ದೆಹಲಿ(ಎ.02): ಕೇವಲ 100 ರೂಪಾಯಿಗಾಗಿ 23 ವರ್ಷದ ಯುವಕನನ್ನು ಆತನ ನೆರೆ ಮನೆಯವರೇ ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ 4 ಜನ ಅಪ್ರಾಪ್ತರನ್ನು ಸೇರಿಸಿ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮನೀಷ್(23) ಮೃತ ವ್ಯಕ್ತಿ.

ಆರೋಪಿ ಲಕ್ಕಿ ತಮ್ಮ ನೆರಮನೆಯವರ ಹತ್ತಿರ 500 ರೂಪಾಯಿಗೆ ಚೇಂಜ್ ಕೇಳಿದ್ದರು. ಆದರೆ ನೆರೆ ಮನೆಯವರು ಕೇವಲ 400 ರೂಪಾಯಿ ಕೊಟ್ಟಿದ್ದಾರೆ ಎಂದು ಲಕ್ಕಿ ಆರೋಪಿಸಿದ್ದಾನೆ. ಆದರೆ ನೆರೆ ಮನೆಯವರು ನಾವು ಲಕ್ಕಿಗೆ 500 ರೂ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಡ್ರಗ್ಸ್‌ ಹೆಸರಲ್ಲಿ ಬೆದರಿಸಿ ಸುಲಿಗೆ ಮಾಡಿದ ನಕಲಿ ಸಿಸಿಬಿ..!

ಇದೇ ವಿಷಯವಾಗಿ ಏರಡು ಮನೆಯವರ ಮಧ್ಯೆ ಸೋಮವಾರ ಜಗಳ ನಡೆದಿದೆ. ಆದರೆ ಅಕ್ಕಪಕ್ಕದ ಮನೆಯವರು ಸಮಾಧಾನ ಮಾಡಿ ಜಗಳ ಬಿಡಿಸಿದ್ದರು. ಆದರೆ ಮಂಗಳವಾರ ಇದೇ ವಿಷಯವಾಗಿ ಮತ್ತೆ ಜಗಳ ಪ್ರಾರಂಭವಾಗಿ ತಾರಕಕ್ಕೇರಿದೆ. ಲಕ್ಕಿ ಮನೆಯವರು ಮೃತ ವ್ಯಕ್ತಿ ಮನೀಷ್‌ನನ್ನು ಥಳಿಸಿದ್ದಾರೆ. ಅವನ ತೊಡೆಯ ಮೇಲೆ ತಿವಿದು ಗಾಯಗೊಳಿಸಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ಮನೀಷ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ದೆಹಲಿಯ ಸದರ್ ಬಜಾರ್ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ಲಕ್ಕಿ, ಅವನ ಹೆಂಡತಿ ಮತ್ತು ಇನ್ನೋರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಅವರ ಅಪ್ರಾಪ್ತ ವಯಸ್ಸಿನ ಮೂರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನನ್ನು ಕೂಡ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 7 ಜನರ ಬಂಧನವಾಗಿದೆ.