Asianet Suvarna News Asianet Suvarna News

ಪ್ರವಾಸಿಗರ ಸ್ವರ್ಗವಾದ ಉತ್ತರಕನ್ನಡ ಜಿಲ್ಲೆಯಲ್ಲಿ ಗಾಂಜಾ ಘಾಟು, 3 ತಿಂಗ್ಳಲ್ಲಿ 14 ಕೇಸು

* ಉತ್ತರಕನ್ನಡ ಜಿಲ್ಲೆಯಲ್ಲಿ ಗಾಂಜಾ ಘಾಟು 
* ಗಾಂಜಾ ಸಂಬಂಧಿಸಿದಂತೆ 14 ಪ್ರಕರಣಗಳು
* ಕೇವಲ ಮೂರು ತಿಂಗಳಲ್ಲಿ 12 ಕೆ.ಜಿ.ಯಷ್ಟು ಗಾಂಜಾ ವಶ

14 marijuana Cases In Just 3 Months  Uttara Kannada District rbj
Author
Bengaluru, First Published Jun 4, 2022, 10:45 PM IST

ವರದಿ: ಭರತ್‌ರಾಜ್ ಕಲ್ಲಡ್ಕ 

ಕಾರವಾರ, (ಜೂನ್.04):
ಪ್ರವಾಸಿಗರ ಸ್ವರ್ಗವಾದ ಉತ್ತರಕನ್ನಡ ಜಿಲ್ಲೆಯಲ್ಲಿ ಗಾಂಜಾ ಘಾಟ್ ಎಲ್ಲೆಡೆ ಬರಲಾರಂಭಿಸಿದೆ. ಗಾಂಜಾ ಹೊಗೆಯಾಡುತ್ತಿರುವ ಪಕ್ಕಾ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಡೀಲರ್ಸ್ ಹಾಗೂ ನಶೆಯ ಗಿರಾಕಿಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಉ.ಕ ಜಿಲ್ಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ 12 ಕೆ.ಜಿ.ಯಷ್ಟು ಗಾಂಜಾ ವಶ ಪಡಿಸಿಕೊಂಡ ಪೊಲೀಸರು ಇದರ ಮೂಲವನ್ನು ಹುಡುಕಾಡಲು ಪ್ರಾರಂಭಿಸಿದ್ದಾರೆ. ಅಲ್ಲದೇ, ಯುವಕರನ್ನು ಸರಿದಾರಿಗೆ ತರಲು ಯತ್ನಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹೌದು.. ಪ್ರವಾಸಿಗರ ಫೇವರೇಟ್ ಸ್ಪಾಟ್ ಎಂದೆನಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಪ್ರಕೃತಿ ಸೌಂದರ್ಯ, ರಮಣೀಯ ದೃಶ್ಯಗಳು ಎಲ್ಲರ ಕಣ್ಮನ ಮನಸೂರೆಗೊಳ್ಳುತ್ತದೆ. ಇಷ್ಟೊಂದು ನೈಸರ್ಗಿಕ ಸಂಪತ್ತು ಮತ್ತು ಸೌಂದರ್ಯವನ್ನು ಹೊಂದಿರುವ ಜಿಲ್ಲೆಗೆ ಅಕ್ರಮ ಗಾಂಜಾ ಮಾರಾಟ ಪ್ರಕರಣಗಳು ಕಪ್ಪು ಚುಕ್ಕೆಯಂತೆ ಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ ಗಾಂಜಾ ಸಂಬಂಧಿಸಿದಂತೆ 14 ಪ್ರಕರಣಗಳು ದಾಖಲಾಗಿದ್ರೆ, 12 ಕೆ.ಜಿ.ಯಷ್ಟು ಅಕ್ರಮ ಗಾಂಜಾವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. 

ದೇಹ, ಮನಸ್ಸಿನ ಮೇಲೆ ಗಾಂಜಾ ಬೀರೋ ದುಷ್ಪರಿಣಾಮ ಒಂದೆರಡಲ್ಲ..!

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಶಿರಸಿ, ಗೋಕರ್ಣದಲ್ಲಿ ಅಕ್ರಮ ಗಾಂಜಾ ಹೆಚ್ಚಾಗಿ ಸದ್ದು ಮಾಡುತ್ತಿದ್ದು, ಇಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಕಾರಣದಿಂದ ಗಾಂಜಾ ಡೀಲರ್ಸ್ ಹಾಗೂ ನಶೆಯ ಗಿರಾಕಿಗಳನ್ನು ಹೆಡೆಮುರಿ ಕಟ್ಟಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹೊರ ರಾಜ್ಯಗಳಿಂದ ಮತ್ತು ಪಕ್ಕದ ಜಿಲ್ಲೆಗಳಿಂದ ಉತ್ತರಕನ್ನಡ ಜಿಲ್ಲೆ ಗಾಂಜಾ ನುಸುಳುತ್ತಿದ್ದು, ಅದನ್ನು ಖರೀದಿಸಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ.‌ ಅಲ್ಲದೇ, ಜಿಲ್ಲೆಯ ಕೆಲವೆಡೆಯೂ ಇದನ್ನು ಬೆಳೆಯಲಾಗುತ್ತಿದೆ. ಈ ಕುರಿತು ಇನ್ನಷ್ಟು ನಿಗಾವಹಿಸಿ ಭಿಗಿ ಕ್ರಮ ಕೈಗೊಳ್ಳುತ್ತೆವೆ ಎನ್ನುತ್ತಾರೆ ಪೊಲೀಸ್ ವರಿಷ್ಠಾಧಿಕಾರಿ. 

ಅಂದಹಾಗೆ, ಉತ್ತರಕನ್ನಡ ಜಿಲ್ಲೆಗೆ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಹೆಚ್ಚಾಗಿ ಗಾಂಜಾ ಬರುತ್ತಿದ್ದು, ಅದನ್ನು ತಡೆಗಟ್ಟಲು ಪೊಲೀಸ್ ಅಧಿಕಾರಿಗಳು ಇನ್ನಷ್ಟು ಭಿಗಿ ಕ್ರಮಗಳನ್ನು ಕೈಗೊಳ್ಳಲು ಯೋಜನೆ ಕೈಗೊಂಡಿದ್ದಾರೆ. ಆದರೆ, ಗಾಂಜಾ ಘಾಟು ಜಿಲ್ಲೆಯಲ್ಲಿ ಈ ಪ್ರಮಾಣದಲ್ಲಿ ಆವರಿಸಿದರೆ ಯುವ ಸಮುದಾಯದ ಮುಂದಿನ ಗತಿಯೇನು..? ಅನ್ನೋ ಪ್ರಶ್ನೆ ಮೂಡತೊಡಗಿದೆ. ಗಾಂಜಾ ಮಾರಾಟಗಾರರು ವಿದ್ಯಾರ್ಥಿಗಳನ್ನು, ಕಾರ್ಮಿಕರನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದು, ಮಕ್ಕಳ ಭವಿಷ್ಯದ‌ ಮೇಲೆ ಇದು ಸಾಕಷ್ಟು ಪರಿಣಾಮ ಬೀರುತ್ತಿದೆ. ಗಾಂಜಾ ಸುಲಭವಾಗಿ ಸಿಗುತ್ತಿರುವುದರಿಂದ ವ್ಯಸನಿಗಳು ಕೂಡಾ ಹೆಚ್ಚಾಗುತ್ತಿದ್ದು, ಯುವಜನರು ಇನ್ನಷ್ಟು ಹೆಚ್ಚಿನ ಕ್ರೈಂಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಪೊಲೀಸ್ ಇಲಾಖೆ ಮತ್ತಷ್ಟು ಅಲರ್ಟ್ ಆಗಿ ಗಾಂಜಾ ಪೆಡ್ಲರ್‌ಗಳನ್ನ ಮಟ್ಟ ಹಾಕುವ ಕೆಲಸ ಮಾಡಬೇಕಿದೆ. ಜತೆಗೆ ಗಾಂಜಾ ಮಾರಾಟದ ಪ್ರಕರಣಗಳಲ್ಲಿ ಪದೇ ಪದೇ ಸಿಕ್ಕಿಹಾಕಿಕೊಳ್ಳುವ  ಆರೋಪಿಗಳ ಮೇಲೆಯೂ ಕಟ್ಟು ನಿಟ್ಟಿನ ಕ್ರಮ ಆಗಬೇಕು ಅನ್ನೋದು  ಸಾರ್ವಜನಿಕರ ಒತ್ತಾಯ. 

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಗೆ ಕಪ್ಪು ಚುಕ್ಕೆಯಂತೆ ಎದ್ದು ಕಾಣುತ್ತಿರುವ ಅಕ್ರಮ ಗಾಂಜಾ ಮಾರಾಟವನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಿ ಸಂಪೂರ್ಣ ಬಂದ್ ಮಾಡಿಸಬೇಕಿದೆ. ಈ ಮೂಲಕ ಜಿಲ್ಲೆಯನ್ನು ಸಂಪೂರ್ಣ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಶೀಘ್ರದಲ್ಲಿ ಘೋಷಣೆ ಮಾಡಬೇಕಿದೆ. 

Follow Us:
Download App:
  • android
  • ios