ಬೆಂಗಳೂರು(ಸೆ.06): ಚಂದನವನ’ದಲ್ಲಿ ಡ್ರಗ್ಸ್‌ ನಂಟಿನ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸಿಲಿಕಾನ್‌ ಸಿಟಿ ಪೊಲೀಸರು ಪೆಡ್ಲರ್‌ಗಳ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿ ಮೂವರು ಅಂತರ್‌ರಾಜ್ಯ ಡ್ರಗ್‌ ಪೆಡ್ಲ​ರ್ಸ್‌ಗಳು ಸೇರಿಂದತೆ 19 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆ 10 ಕೇಜಿ ಮಾದಕ ವಸ್ತು ವಶ ಪಡಿಸಿಕೊಂಡಿದ್ದಾರೆ.

ಕೇರಳ ಮೂಲದ ಸುಬ್ರಮಣಿ (21), ವಿದೂಸ್‌ (31) ಹಾಗೂ ಶೆಜಿನ್‌ (21) ಬಂಧಿತರು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 44 ಲಕ್ಷ ಮೌಲ್ಯದ 2 ಕೆಜಿ 133 ಗ್ರಾಂ ಹ್ಯಾಶಿಶ್‌ ಆಯಿಲ್‌ ಮತ್ತು ಎರಡು ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ತಿಳಿಸಿದ್ದಾರೆ.

ಬಂಧಿತ ಆರೋಪಿ ವಿದೂಸ್‌ ಲಂಡನ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾನೆ. ಬಳಿಕ ಬೆಂಗಳೂರಿಗೆ ಬಂದಿದ್ದ ಆರೋಪಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೇರಳ ರಾಜ್ಯದವರೇ ಆದ ಸುಬ್ರಮಣಿ ಮತ್ತು ಶೆಜಿನ್‌ ಪರಿಚಯವಾಗಿದ್ದರು. ರಜೆ ವೇಳೆ ಮಾಡುತ್ತಿದ್ದ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವಿಸುತ್ತಿದ್ದರು. ನಗರದಲ್ಲಿ ಮಾದಕ ವಸ್ತುವಿಗೆ ಹೆಚ್ಚು ಬೇಡಿಕೆ ಇರುವ ಬಗ್ಗೆ ತಿಳಿದ ಆರೋಪಿಗಳು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ದಂಧೆಗೆ ಇಳಿದಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದ ಪೆಡ್ಲರ್‌ಗಳ ಮೂಲಕ ಹ್ಯಾಶಿಶ್‌ ಆಯಿಲ್‌ ಮತ್ತು ಗಾಂಜಾ ಖರೀದಿಸಿ ತರುತ್ತಿದ್ದರು.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.28 ಕೋಟಿ ಮೌಲ್ಯದ ಗಾಂಜಾ ವಶ

ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕೇರಳದಲ್ಲಿಯೇ ಅಕ್ರಮವಾಗಿ ಹೆಚ್ಚು ಗಾಂಜಾ ಬೆಳೆಯಲಾಗುತ್ತಿದೆ. ಅಂಥ ಪ್ರದೇಶದಲ್ಲಿಯೇ ಹ್ಯಾಶಿಶ್‌ ಆಯಿಲ್‌ ತಯಾರಿಕೆಯಾಗುತ್ತದೆ. ಸರಕು ವಾಹನಗಳು, ರೈಲು, ಬಸ್‌ಗಳಲ್ಲಿ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಹ್ಯಾಶಿಶ್‌ ಆಯಿಲ್‌ ಸರಬರಾಜು ಆಗುತ್ತಿದೆ. ಮಂಗಳೂರು, ಮುಂಬೈ, ಚೆನ್ನೈನಿಂದ ಹಡಗುಗಳ ಮೂಲಕ ವಿದೇಶಕ್ಕೂ ಕಳ್ಳ ಸಾಗಣೆಯಾಗುತ್ತಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಹ್ಯಾಶಿಶ್‌ ಆಯಿಲ್‌ ಬರ್ತಿತ್ತು!

ಯಾರಿಗೂ ಅನುಮಾನ ಬಾರದಂತೆ ಆರೋಪಿಗಳು ಹ್ಯಾಶಿಶ್‌ ಆಯಿಲ್‌ನ್ನು ಖಾಲಿ ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ತುಂಬಿಕೊಂಡು ಬಸ್‌ನಲ್ಲಿ ತರುತ್ತಿದ್ದರು. ಕೊಬ್ಬರಿ ಎಣ್ಣೆಯಲ್ಲಿ ತರುತ್ತಿದ್ದ ಕಾರಣ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಕೆ.ಆರ್‌.ಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆರೋಪಿಗಳು ಗ್ರಾಂ ಲೆಕ್ಕದಲ್ಲಿ ಸಣ್ಣ ಬಾಟಲಿಗಳಲ್ಲಿ ಹ್ಯಾಶಿಶ್‌ ಆಯಿಲ್‌ ತುಂಬಿ ಇಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಹ್ಯಾಶಿಶ್‌ ಆಯಿಲ್‌?: 

ವಿಶಾಖಪಟ್ಟಣದಲ್ಲಿ ಕಡಿಮೆ ಬೆಲೆಗೆ ಅಕ್ರಮವಾಗಿ ಗಾಂಜಾ ಮಾರಾಟವಾಗುತ್ತಿದೆ. ವಿದೂಸ್‌ ಸಂಪರ್ಕದಲ್ಲಿರುವ ಪೆಡ್ಲರ್‌ ಗಾಂಜಾ ಖರೀದಿಸಿ ಹ್ಯಾಶಿಶ್‌ ಆಯಿಲ್‌ ತಯಾರಿಸುತ್ತಿದ್ದ. 20 ಕೆ.ಜಿ ಗಾಂಜಾ ಬೇಯಿಸಿದರೆ 250 ಗ್ರಾಂ ನಷ್ಟು ಹ್ಯಾಶಿಶ್‌ ಆಯಿಲ್‌ ಸಿಗುತ್ತದೆ. ಆತನಿಂದ ಖರೀದಿಸುತ್ತಿದ್ದ ಆರೋಪಿಗಳು 1 ಗ್ರಾಂ ಹ್ಯಾಶಿಶ್‌ ಆಯಿಲ್‌ 3 ರಿಂದ 5 ಸಾವಿರ ರುಪಾಯಿಗೆ ಮಾರಾಟ ಮಾಡುತ್ತಿದ್ದರು. ಸಿಗರೆಟ್‌ಗಳಿಗೆ ಲೇಪಿಸಿ ಸೇವಿಸುತ್ತಾರೆ. ಅಪಾಯಕಾರಿ ಮಾದಕ ವಸ್ತುಗಳಲ್ಲಿ ಹ್ಯಾಶಿಶ್‌ ಆಯಿಲ್‌ ಸಹ ಒಂದಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ಹೆಚ್ಚು ಮತ್ತೇರಿಸುತ್ತದೆ.

13 ಕೇಸಲ್ಲಿ 16 ಜನ ಸೆರೆ

ಇನ್ನು ಪಶ್ಚಿಮ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ 13 ಪ್ರಕರಣದಲ್ಲಿ 16 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 7.916 ಕೇಜಿ ಗಾಂಜಾ, 25 ಸಾವಿರ ನಗದು ಹಾಗೂ ಮೂರು ಮೊಬೈಲ್‌, ಕಾರು ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ತಿಳಿಸಿದ್ದಾರೆ.

ಮಾಗಡಿ ರಸ್ತೆ ಠಾಣೆ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಚಾಮರಾಜಪೇಟೆ, ಚಂದ್ರ ಲೇಔಟ್‌, ಬಸವೇಶ್ವರ ನಗರ, ಕಾಟನ್‌ಪೇಟೆ ಹಾಗೂ ಜೆ.ಜೆ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.