ಇಬ್ಬರನ್ನ ಪ್ರೀತಿಸಿ ಜೀವಕ್ಕೆ ಕುತ್ತು ತಂದುಕೊಂಡ, ಲವ್ ಮಾಡುವಂತೆ ಬೆದರಿಕೆ ಹಾಕಿದವ ಜೈಲು ಸೇರಿದ
* ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವಕನ ದಾರುಣ ಅಂತ್ಯ
* ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ ಜೀವ ಉಳಿಸಲು ಹೋಗಿ ಸಾವನ್ನಪ್ಪಿದ ಯುವಕ
* ಲವ್ ಮಾಡುವಂತೆ ಬೆದರಿಕೆ ಹಾಕಿದವ ಜೈಲುಪಾಲಾದ
ಮಂಗಳೂರು, (ಜ.29): ತ್ರಿಕೋನ ಪ್ರೇಮ ಪ್ರಕರಣದಲ್ಲಿ (Love Case) ಕಲಹ ಉಂಟಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಪ್ರೇಯಸಿಯನ್ನು ರಕ್ಷಿಸಲು ಹೋದ ಯುವಕ ತಾನೇ ಬಲಿಯಾದ ಘಟನೆ ಮಂಗಳೂರು(Mangaluru) ನಗರ ಹೊರವಲಯದ ಸೋಮೇಶ್ವರ ಬೀಚ್‍ನಲ್ಲಿ ನಡೆದಿದೆ.
ಮುನ್ನೂರು ಗ್ರಾಮದ ಉಳಿಯ ನಿವಾಸಿ ಲಾಯ್ಡ್ ಡಿಸೋಜ (26) ಸಮುದ್ರಪಾಲಾದ ಯುವಕ. ಮೃತ ಲಾಯ್ಡ್ ಡಿಸೋಜ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಕಲಹ ಉಂಟಾದಾಗ ಶುಕ್ರವಾರ ಸಂಜೆ ಸೋಮೇಶ್ವರ ಬೀಚ್‍ನಲ್ಲಿ ಮಾತುಕತೆ ನಡೆಸಲು ಮೂವರು ತೆರಳಿದ್ದರು. ಲಾಯ್ಡ್ ಪ್ರೇಯಸಿಯರಾದ ಅಶ್ವಿತಾ ಪೆರಾವೊ ಹಾಗೂ ಡಾಕ್ಲಿನ್ ನಡುವೆ ಮಾತುಕತೆ ವೇಳೆ ಜಗಳ ಏರ್ಪಟ್ಟಿದ್ದು, ಅಶ್ವಿತಾ ನೊಂದು ಸಮುದ್ರಕ್ಕೆ ಹಾರಿದ್ದಾರೆ.
Crime News ವಿದ್ಯಾರ್ಥಿನಿ ಜತೆ ಶಿಕ್ಷಕ ರೊಮ್ಯಾನ್ಸ್, ವಿಡಿಯೋ ವೈರಲ್ ಆಗ್ತಿದ್ದಂತೆಯೇ ಎಚ್ಚೆತ್ತ ಬಿಇಒ
ಕೂಡಲೇ ಆಕೆಯನ್ನು ರಕ್ಷಿಸಲು ಲಾಯ್ಡ್ ಕೂಡಾ ಸಮುದ್ರಕ್ಕೆ ಹಾರಿದ್ದ. ಈ ವೇಳೆ ಘಟನೆಯನ್ನು ಗಮನಿಸಿದ ಸ್ಥಳೀಯರು ಅವರಿಬ್ಬರನ್ನು ರಕ್ಷಿಸಲು ಮುಂದಾಗಿದ್ದಾರೆ. ಅಶ್ವಿತಾಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಲಾಯ್ಡ್‍ನನ್ನು ದಡಕ್ಕೆ ತರುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.
ಲವ್ ಮಾಡದಿದ್ದರೆ ಕೊಲೆ ಕೊಲೆ ಬೆದರಿಕೆ
ಚಾಮರಾಜನಗರ: ಲವ್ ಮಾಡದಿದ್ದರೆ ನಿನ್ನ ಅಣ್ಣನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ ಇಬ್ಬರು ಯುವಕರಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಬಿ.ಎಸ್.ಭಾರತಿ ಪಾಠ ಹೇಳಿ, 22 ದಿನ ಜೈಲು ಶಿಕ್ಷೆ ವಿಧಿಸಿದ್ದಾರೆ
ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದ ಚೇತನ್(23) ಹಾಗೂ ಗುರುಪ್ರಸಾದ್(25) ಎಂಬವರು ಶಿಕ್ಷೆಗೊಳಗಾದವರು. 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಚೇತನ್ ಪ್ರೀತಿಸು ಎಂದು ಪೀಡಿಸುತ್ತಿದ್ದನ್ನಲ್ಲದೇ ಹಿಂಬಾಲಿಸಿ ಚುಡಾಯಿಸುತ್ತಿದ್ದ. ಇವನ ಕಾರ್ಯಕ್ಕೆ ಸ್ನೇಹಿತ ಗುರುಪ್ರಸಾದ್ ಸಾಥ್ ಕೊಡುತ್ತಿದ್ದ.
ಇದೇ ರೀತಿ 2019 ರ ಮೇ 8 ರಂದು ಬಾಲಕಿ, ಅಜ್ಜಿ ಮನೆಗೆ ತೆರಳಿದ್ದ ವೇಳೆ ಆಕೆಗೆ ಇವರಿಬ್ಬರು ಫೋನ್ ಮಾಡಿ ಆಸ್ಪತ್ರೆ ಬಳಿ ಈಗ ಬರದಿದ್ದರೆ, ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅಂಜಿ ಬಾಲಕಿ ತೆರಳಿದ್ದ ವೇಳೆ, ಆಕೆಗೆ ಚೇತನ್ ಲೈಂಗಿಕವಾಗಿ ಪೀಡಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಕೃತ್ಯಕ್ಕೆ ಗುರುಪ್ರಸಾದ್ ಸಾಥ್ ಕೊಟ್ಟಿದ್ದ. ಈ ಸಂಬಂಧ ಬಾಲಕಿ ಪಾಲಕರು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ದೂರು ನೀಡಿದ್ದರು.
ವಾದ - ಪ್ರತಿವಾದ ಆಲಿಸಿದ ಚಾಮರಾಜನಗರ ನ್ಯಾಯಾಧೀಶರು, ಚುಡಾಯಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮುಂದೆ ಈ ರೀತಿ ಕೃತ್ಯ ಎಸಗಬಾರದು, ಉತ್ತಮ ನಡವಳಿಕೆ ರೂಢಿಸಿಕೊಳ್ಳಬೇಕೆಂದು ಎಚ್ಚರಿಕೆ ಕೊಟ್ಟು 22 ದಿನಗಳ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ, ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.
ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ನಿಗೂಢ ಸಾವು
ಚಿಕ್ಕಮಗಳೂರು: ಇತ್ತೀಚಿಗೆ ಮದುವೆಯಾಗಿದ್ದ ನವ ವಿವಾಹಿತೆ ಜಡಗನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ.
ಸುಮಾ, ಶಂಕಾಸ್ಪದವಾಗಿ ಸಾವನ್ನಪ್ಪಿರುವ ವಿವಾಹಿತ ಮಹಿಳೆ. ಯುವತಿ ಪತಿ ಅಭಿಷೇಕ್ ಜೊತೆಯಲ್ಲಿ ನಿನ್ನೆ ದಿನ ಇಡೀ ರಾತ್ರಿ ಅರಣ್ಯ ಪ್ರದೇಶದಲ್ಲೇ ಇದ್ದಳು ಎನ್ನಲಾಗಿದೆ.
ಆದರೆ ಬೆಳಗ್ಗೆ ವೇಳೆಗೆ ನವ ವಿವಾಹಿತೆ ಶವವಾಗಿ ಪತ್ತೆಯಾಗಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ.
ಇನ್ನು ಮೃತ ಯುವತಿ ಒಂದು ವರ್ಷದ ಹಿಂದೆ ಅಭೀಷೇಕ್ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಘಟನೆ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.