ಬೆಂಗಳೂರು(ಫೆ.24): ಅಬಕಾರಿ ಉಪನಿರೀಕ್ಷಕ (ಎಸ್‌ಐ)ಹುದ್ದೆ ಕೊಡಿಸುವುದಾಗಿ ನಂಬಿಸಿ ಮೂವರು ಅಭ್ಯರ್ಥಿಗಳಿಂದ . 25 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಸವೇಶ್ವರನಗರದ ನಿವಾಸಿ ಬಸವರಾಜ್‌ ಎಂಬುವರು ನೀಡಿದ ದೂರಿನ ಮೇರೆಗೆ ಮಲ್ಲಿಕಾರ್ಜುನ್‌ ಬಿರಾದಾರ್‌, ಸಹೋದರ ನಿಂಗರಾಜ್‌ ಹಾಗೂ ಮಾದೇಶ್‌ ಎಂಬುವವರ ವಿರುದ್ಧ ಬಸವೇಶ್ವರ ನಗರ ಪೊಲೀಸರು ಎಫ್‌ಐಆರ್‌ ದಾಖಲಾಗಿದೆ.

ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ಲಕ್ಷಾಂತರ ರು ವಂಚನೆ

ಬಸವರಾಜ್‌ಗೆ ಪರಿಚಿತರ ಮೂಲಕ ಕೆಲ ವರ್ಷಗಳ ಹಿಂದೆ ಆರೋಪಿ ಮಲ್ಲಿಕಾರ್ಜುನ್‌ ಪರಿಚಯವಾಗಿದ್ದ. ಹಣ ಕೊಟ್ಟರೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ. ನನ್ನ ಅಣ್ಣ ನಿಂಗರಾಜ್‌ ಬೆಂಗಳೂರಿನಲ್ಲಿ ಹಲವು ಐಪಿಎಸ್‌ ಹಾಗೂ ಕೆಎಸ್‌ಪಿಸಿ ಅಧಿಕಾರಿಗಳು ಪರಿಚಯವಿದ್ದು, ಕೆಲಸ ಕೊಡಿಸಲಿದ್ದಾರೆ ಎಂದು ನಂಬಿಸಿದ್ದ. ಬಸವರಾಜ್‌ ತನ್ನ ಸ್ನೇಹಿತರಾದ ಈರಪ್ಪ, ಮಲ್ಲಕ್ಕನವರ್‌ ಜತೆ ಬಸವೇಶ್ವರನಗರದ ಖಾಸಗಿ ಹೋಟೆಲ್‌ವೊಂದರಲ್ಲಿ 2019 ಫೆ.10ರಂದು ಆರೋಪಿಗಳನ್ನು ಭೇಟಿಯಾಗಿದ್ದರು. ಮಲ್ಲಿಕಾರ್ಜುನ್‌ ಜತೆ ಬಂದಿದ್ದ ಮಾದೇಶ್‌ ಎಂಬಾತ ತನ್ನನ್ನು ಐಪಿಎಸ್‌ ಅಧಿಕಾರಿ ಎಂದು ದೂರುದಾರರಿಗೆ ಪರಿಚಯಿಸಿಕೊಂಡು ನಂಬಿಕ್ಕೆ ಗಿಟ್ಟಿಸಿಕೊಂಡಿದ್ದ.

ಮೂವರಿಗೆ ಕೆಲಸ ಕೊಡಿಸಲು ಒಟ್ಟು 25 ಲಕ್ಷ ನೀಡಬೇಕು ಎಂದು ಹೇಳಿದ್ದ. ಬಸವರಾಜ್‌ ಹಾಗೂ ಸ್ನೇಹಿತರು ಮುಂಗಡವಾಗಿ 5 ಲಕ್ಷ ಕೊಟ್ಟಿದ್ದರು. ಉಳಿದ 20 ಲಕ್ಷವನ್ನು ದೂರುದಾರರು ಆರೋಪಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದರು. 2020ರಲ್ಲಿ ಪರೀಕ್ಷೆ ಬರೆದರೂ ಪಾಸ್‌ ಆಗಿರಲಿಲ್ಲ. ಹೀಗಾಗಿ ಹಣ ವಾಪಸ್‌ ಕೇಳಿದರೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.