‌ ಈ ಹಿಂದೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದರಿಂದ ತನ್ನ ದಂಧೆಗೆ ಅಡ್ಡಿಪಡಿಸುವ ಪೊಲೀಸರ ವಿರುದ್ಧವೂ ದಾಳಿ ನಡೆಸಲು ಈತ ಉದ್ದೇಶಿಸಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಆರೋಪಿಗಳು ಮುಂಬೈ, ಗೋವಾ, ಬೆಂಗಳೂರುಗಳಲ್ಲಿ ಡ್ರಗ್ಸ್‌ ಮಾರಾಟ ನೆಟ್‌ವರ್ಕ್ ಹೊಂದಿದ್ದು, ಮಂಗಳೂರಿನಲ್ಲಿ ಸಣ್ಣ ಪ್ಯಾಕೆಟ್‌ ಮಾಡಿ ಡ್ರಗ್ಸ್‌  ಮಾರಾಟಕ್ಕೆ ಉದ್ದೇಶಿಸಿದ್ದರು. ಈ ದಂಧೆಯಲ್ಲಿ ಇನ್ನಷ್ಟುಮಂದಿ ಒಳಗೊಂಡಿರುವ ಶಂಕೆ ಇದ್ದು, ಮತ್ತಷ್ಟುತನಿಖೆ ನಡೆಸಲಾಗುತ್ತಿದೆ ಎಂದರು.

ಪೊಲೀಸರಿಗೆ ಬಹುಮಾನ:

ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದಲ್ಲಿ ಪೊಲೀಸ್‌ ನಿರೀಕ್ಷರಾದ ಶ್ಯಾಮ್‌ ಸುಂದರ್‌, ಪಿಎಸ್‌ಐ ರಾಜೇಂದ್ರ, ಸುದೀಪ್‌, ಶರಣಪ್ಪ ಭಂಡಾರಿ, ನರೇಂದ್ರ ಭಾಗವಹಿಸಿದ್ದು, ತಂಡಕ್ಕೆ 20,000 ರು. ನಗದು ಬಹುಮಾನ ಘೋಷಿಸುವುದಾಗಿ ಕಮಿಷನರ್‌ ತಿಳಿಸಿದರು. ಡಿಸಿಪಿಗಳಾದ ಅಂಶು ಕುಮಾರ್‌, ದಿನೇಶ್‌ ಕುಮಾರ್‌ ಇದ್ದರು.

Follow Us:
Download App:
  • android
  • ios