ದೇರಳಕಟ್ಟೆ ಸಮೀಪದ ನಾಟೆಕಲ್‌ ಜಂಕ್ಷನ್‌ನಲ್ಲಿ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ. ಏಕಾಏಕಿ ರಸ್ತೆ ಮಧ್ಯದ ಡಿವೈಡರ್‌ಗೆ ಧಾವಿಸಿ ಸಿದ್ಧಿಕ್‌ ಕಲ್ಲು ಮತ್ತು ಚೂರಿ ಹಿಡಿದು ದಾಂಧಲೆ ನಡೆಸುತ್ತಿದ್ದ ಅಬೂಬಕ್ಕರ್‌ ಸಿದ್ಧಿಕ್‌

ಮಂಗಳೂರು(ಆ.21):  ಗಾಂಜಾ ನಶೆಯಲ್ಲಿ ಚೂರಿ ಹಿಡಿದು ರಸ್ತೆ ಮಧ್ಯೆ ದಾಂಧಲೆ ನಡೆಸುತ್ತಿದ್ದ ಯುವಕನನ್ನು ಉಳ್ಳಾಲ ತಾಲೂಕಿನ ನಾಟೆಕಲ್‌ ಎಂಬಲ್ಲಿ ಕೊಣಾಜೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಉಳ್ಳಾಲ ಮುಕ್ಕಚೇರಿ ಕೈಕೋ ರೋಡ್‌ ನಿವಾಸಿ ಅಬೂಬಕ್ಕರ್‌ ಸಿದ್ಧಿಕ್‌(24) ಬಂಧಿತ ಯುವಕ.

ಶನಿವಾರ ಸಂಜೆ ದೇರಳಕಟ್ಟೆ ಸಮೀಪದ ನಾಟೆಕಲ್‌ ಜಂಕ್ಷನ್‌ನಲ್ಲಿ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ. ಏಕಾಏಕಿ ರಸ್ತೆ ಮಧ್ಯದ ಡಿವೈಡರ್‌ಗೆ ಧಾವಿಸಿ ಸಿದ್ಧಿಕ್‌ ಕಲ್ಲು ಮತ್ತು ಚೂರಿ ಹಿಡಿದು ದಾಂಧಲೆ ನಡೆಸುತ್ತಿದ್ದ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಅಪ್ರಾಪ್ತ ಬಾಲಕಿಯರನ್ನು ವಿವಾಹವಾಗಿ ಗರ್ಭಿಣಿಯಾಗಿಸಿದ ಬಾಲಕರ ಬಂಧನ

ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿ ಸಿನಿಮೀಯ ರೀತಿಯಲ್ಲಿ ಸಿದ್ಧಿಕ್‌ನನ್ನು ಹಿಂದಿನಿಂದ ಲಾಕ್‌ ಮಾಡಿ ಪೊಲೀಸ್‌ ವಾಹನಕ್ಕೆ ತಳ್ಳಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದು, ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆರೋಪಿ ಅಬೂಬಕ್ಕರ್‌ ಸಿದ್ಧಿಕ್‌ನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅಮಲು ಪದಾರ್ಧ ಸೇವನೆ ದೃಢಪಟ್ಟರೆ ಆತನ ಅಮಲು ಪದಾರ್ಥ ಸೇವನೆ ಸೆಕ್ಷನ್‌ನಡಿ ಕೂಡ ಪ್ರಕರಣ ದಾಖಲಾಗಲಿದೆ.