ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು ಕಂಡ ಘಟನೆ ಇಂದು ಮುಂಜಾನೆ ನಡೆದಿದೆ.

ಶಿವಮೊಗ್ಗ (ಡಿ.11): ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು ಕಂಡ ಘಟನೆ ಇಂದು ಮುಂಜಾನೆ ನಡೆದಿದೆ. ಕೆಎ 17 ಎಂಎ 3581 ಸಂಖ್ಯೆಯ ಬೊಲೆರೋ ಕಾರಿಗೆ ಕೆಎ 27 ಸಿ 3924 ಕ್ರಮ ಸಂಖ್ಯೆಯ ಗೂಡ್ಸ್‌ ಲಾರಿ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಸ್ಥಳದಲ್ಲಿ ವಿವೇಕ್, ಕಾರ್ತಿಕ್, ಮತ್ತು ಮೋಹನ್ ಸಾವನಪ್ಪಿದರೆ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಗಾಯಗೊಂಡಿರುವ ರುದ್ರೇಶ್ ಪಾಟೀಲ್‌ರನ್ನು ಶಿವಮೊಗ್ಗ ಮೆಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಲಾರಿ ಚಾಲಕ ಪರಾರಿಯಾಗಿದ್ದು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ ಬಳಿ ಬಸ್‌ಗೆ ಕಾರು ಡಿಕ್ಕಿ: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಸಮೀಪದ ಮೈನೇರು ಎಂಬಲ್ಲಿ ಶನಿವಾರ ಬೆಳಗ್ಗೆ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೂವರೆ ವರ್ಷದ ಮಗು ಸಹಿತ ಮೂರು ಮಂದಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ ಮೂಲದ ಬೆಂಗಳೂರಿನ ನಿವಾಸಿಗಳಾದ ಶ್ರೀಕಾಂತ್‌, ಅವರ ಪತ್ನಿ ಪ್ರಥ್ವಿಶಾ ಹಾಗೂ ಅವರ ಒಂದೂವರೆ ವರ್ಷದ ಪುತ್ರಿ ಗಮ್ಯ ಮೃತಪಟ್ಟದುರ್ದೈವಿಗಳು. ಬೆಳ್ತಂಗಡಿ-ಕಾರ್ಕಳ ಮಾರ್ಗವಾಗಿ ಶೃಂಗೇರಿಗೆ ಇವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ನೆಲ್ಲಿಕಾರು ಮೈನೇರುವಿನಲ್ಲಿ ಖಾಸಗಿ ಬಸ್‌ಗೆ ಇವರು ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆಯಿತು. ಮೂವರು ಸ್ಥಳದಲ್ಲೇ ಅಸುನೀಗಿದರು. ಅಪಘಾತದ ತೀವ್ರತೆಗೆ ಕಾರು ಬಸ್‌ನ ಅಡಿಭಾಗದಲ್ಲಿ ಸಿಲುಕಿ ಸಂಪೂರ್ಣ ನುಜ್ಜುಗುಜ್ಜಾಗಿದೆ.

Bengaluru: ಟೀ ಅಂಗಡಿ ಹುಡುಗರ ಮೇಲಿನ ಹಲ್ಲೆ ಪ್ರಕರಣಕ್ಕೆ ರಿವೇಂಜ್‌ ಟ್ವಿಸ್ಟ್‌

ರೈಲಿಗೆ ಸಿಲುಕಿ ವ್ಯಕ್ತಿ ಸಾವು: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಚಾಮರಾಜನಗರ- ಮೈಸೂರು ನಡುವೆ ಸಂಚರಿಸುವ ಪ್ಯಾಸೆಂಜರ್‌ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಕವಲಂದೆ ರೈಲು ನಿಲ್ದಾಣದ ಬಳಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ ಆರ್‌. ಸುಂದರನ್‌ ಎಂಬವರ ಪುತ್ರ ಆನಂದಬಾಬು (40) ಮೃತಪಟ್ಟವ್ಯಕ್ತಿ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು ಎಂದು ನಂಜನಗೂಡು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸ್‌ ಠಾಣೆಯ ಎಸ್‌ಐ ಶ್ರೀನಿವಾಸಮೂರ್ತಿ, ಸಿಬ್ಬಂದಿಗಳಾದ ಸಾಗರ್‌, ಮಹದೇವಸ್ವಾಮಿ ಭೇಟಿ ನೀಡಿದ್ದರು. ನಂಜನಗೂಡು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Shootout At Bengaluru: ಆಂಧ್ರದ ರೌಡಿ ಮೇಲೆ ನಗರದಲ್ಲಿ ಶೂಟೌಟ್‌

ಬಸ್‌ ಡಿಕ್ಕಿ: ಕೊಟ್ಟಾರ ಚೌಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿರುವ ಮೇಘಾ ರಂಜಿತ್‌ ಪೈ (34) ಮೃತಪಟ್ಟವರು. ಡಿ.3ರಂದು ಮುಸ್ಸಂಜೆ ಕೊಟ್ಟಾರ ಚೌಕಿ ಬಳಿ ರಸ್ತೆ ದಾಟುತ್ತಿದ್ದಾಗ ಅತೀ ವೇಗದಿಂದ ಚಲಿಸಿಕೊಂಡು ಬಂದ ಖಾಸಗಿ ಬಸ್‌ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಲತಃ ಮಂಗಳೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಇವರು ತನ್ನ ತಾಯಿಯನ್ನು ನೋಡಲು ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂಚಾರ ಪಶ್ಚಿಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.