12ರ ಹರೆಯದ ಬಾಲಕಿಯ ಮದುವೆಯಾಗಿ ಗರ್ಭಿಣಿ ಮಾಡಿದ್ದ 29 ವರ್ಷದ ವ್ಯಕ್ತಿಯ ಬಂಧನ!
12 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಲ್ಲದೆ, ಆಕೆಯನ್ನು ಗರ್ಭಿಣಿ ಮಾಡಿದ್ದ 29 ವರ್ಷದ ವ್ಯಕ್ತಿಯನ್ನು ಥಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮುಂಬೈ (ಜ.5): ದೇಶದಲ್ಲಿ ಬಾಲ್ಯ ವಿವಾಹ ಕಾನೂನುಬಾಹಿರವಾಗಿದ್ದರೂ, ಈ ಪದ್ಧತಿ ಇನ್ನೂ ಮುಂದುವರಿದಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಮುಂಬೈನ ಥಾಣೆಯಲ್ಲಿ ಘಟನೆ ನಡೆದಿದೆ. ಆರು ತಿಂಗಳ ಹಿಂದ ಥಾಣೆಯಲ್ಲಿ ಬಾಲ್ಯ ವಿವಾಹ ನಡೆದ ಘಟನೆಗೆ ಸಂಬಂಧಿಸಿದಂತೆ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆ ವ್ಯಕ್ತಿ ಪದೇ ಪದೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಇದರಿಂದ ಆಕೆ ಗರ್ಭಿಣಿಯೂ ಆಗಿದ್ದಾಳೆ. ಆರೋಪಿ ಮತ್ತು ಅಪ್ರಾಪ್ತೆ ಇಬ್ಬರೂ ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಪನ್ವೇಲ್‌ನ ಸ್ಥಳೀಯ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ, ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಬಳಿಕ ಜನರು ಪೊಲೀಸರಿಗೆ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಖಂಡೇಶ್ವರ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.
ಕಾನೂನಿನ ನಿಷೇಧದ ಹೊರತಾಗಿಯೂ, ಭಾರತದಲ್ಲಿ ಹೆಚ್ಚುತ್ತಿರುವ ಸಾಕ್ಷರತಾ ದರದ ನಂತರವೂ ಬಾಲ್ಯ ವಿವಾಹವು ನಿರಂತರ ಸಮಸ್ಯೆಯಾಗಿ ಉಳಿದಿರುವುದು ಆಘಾತಕಾರಿಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯದ ಪ್ರಮಾಣ, ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ದೈನಂದಿನ ಪ್ರಕರಣಗಳೊಂದಿಗೆ, ನಮ್ಮ ದೇಶದ ಮಕ್ಕಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಪ್ರಕರಣಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.