ನವವಿವಾಹಿತನೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು(ಸೆ.04):  ತನ್ನ ಪ್ರೇಯಸಿಯನ್ನು ಮದುವೆ ಮಾಡಿಕೊಂಡ ಎಂಬ ಕಾರಣಕ್ಕೆ ಕೋಪಗೊಂಡು ನವವಿವಾಹಿತನೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಳೇ ಬೈಯಪ್ಪನಹಳ್ಳಿ ಸಮೀಪದ ಗಜೇಂದ್ರ ನಗರದ ಸತೀಶ್‌ (24) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತನ ಸ್ನೇಹಿತ ರಾಕೇಶ್‌ ಹಾಗೂ ದೀಪಕ್‌ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮದುವೆ ಮಾಡಿಕೊಂಡಿರುವ ವಿಚಾರವಾಗಿ ಬೈಯ್ಯಪನಹಳ್ಳಿ ಮೇಲ್ಸೇತುವೆ ಸಮೀಪ ಗೆಳೆಯರ ಮಧ್ಯೆ ಶುಕ್ರವಾರ ರಾತ್ರಿ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ರಾಕೇಶ್‌, ಗೆಳೆಯನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಸತೀಶ್‌ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Bengaluru Crime News: ಯುವತಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

ಮೃತ ಸತೀಶ್‌ ಹಾಗೂ ರಾಕೇಶ್‌ ಬಾಲ್ಯ ಸ್ನೇಹಿತರಾಗಿದ್ದು, ಗಜೇಂದ್ರ ನಗರದಲ್ಲಿ ಅವರು ನೆರೆಹೊರೆಯಲ್ಲೇ ನೆಲೆಸಿದ್ದರು. ಹೂ ಅಲಂಕಾರದ ಕೆಲಸ ಮಾಡಿಕೊಂಡು ಈ ಗೆಳೆಯರು ಜೀವನ ಸಾಗಿಸುತ್ತಿದ್ದರು. ಶ್ರೀರಾಮಪುರದ ಸ್ವರ್ಣ ಎಂಬಾಕೆಯನ್ನು ರಾಕೇಶ್‌ ಪ್ರೀತಿಸುತ್ತಿದ್ದ. ಆದರೆ ತಿಂಗಳ ಹಿಂದೆ ಆಕೆಯ ಜತೆ ಸತೀಶ್‌ ಮದುವೆಯಾಗಿದ್ದ. ಇದರಿಂದ ಕೆರಳಿದ ರಾಕೇಶ್‌, ತನಗೆ ದ್ರೋಹ ಬಗೆದು ನಾನು ಪ್ರೀತಿಸಿ ಹುಡುಗಿಯನ್ನು ವಿವಾಹವಾಗಿದ್ದೀಯಾ ಎಂದು ಸತೀಶ್‌ ಮೇಲೆ ಹಗೆ ಸಾಧಿಸುತ್ತಿದ್ದ. ಇದೇ ವಿಚಾರವಾಗಿ ಕೆಲವು ಬಾರಿ ಮಾತಿನ ಚಕಮಕಿ ಸಹ ನಡೆದಿತ್ತು. ಅಂತೆಯೇ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸತೀಶ್‌ನನ್ನು ಅಡ್ಡಗಟ್ಟಿರಾಕೇಶ್‌ ಹಾಗೂ ದೀಪಕ್‌ ಜಗಳ ಮಾಡಿದ್ದರು. ಆಗ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.