ಕೊಳ್ಳೇಗಾಲ: ಜಮೀ​ನಲ್ಲಿ ಮೊಬೈಲ್‌ ಟವರ್‌ ಹಾಕೋದಾಗಿ ಲಕ್ಷಾಂತರ ರೂ. ವಂಚನೆ

ಸಮರ್ಪಕ ರೀತಿ ಸ್ಪಂದಿಸದ ಹಿನ್ನೆಲೆ ಕೊನೆಗೂ ಬೇಸತ್ತ ಅಶೋಕ್‌ ಕೊಳ್ಳೇಗಾಲದ ಜಿಯೋ ಕಂಪನಿಯ ಕಚೇರಿಯಲ್ಲಿ ವಿಚಾರಿಸಿದ್ದಾರೆ. ಈ ಬಗ್ಗೆ ನಾವ್ಯಾರು ಈ ರೀತಿ ಮಾಡಲ್ಲ, ಕಂಪನಿಯ ಆದೇಶವಿಲ್ಲ, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ಮಾತುಗಳನ್ನು ಕೇಳುತ್ತಿದ್ದಂತೆ ಮೋಸ ಹೋದದ್ದು ಅರಿವಾಗಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ ಅಶೋಕ್‌

2.19 Lakh Rs Fraud for Putting Up Mobile Tower at Kollegala in Chamarajanagara grg

ಕೊಳ್ಳೇಗಾಲ(ಆ.04):  ನಿಮ್ಮ ಜಮೀನಿನಲ್ಲಿ ಮೊಬೈಲ್‌ ಟವರ್‌ ಹಾಕಿಸಿಕೊಡುತ್ತೇವೆ, ಜಮೀನಿನಲ್ಲಿ ಸೂಕ್ತ ಜಾಗ ನೀಡಿದರೆ 60 ಲಕ್ಷ ರು. ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ, ತಿಂಗಳಿಗೆ 50 ಸಾವಿರ ಬಾಡಿಗೆ ನೀಡುತ್ತೇವೆ ಎಂದು ವ್ಯಕ್ತಿಯೊಬ್ಬರಿಂದ 2.29ಲಕ್ಷ ರು.ಗಳನ್ನು ಖಾತೆಗೆ ಹಾಕಿಸಿಕೊಂಡು ವಂಚಿಸಿರುವ ಪ್ರಕರಣ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಸರಗೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಸರಗೂರು ಗ್ರಾಮದ ಅಶೋಕ್‌ ವಂಚನೆಗೊಳಗಾದವರು. ಕಳೆದ 20 ದಿನಗಳ ಹಿಂದೆ ಮಹಿಳೆಯೊಬ್ಬರು 9971534686 ಸಂಖ್ಯೆಯಿಂದ ಅಶೋಕ್‌ ಫೋನ್‌ಗೆ ಕರೆ ಮಾಡಿ ಜಿಯೋ ಟವರ್‌ನ್ನು ನಿಮ್ಮ ಜಮೀನಿನಲ್ಲಿ ಹಾಕಿಸಿಕೊಂಡರೆ ಸಾಕಷ್ಟು ಲಾಭವಾಗಲಿದೆ ಎಂಬ ಸಂದೇಶ ರವಾನಿಸಿದ್ದಾರೆ. ಜು.13ರಂದು ಪುನಃ ಅಶೋಕ್‌ ದೂರವಾಣಿ ಸಂಖ್ಯೆಗೆ 8360626690ಗೆ ಸಂಖ್ಯೆಯಿಂದ ನಿಮ್ಮ ಜಮೀನಿನಲ್ಲಿ ಟವರ್‌ ಹಾಕಿಸಿಕೊಳ್ಳುವ ಸಂಬಂಧ ಲಾಗಿನ್‌ ಚಾರ್ಜ್‌ 1100 ರು. ಪಾವತಿಸಿ ಬಳಿಕ 9871381678ಗೆ ಸಂಖ್ಯೆಗೆ ಪೋನ್‌ ಪೇ ಮಾಡುವಂತೆ ತಿಳಿಸಿದ್ದಾರೆ.

ಚಾಮರಾಜನಗರ: ಕಾಡಾನೆಗಳಿಂದ ಫಸಲು ನಾಶ, ಕಂಗಾಲಾದ ಅನ್ನದಾತ..!

ಅದೆ ರೀತಿ ಅಶೋಕ್‌ ಹಣ ಕಳುಹಿಸಿ ಕರೆ ಮಾಡಿದ್ದಾರೆ, ನಿಮ್ಮ ವಿಳಾಸಕ್ಕೆ ರಿಜಿಸ್ಟರ್‌ ಪೋಸ್ಟ್‌ ಬರುತ್ತೆ, ಅದನ್ನ ಫೋಟೊ ತೆಗೆದು ನಮಗೆ ಕಳುಹಿಸಿ ಎಂದಿದ್ದಾರೆ. ಅದರಂತೆ ಪೋಸ್ಟ್‌ನಲ್ಲಿ ಬಂದ ದಾಖಲೆಗಳನ್ನು ಅಶೋಕ್‌ ಫೋಟೊ ತೆಗೆದು ಕಳುಹಿಸಿದ್ದಾರೆ. ಬಳಿಕ ಭೋಪಾಲ್‌ ನಲ್ಲಿರುವ ಖಾತೆ ಸಂಖ್ಯೆ ಹಾಗೂ ಮತ್ತೊಂದು ದೂರವಾಣಿ ಸಂಖ್ಯೆ ಕಳುಹಿಸಿ ಜು.27ರಂದು 32 ಸಾವಿರ ಕಳುಹಿಸಿ ಎಂಬ ಸಂದೇಶ ರವಾನಿಸಿದಂತೆ ಅಶೋಕ್‌ 32ಸಾವಿರ ಹಣ ಸಹ ಕಳುಹಿಸಿದ್ದಾರೆ.
ಬಳಿಕ ಮತ್ತೊಂದು ಸಂಖ್ಯೆಯಿಂದ ಕರೆ ಮಾಡಿ ನಿಮ್ಮ ಜಮೀನಿನಲ್ಲಿ ಟವರ್‌ ಅಳವಡಿಸುತ್ತಿದ್ದಂತೆ ತಿಂಗಳಿಗೆ 50 ಸಾವಿರ ಬಾಡಿಗೆ, ಈ ಪೈಕಿ ಅಲ್ಲಿ ನಿರ್ವಹಣೆಗಾಗಿ ನೀವು ಸೂಚಿಸಿದವರೆ ಕೆಲಸ ನೀಡಿ 15ಸಾವಿರ ಸಂಬಳ ನೀಡುತ್ತೇವೆ, ಜಮೀನು ನೀಡಿದ್ದಕ್ಕೆ 60ಲಕ್ಷ ರು. ನಿಮ್ಮ ಖಾತೆಗೆ ಹಾಕಲಾಗುತ್ತದೆ ಎಂಬ ಭರವಸೆ ಮಾತಿಗೆ ಅಶೋಕ್‌ ಮರುಳಾಗಿ ಪುನಃ ಎರಡು ಬಾರಿ 75,999 ಮತ್ತು 1.20ಲಕ್ಷ ರು.ಗಳನ್ನು ಕ್ರಮವಾಗಿ ಜು.28 ಮತ್ತು 30 ಕಳುಹಿಸಿದ್ದಾರೆ. ಬಳಿಕ ನಿಮ್ಮ ಖಾತೆ ನಂಬರ್‌ ಕಳುಹಿಸಿ ಮೊದಲು ನಿಮ್ಮ ಖಾತೆಗೆ 30ಲಕ್ಷ ರು. ಬರುತ್ತೆ ಎಂದಿದ್ದಾರೆ. ಅದರಂತೆ ಅಶೋಕ್‌ ಅವರು ನೀಡಿದ ಎರಡು ದೂರವಾಣಿ ಸಂಖ್ಯೆಗೆ ಬ್ಯಾಂಕ್‌ ವಿವರ ಕಳುಹಿಸಿದ್ದಾರೆ. ಬಳಿಕ ಹಣ ಖಾತೆಗೆ ಸಂದಾಯವಾಗದ್ದನ್ನು ಗಮನಿಸಿದ ಅಶೋಕ್‌ ತಾವು ಕಳುಹಿಸಿದ ಸಂಖ್ಯೆ 9971534686 ಮತ್ತು 987138178 ಸಂಖ್ಯೆಗೆ ಕರೆ ಮಾಡಿದಾಗ ಮತ್ತೊಂದು (8602563741ಗೆ) ಸಂಖ್ಯೆಗೆ ಕರೆ ಮಾಡಿದಾಗ ಹಿಂದಿಯಲ್ಲಿ ಮಾತನಾಡಿದ್ದಾರೆ.

ಸಮರ್ಪಕ ರೀತಿ ಸ್ಪಂದಿಸದ ಹಿನ್ನೆಲೆ ಕೊನೆಗೂ ಬೇಸತ್ತ ಅಶೋಕ್‌ ಕೊಳ್ಳೇಗಾಲದ ಜಿಯೋ ಕಂಪನಿಯ ಕಚೇರಿಯಲ್ಲಿ ವಿಚಾರಿಸಿದ್ದಾರೆ. ಈ ಬಗ್ಗೆ ನಾವ್ಯಾರು ಈ ರೀತಿ ಮಾಡಲ್ಲ, ಕಂಪನಿಯ ಆದೇಶವಿಲ್ಲ, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ಮಾತುಗಳನ್ನು ಕೇಳುತ್ತಿದ್ದಂತೆ ಮೋಸ ಹೋದದ್ದು ಅರಿವಾಗಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿ ವಂಚನೆಗೊಳಗಾದ ನನಗೆ ನ್ಯಾಯ ದೊರಕಿಸಿ ಎಂದು ಕೋರಿದ್ದಾರೆ.

Latest Videos
Follow Us:
Download App:
  • android
  • ios