ಬೆಂಗಳೂರು(ಅ.18): ದೇಶಕ್ಕೆ ಚಿನ್ನ ಕಳ್ಳಸಾಗಣೆ ಮಾಡುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ ವೇಳೆ ವಶಪಡಿಸಿ ಕೊಳ್ಳಲಾಗಿದ್ದ 2.5 ಕೆ.ಜಿ. ಚಿನ್ನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೋ ವಿಭಾಗದ ಗೋದಾಮಿನಿಂದ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್‌ ಅಧಿಕಾರಿ ಸೇರಿದಂತೆ ಕೆಲ ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಕಸ್ಟಮ್ಸ್‌ ಇಲಾಖೆಯ ಜಂಟಿ ಆಯುಕ್ತ ಎಂ.ಜೆ.ಚೇತನ್‌ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯದ (ಕಸ್ಟಮ್‌ ಮತ್ತು ಕೇಂದ್ರ ಅಬಕಾರಿ) ಸಹಾಯಕ ಆಯುಕ್ತ ವಿನೋದ್‌ ಚಿನ್ನಪ್ಪ ಮತ್ತು ಕೆ.ಕೇಶವ್‌, ಸೂಪರಿಟೆಂಡೆಂಟ್‌ ಎನ್‌.ಜೆ.ರವಿಶೇಖರ್‌, ಡೀನ್‌ರೆಕ್ಸ್‌, ಕೆ.ಬಿ.ಲಿಂಗರಾಜು ಮತ್ತು ಖಾಸಗಿ ವ್ಯಕ್ತಿ ಎಸ್‌.ಟಿ.ಹಿರೇಮಠ್‌ ಸೇರಿದಂತೆ ಇತರರು ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ.

2012ರಿಂದ 2014ರ ಅವಧಿಯಲ್ಲಿ ವಿವಿಧ ವ್ಯಕ್ತಿಗಳಿಂದ 13 ಪ್ರಕರಣದಡಿ 2.5 ಕೆ.ಜಿ. ಚಿನ್ನವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ತದನಂತರ ಅದನ್ನು ವಿಮಾನ ನಿಲ್ದಾಣದ ಕಾರ್ಗೋ ವಿಭಾಗ ಗೋದಾಮಿನಲ್ಲಿಡಲಾಗಿತ್ತು. ಆದರೆ, ಗೋದಾಮಿನಲ್ಲಿಟ್ಟಿದ್ದ 2.5 ಕೆ.ಜಿ.ಚಿನ್ನ ನಾಪತ್ತೆಯಾಗಿದೆ. ಈ ಬಗ್ಗೆ ಇಲಾಖೆಯ ಹೈದರಾಬಾದ್‌ನ ವಿಚಕ್ಷಣ ದಳ ಅಧಿಕಾರಿಗಳು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿಗಳ ಬಗ್ಗೆ ಸಂದೇಹ ವ್ಯಕ್ತವಾಗಿತ್ತು. ವಿಚಕ್ಷಣ ದಳ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಚೇತನ್‌ ಅವರು ಸಿಬಿಐಗೆ ದೂರು ನೀಡಿದ್ದಾರೆ.

ಟ್ಯೂಷನ್ ಕ್ಲಾಸ್; 14  ವರ್ಷವಿದ್ದಾಗ ನಡೆದ ದೌರ್ಜನ್ಯಕ್ಕೆ  36 ಆದಾಗ ದೂರು ಕೊಟ್ಟಳು!

ಈ ಬಗ್ಗೆ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಅ.12ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಹೈದರಾಬಾದ್‌ನ ವಿಚಕ್ಷಣ ದಳದ ಪ್ರಧಾನ ನಿರ್ದೇಶಕ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

13 ಪ್ರಕರಣದಲ್ಲಿ ಪಡೆದ ಚಿನ್ನ

2013ರಲ್ಲಿ ಫಕೀರ್‌ ಮೊಹಿದ್ದೀನ್‌ ಮತ್ತು ನಯೀಮ್‌ ಮೊಹಿದ್ದೀನ್‌ ಅವರಿಂದ 207 ಗ್ರಾಂ ಬೆಳ್ಳಿ ಲೇಪಿತ ಚಿನ್ನ, 2013ರಲ್ಲಿ ಪಿ.ನಸೀರ್‌ ಬಳಿಯಿಂದ 400 ಗ್ರಾಂನ ನಾಲ್ಕು ಚಿನ್ನದ ಬಿಸ್ಕತ್‌, 2014ರಲ್ಲಿ ಮಹಮದ್‌ ಅಶ್ರಫ್‌ ಎಂಬಾತನಿಂದ 116.6 ಗ್ರಾಂನ ಚಿನ್ನದ ಸರ, 2014ರಲ್ಲಿ ಮಹಮದ್‌ ಇಸ್ಮಾತ್‌ ಎಂಬಾತನಿಂದ 200 ಗ್ರಾಂ ಚಿನ್ನದ ಸರ, 2014ರಲ್ಲಿ ಇಮ್ರಾನ್‌ ಖಾನ್‌ ಎಂಬಾತನಿಂದ 181.4 ಗ್ರಾಂ ಚಿನ್ನದ ಸರ, 2014ರಲ್ಲಿ ನಗೂರ್‌ ಮೀರನ್‌ ಮಲ್ಲಿಕ್‌ ಎಂಬಾತನಿಂದ 449.9 ಗ್ರಾಂನ ನಾಲ್ಕು ಚಿನ್ನದ ಬಿಸ್ಕತ್‌, 2014ರಲ್ಲಿ ಫರೀನಾರಿಂದ 154.4 ಗ್ರಾಂ ಚಿನ್ನದ ಲಾಕೆಟ್‌, 2014ರಲ್ಲಿ ಮಹಮದ್‌ ಫಸೀನಾ ವರಿಂದ 181 ಗ್ರಾಂ ಚಿನ್ನದ ಸರ ಮತ್ತು ಬ್ರೆಸ್‌ಲೈಟ್‌, 2014ರಲ್ಲಿ ಪಾಫಿತೇನ್‌ರಿಂದ 190 ಗ್ರಾಂ ಬ್ರೆಸ್‌ಲೈಟ್‌, ಲಲಿತಾ ಪದ್ಮನಿ ಅವರಿಂದ 163 ಗ್ರಾಂ ತೂಲದ ಐದು ಚಿನ್ನದ ಸರ, ನಫಿಯಾ ರೌಫ್‌ರಿಂದ ನಾಲ್ಕು ಚಿನ್ನದ ಬಳೆ, ಮಹಮದ್‌ ನಸ್ಲೈನ್‌ ಎಂಬುವವರಿಂದ 139.7 ಗ್ರಾಂ ಚಿನ್ನದ ಸರ ಮತ್ತು ಇತರೆ ಪ್ರಕರಣದಲ್ಲಿ ಆರು ಚಿನ್ನದ ಬಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.