ಭಾರತೀಯ ಅಂಚೆ ಮೂಲಕ ತರಿಸಿಕೊಂಡಿದ್ದ ₹21 ಕೋಟಿ ಡ್ರಗ್ಸ್ ಜಪ್ತಿ!
ದುಷ್ಕರ್ಮಿಗಳು ವಿದೇಶಗಳಿಂದ ಭಾರತೀಯ ಅಂಚೆ ಮೂಲಕ ನಗರಕ್ಕೆ ತರಿಸಿಕೊಂಡಿದ್ದ ₹21.17 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.
ಬೆಂಗಳೂರು (ಅ.19): ದುಷ್ಕರ್ಮಿಗಳು ವಿದೇಶಗಳಿಂದ ಭಾರತೀಯ ಅಂಚೆ ಮೂಲಕ ನಗರಕ್ಕೆ ತರಿಸಿಕೊಂಡಿದ್ದ ₹21.17 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.
28 ಕೆ.ಜಿ. ಹೈಡ್ರೋ ಗಾಂಜಾ, 2,569 ಎಲ್‌ಎಸ್‌ಡಿ, 1 ಕೆ.ಜಿ. 618 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 11,908 ಎಕ್ಸ್‌ಟೆಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್, 102 ಗ್ರಾಂ ಕೊಕೇನ್, 6 ಕೆ.ಜಿ.280 ಗ್ರಾಂ ಆಮ್‌ಫಿಟಮೈನ್, 336 ಗ್ರಾಂ ಚರಸ್, 1 ಕೆ.ಜಿ. 217 ಗ್ರಾಂ ಗಾಂಜಾ ಎಣ್ಣೆ, 445 ಗ್ರಾಂ ಮೆಥಾಕ್ಸಿನ್, 11 ಇ-ಸಿಗರೇಟ್, 102 ಎಂಎಲ್ ನಿಕೋಟಿನ್, 400 ಗ್ರಾಂ ಟೊಬ್ಯಾಕೋ ಸೇರಿದಂತೆ ಇತರೆ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
606 ಪಾರ್ಸೆಲ್‌ಗಳಲ್ಲಿ ಮಾದಕ ವಸ್ತುಗಳು: ಚಾಮರಾಜಪೇಟೆ ಫಾರಿನ್ ಫೋಸ್ಟ್ ಆಫೀಸ್‌ಗೆ ಯು.ಎಸ್., ಯು.ಕೆ., ಬೆಲ್ಜಿಯಂ, ಥೈಲ್ಯಾಂಡ್, ನೆದರ್ ಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ 3,500 ಅನುಮಾನಾಸ್ಪದ ಪಾರ್ಸೆಲ್‌ಗಳು ಬಂದಿದ್ದವು. ಈ ಸಂಬಂಧ ಫೋಸ್ಟ್ ಆಫೀಸ್ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಶ್ವಾನದಳದೊಂದಿಗೆ ಈ ಪಾರ್ಸೆಲ್‌ಗಳನ್ನು ಪರಿಶೀಲಿಸಿದ್ದಾರೆ. ಈ ಪೈಕಿ 606 ಅನುಮಾನಾಸ್ಪದ ಪಾರ್ಸೆಲ್‌ಗಳಲ್ಲಿ ಮಾದಕ ವಸ್ತುಗಳು ಇರುವುದು ಕಂಡು ಬಂದಿತ್ತು. ಈ ಸಂಬಂಧ ನ್ಯಾಯಾಲಯದಿಂದ ಅನುಮತಿ ಪಡೆದು ₹21.17 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ವಾಲ್ಮೀಕಿ ಕೇಸ್‌ನಲ್ಲಿ ನಾಗೇಂದ್ರಗೆ ದೊಡ್ಡ ಶಿಕ್ಷೆಯಾಗಲಿದೆ: ಜನಾರ್ದನ ರೆಡ್ಡಿ
ಆರೋಪಿಗಳ ಪತ್ತೆಗೆ ತನಿಖೆ: ಆರೋಪಿಗಳು ಭಾರತೀಯ ಅಂಚೆ ಮೂಲಕ ಯು.ಎಸ್, ಯು.ಕೆ. ಬೆಲ್ಜಿಯಂ ಸೇರಿದಂತೆ ವಿವಿಧ ದೇಶಗಳಿಂದ ನಿಷೇಧಿತ ಮಾದಕವಸ್ತುಗಳನ್ನು ನಗರಕ್ಕೆ ತರಿಸಿಕೊಂಡು ಬಳಿಕ ಹೆಚ್ಚಿನ ಬೆಲೆಗೆ ಪರಿಚಿತ ವ್ಯಕ್ತಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶಗಳಿಂದ ಈ ಪಾರ್ಸೆಲ್ ತರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.