Kodagu: ನಕಲಿ ಚಿನ್ನಾಭರಣ ಅಡಮಾನವಿಟ್ಟು ಬ್ಯಾಂಕ್‌ಗಳಿಗೆ ವಂಚಿಸಿದ 12 ಜನರ ಬಂಧನ
ಮಾಡುವುದು ಆಟೋ ಚಾಲಕನ ವೃತ್ತಿಯಾದರೂ, ಕಟ್ಟಿದ್ದು ಕೋಟಿ ರೂಪಾಯಿಯ ಮನೆ. ಅರೆರೆ ಇದು ಹೇಗಪ್ಪ ಅಂದ್ರೆ ಇವನು ಕೊಡಗು ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ನೂರಾರು ಗ್ರಾಂ ಚಿನ್ನಾಭರಣವನ್ನು ಅಡಮಾನವಿಟ್ಟಿದ್ದ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.21): ಮಾಡುವುದು ಆಟೋ ಚಾಲಕನ ವೃತ್ತಿಯಾದರೂ, ಕಟ್ಟಿದ್ದು ಕೋಟಿ ರೂಪಾಯಿಯ ಮನೆ. ಅರೆರೆ ಇದು ಹೇಗಪ್ಪ ಅಂದ್ರೆ ಇವನು ಕೊಡಗು ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ನೂರಾರು ಗ್ರಾಂ ಚಿನ್ನಾಭರಣವನ್ನು ಅಡಮಾನವಿಟ್ಟಿದ್ದ. ಆಟೋ ಚಾಲಕನಾಗಿರುವವನಿಗೆ ಇಷ್ಟೊಂದು ಚಿನ್ನಾಭರಣ ಹೇಗಪ್ಪ ಬಂತು ಅಂತ ನಿಮಗೆಲ್ಲರಿಗೂ ಪ್ರಶ್ನೆ ಕಾಡುತ್ತೆ ಅಲ್ವಾ.? ನಿಮ್ಮ ಪ್ರಶ್ನೆಗೆ ಉತ್ತರ ಸಿಗಬೇಕು ಅಂದ್ರೆ ನೀವು ಈ ಸ್ಟೋರಿಯನ್ನು ನೋಡಲೇ ಬೇಕು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಮಡಿಕೇರಿ ಮುಖ್ಯ ಶಾಖೆಯಲ್ಲಿ 2024 ರ ಇದೇ ತಿಂಗಳ 4 ನೇ ತಾರೀಖಿನಂದು ಎಮ್ಮೆಮಾಡಿನ ಮೊಹಮ್ಮದ್ ರಿಜ್ವಾನ್ ಎಂಬಾತ 8 ಚಿನ್ನದ ಬಳೆಗಳನ್ನು ಅಡಮಾನ ಇರಿಸಿ ಸಾಲ ಪಡೆಯಲು ಮುಂದಾಗಿದ್ದ.
ಈ ಸಂದರ್ಭದಲ್ಲಿ ಆಭರಣವನ್ನು ಪರಿಶೀಲಿಸಿದ್ದಾಗ ನಕಲಿ ಆಭರಣ ಎನ್ನುವುದು ಗೊತ್ತಾಗಿತ್ತು. ಪ್ರಕರಣದ ಬೆನ್ನು ಬಿದ್ದ ಮಡಿಕೇರಿ ಪೊಲೀಸರಿಗೆ ಅಚ್ಚರಿಯೇ ಕಾದಿತ್ತು. ಹೌದು ಸಹಕಾರ ಬ್ಯಾಂಕುಗಳಲ್ಲಿ ನಕಲಿ ಚಿನ್ನಾಭರಣ ಇರಿಸಿದ್ದು ಇವನೊಬ್ಬನೇ ಅಲ್ಲ. ಇದೇ ರೀತಿಯಲ್ಲಿ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ನಿವಾಸಿಗಳಾದ ರಿಯಾಜ್, ಖತೀಜಾ ಮತ್ತು ಮಹಮ್ಮದ್ ಅನೀಫ್, ಕುಂಜಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ನಾಸೀರ್, ಮೂಸಾ ಮತ್ತು ಹಂಸ ಇವರು ಮಡಿಕೇರಿ, ಭಾಗಮಂಡಲ, ವಿರಾಜಪೇಟೆ, ಕಡಂಗಗಳಲ್ಲಿ ಇರುವ ಕೆಡಿಸಿಸಿ ಬ್ಯಾಂಕ್, ಮಡಿಕೇರಿಯ ಮುತ್ತೂಟ್ ಫಿನ್ ಕಾರ್ಪ್ ಮತ್ತು ಭಾಗಮಂಡಲದ ವಿಎಸ್ಎಸ್ಎನ್ ಬ್ಯಾಂಕ್ಗಳಲ್ಲಿ ಒಟ್ಟು 625 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡಮಾನ ಇರಿಸಿ ಬರೋಬ್ಬರಿ 34,95,016 ಹಣವನ್ನು ಸಾಲವಾಗಿ ಪಡೆದಿದ್ದರು.
ಸಿ.ಟಿ.ರವಿ ಹಿಂದೂ ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ: ಸಚಿವ ಆರ್.ಬಿ.ತಿಮ್ಮಾಪೂರ
ಪ್ರಕರಣದ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಅಂತಾರಾಜ್ಯದ ವಂಚಕನ ಜಾಲ ಪತ್ತೆಯಾಗಿತ್ತು. ಆ ವಂಚಕನೇ ಕೇರಳ ರಾಜ್ಯದ ಮಲ್ಲಪುರಂ ಜಿಲ್ಲೆ ನಿವಾಸಿ 47 ವರ್ಷದ ನವಾಜ್. ಈತನೇ ನಕಲಿ ಚಿನ್ನಾಭರಣಗಳನ್ನು ಮಾಡಿ ಕೊಡಗಿನ ಹಲವರನ್ನು ಬಳಸಿಕೊಂಡು ಇಲ್ಲಿನ ವಿವಿಧ ಬ್ಯಾಂಕುಗಳಲ್ಲಿ ಲಕ್ಷ ಲಕ್ಷ ಸಾಲ ಪಡೆದಿದ್ದ ಎನ್ನುವುದು ಗೊತ್ತಾಗಿತ್ತು. ಅಚ್ಚರಿಗೊಂಡ ಪೊಲೀಸರು ತನಿಖೆ ಮುಂದುವರಿಸಿದಾಗಲೇ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ 48 ವರ್ಷದ ಮೊಹಮ್ಮದ್ ಕುಂಞ ಎನ್ನುವುದು ಗೊತ್ತಾಗಿತ್ತು. ಈತ ಅಕ್ಕಸಾಲಿಗ ವೃತ್ತಿಯ 60 ವರ್ಷದ ಪ್ರದೀಪ್ ಎಂಬಾತನಿಗೆ ಹಣವನ್ನು ನೀಡಿ ನಕಲಿ ಚಿನ್ನ ಲೇಪಿತ ಆಭರಣಗಳನ್ನು ತಯಾರಿಸುತ್ತಿದ್ದ. ಮೊಹಮ್ಮದ್ ಕುಂಞ ಈತನಿಂದ ಮಧ್ಯವರ್ತಿಯಾದ ನಿಶಾದ್ ಎಂಬಾತನು ನಕಲಿ ಚಿನ್ನವನ್ನು ಪಡೆದು ನವಾಜ್ ಎಂಬಾತನಿಗೆ ನೀಡುತ್ತಿದ್ದ.
ಹೀಗೆ ನೂರಾರು ಗ್ರಾಂ ನಕಲಿ ಚಿನ್ನಾಭರಣ ಮಾಡಿಸುತ್ತಿದ್ದವನು ಬಂದ ಹಣದಿಂದ ಎರ್ನಾಕುಲಂನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಮನೆ ಕಟ್ಟಿದ್ದಾನಂತೆ. ಪ್ರಕರಣ ಭೇದಿಸಿದ ಪೊಲೀಸರ ವಿಚಾರಣೆ ವೇಳೆ ತಾನು ಮಾತ್ರ ಆಟೋ ಚಾಲಕ ಅಂತ ಹೇಳಿಕೊಂಡಿದ್ದಾನೆ ಅಂತೆ. ಅಕ್ಕಸಾಲಿಗ ಪ್ರದೀಪನ ಮೇಲೆ 2024 ನೇ ಸಾಲಿನಲ್ಲೇ 3 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಒಟ್ಟು 15 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಜೊತೆಗೆ ನಿಶಾದ್ ಒಂದು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಒಟ್ಟು 4 ಪ್ರಕರಣಗಳು ದಾಖಲಾಗಿವೆ. ಸದ್ಯ ಎಲ್ಲರನ್ನು ಬಂಧಿಸಿರುವ ಕೊಡಗು ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಾಯ್ದೆಯ ಕಲಂ: 111 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಆರೋಪಿಗಳಿಗೆ ಕಲಂ 111 ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಟ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅವಕಾಶವಿದ್ದು ನ್ಯಾಯಾಲಯ ಏನು ಶಿಕ್ಷೆ ಕೊಡುತ್ತೋ ಕಾದು ನೋಡಬೇಕು.
ನನ್ನ ವ್ಯಕ್ತಿತ್ವವನ್ನೇ ಹಾಳು ಮಾಡುತ್ತಿದ್ದಾರೆಂದು ಬೇಸರವಾಗಿದೆ: ಅಲ್ಲು ಅರ್ಜುನ್
ಒಟ್ಟಿನಲ್ಲಿ ಇವರೆಲ್ಲರ ವಿರುದ್ಧ ಮಡಿಕೇರಿ ನಗರ, ವಿರಾಜಪೇಟೆ ನಗರ, ಗ್ರಾಮಾಂತರ ಹಾಗೂ ಭಾಗಮಂಡಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು 12 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು, 2 ಲಕ್ಷ ನಗದು, ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿ 2 ಲಕ್ಷದ 8 ಸಾವಿರ, ವಿಮೆ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷದ 25 ಸಾವಿರ, ಒಂದುವರೆ ಲಕ್ಷ ಮೌಲ್ಯದ ಐಪೋನ್ ಸೇರಿದಂತೆ ನಕಲಿ ಚಿನ್ನಾಭರಣಗಳನ್ನು ಮಾಡಲು ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನೋಡಿದ್ರಲಾ ಆಟೋ ಚಾಲಕ ವೃತ್ತಿ ಮಾಡುತ್ತೇನೆ ಎನ್ನುವವನು ಕೋಟಿ ರೂಪಾಯಿ ಮನೆ ನಿರ್ಮಿಸಿದ್ದಾದರೂ ಹೇಗೆ ಎನ್ನುವುದನ್ನು. ಒಟ್ಟಿನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದವರು ಈಗ ಕಂಬಿ ಹಿಂದೆ ಮುದ್ದೆ ಮುರಿಯುವಂತೆ ಆಗಿದೆ.