ಹಾಸನದಲ್ಲಿ ಹೃದಯವಂತ ಬಾಲಕನ ಬಲಿ ಪಡೆದ ಹೃದಯಾಘಾತ: ದುರ್ವಿಧಿಯೇ... ನೀನೆಷ್ಟು ಕ್ರೂರಿ!
ಜಿಲ್ಲೆಯ ಆಲೂರು ತಾಲೂಕಿನ ಚೆನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ತಂದೆ ಇಲ್ಲದ ತಬ್ಬಲಿ ಸ್ನೇಹಿತ್ ವಿಚಾರದಲ್ಲಿ ವಿಧಿ ಅಕ್ಷರಶಃ ಕ್ರೂರತೆ ಮೆರೆದಿದೆ. ಹೃದಯವಂತ ಬಾಲಕನ ಬಲಿ ಪಡೆದಿದೆ ಹೃದಯಾಘಾತ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಸೆ.21): ಜಿಲ್ಲೆಯ ಆಲೂರು ತಾಲೂಕಿನ ಚೆನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ತಂದೆ ಇಲ್ಲದ ತಬ್ಬಲಿ ಸ್ನೇಹಿತ್ ವಿಚಾರದಲ್ಲಿ ವಿಧಿ ಅಕ್ಷರಶಃ ಕ್ರೂರತೆ ಮೆರೆದಿದೆ. ಹೃದಯವಂತ ಬಾಲಕನ ಬಲಿ ಪಡೆದಿದೆ ಹೃದಯಾಘಾತ. ಸ್ವಲ್ಪ ಆಯಾಸ ಆಗಿದೆ, ಶುಕ್ರವಾರ ಶಾಲೆಗೆ ಹೋಗೋದು ಬೇಡ ಎಂದು ಅಣ್ಣನನ್ನು ತನ್ನೊಂದಿಗೇ ಉಳಿಸಿಕೊಂಡ ತಮ್ಮ, ಆದರೆ ಅಗ್ರಜ ಹೊರಗೆ ಆಟವಾಡುತ್ತಿದ್ದಾಗ, ಮನೆಯೊಳಗಿದ್ದ ಅನುಜ, ಒಡಹುಟ್ಟಿದವನಿಗೆ ಏನನ್ನೂ ಹೇಳದೆ ಹೊರಟು ಹೋಗಿದ್ದಾನೆ.
ಗುಂಡು, ಗುಂಡಾಗಿ ಮುದ್ದಾಗಿದ್ದ 11 ವರ್ಷದ ಸ್ನೇಹಿತ್, ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವುದು ಅಪಾರ ಮಂದಿಗೆ ಅರಗಿಸಿಕೊಳ್ಳಲಾಗದ ನೋವು ತರಿಸಿದೆ. ಹಡೆದ ಜೀವಕ್ಕೆ ಮಾತ್ರವಲ್ಲ, ಚೆನ್ನಾಪುರದ ತುಂಬೆಲ್ಲಾ ದುಃಖ ಇನ್ನೂ ಬಿಕ್ಕುತ್ತಲೇ ಇದೆ. ಮೃತದೇಹ ಕಂಡವರು ಕಣ್ಣ ಮುಂದೆ ಓಡಾಡಿಕೊಂಡಿದ್ದ ಕಂದ, ಶಾಲೆಯ ಶಿಕ್ಷಕರು ಹಾಗೂ ಇಡೀ ಊರ ಮಂದಿಗೆ ಅಚ್ಚು ಮೆಚ್ಚಾಗಿದ್ದ ಮಗ, ಇಷ್ಟು ಬೇಗ ಕಣ್ಮರೆಯಾಗಬಾರದಿತ್ತು ಎಂದು ಮಮ್ಮಲ ಮರುಗುತ್ತಿದ್ದಾರೆ. ತಬ್ಬಲಿ ಮಗನನ್ನೂ ಬಿಡದ ಹಾಳು ವಿಧಿಗೆ ಕಣ್ಣೀರಿನ ಹಿಡಿಶಾಪ ಹಾಕುತ್ತಿದ್ದಾರೆ.
ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ 5ನೇ ತರಗತಿ ವಿದ್ಯಾರ್ಥಿ ಸಾವು!
ತಂದೆ ಇಲ್ಲದ ತಬ್ಬಲಿ: ಸ್ನೇಹಿತ್ ನೋಡಲು ಸ್ಪುರದ್ರೂಪಿಯಾಗಿದ್ದ.ಆದರೂ ಬಾಲ್ಯದಲ್ಲೇ ತಂದೆ ಪುನೀತ್ ಅವರನ್ನು ಅನಾರೋಗ್ಯದಿಂದ ಕಳೆದುಕೊಂಡು ತಬ್ಬಲಿಯಾಗಿದ್ದ. ತಾಯಿ ಕಾವ್ಯಶ್ರೀ ಮತ್ತು ಅಜ್ಜಿ-ತಾತನ ಆಸರೆಯಲ್ಲಿ ಸ್ನೇಹಿತ್ ಮತ್ತು ಅಣ್ಣ ಸಂಜಯ್, ಬದುಕು ರೂಪಿಸಿಕೊಳ್ಳುತ್ತಿದ್ದರು. ತಾಯಿ ಕೂಲಿ ಕೆಲಸಕ್ಕೆ ಹೋದರೆ, ತಾತ ನೀರುಗಂಟಿಯಾಗಿರುವುದರಿಂದ ಹೇಗೋ ಜೀವನ ಬಂಡಿ ಸಾಗುತ್ತಿತ್ತು. ಇಬ್ಬರೂ ಒಂದೇ ಶಾಲೆಯಲ್ಲಿ (ಸ್ನೇಹಿತ್ 6, ಸಂಜಯ್ 7ನೇ ತರಗತಿ) ಓದುತ್ತಿದ್ದರು. ಸ್ನೇಹಿತ್ ಕಿರಿಯನಾದರೂ ಲವಲವಿಕೆಯ ಹುಡುಗ. ಒಮ್ಮೆ ಮನೆಯಿಂದ ಹೊರ ಹೋದನೆಂದರೆ ಇಡೀ ಜನರೆಲ್ಲರನ್ನೂ ಮಾತನಾಡಿಸಿಕೊಂಡು ಬರುತ್ತಿದ್ದ. ಓದಿನಲ್ಲೂ ಮುಂದಿದ್ದ ಸ್ನೇಹಿತ್, ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಾಗಿದ್ದ. ಬಡ ಹುಡುಗ, ತಂದೆ ಇಲ್ಲದ ತಬ್ಬಲಿ ಎಂದು ಗುರು ಹಿರಿಯರು ಮಾಡುತ್ತಿದ್ದ ಆಶೀರ್ವಾದದ ಬಲದಿಂದಲೋ ಏನೋ ಸ್ನೇಹಿತ್ ಒಮ್ಮೆಯೂ ಉಷಾರಿಲ್ಲ ಎಂದು ಹಾಸಿಗೆ ಹಿಡಿದವನಲ್ಲ. ಆಸ್ಪತ್ರೆ ಮೆಟ್ಟಿಲು ಹತ್ತಿದವನೇ ಅಲ್ಲ.
ತಾತನ ಕೆಲಸ ಮಾಡಿದ್ದ: ತಾತನಿಗೆ ಉಷಾರಿಲ್ಲದ ಕಾರಣ, ಶುಕ್ರವಾರ ಬೆಳಗ್ಗೆ ಸ್ನೇಹಿತನೇ ಹೋಗಿ ನೀರುಗಂಟಿ ಕೆಲಸ ಮಾಡಿ ಬಂದಿದ್ದ. ಬಂದವನೇ ಕಡುಬು ತಿಂದು ಮನೆಯಲ್ಲೇ ಇದ್ದ. ಅಣ್ಣ ಆಟ ಆಡೋಣ ಬಾ ಎಂದು ಕರೆದ. ನಾನು ಬರೋದಿಲ್ಲ. ನೀನು ಹೋಗಿ ಬಾ ಎಂದು ಹೇಳಿ ಸ್ನೇಹಿತ್ ಕುರ್ಚಿ ಮೇಲೆ ಕುಳಿತು ಟಿವಿ ನೋಡುತ್ತಿದ್ದ. ಪಾಪ, ಹಾಳು ವಿಧಿಗೆ ಸ್ನೇಹಿತನ ಮೇಲೆ ಅದೇನೆನ್ನಿಸಿತೋ, ಹಠಾತ್ತನೇ ಬಾಲಕನ ಹೃದಯದ ಬಡಿತವನ್ನೇ ನಿಲ್ಲಿಸಿ ಬಿಟ್ಟಿತು. ಏನಾಯಿತು ಎಂದುಕೊಳ್ಳುವಲ್ಲಿ ಸ್ನೇಹಿತ್, ಕುಸಿದು ಬಿದ್ದಿದ್ದ. ಅಲ್ಲಿದ್ದವರು ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆ ವೇಳೆಗಾಗಲೇ ಸ್ನೇಹಿತ್‌ನ ಪ್ರಾಣಪಕ್ಷಿ ಹಾರಿಹೋಗಿತ್ತು.
ಆದರೂ ವೈದ್ಯರು ಎದೆಭಾಗ ಒತ್ತಿ ಸ್ನೇಹಿತ್‌ನನ್ನು ಬದುಕಿಸಲು ಸಾಕಷ್ಟು ಪ್ರಯತ್ನ ಮಾಡಿದರೂ, ಪ್ರಯೋಜನ ಆಗಲಿಲ್ಲ. ಆದರೂ ಮಗನನ್ನು ಉಳಿಸಿಕೊಳ್ಳುವ ಆಸೆಯಿಂದ ಆಲೂರು ತಾಲೂಕು ಆಸ್ಪತ್ರೆಗೂ ಕರೆ ತಂದರು. ಅಲ್ಲಿ ಸ್ನೇಹಿತನ ಉಸಿರು ಶಾಶ್ವತವಾಗಿ ನಿಂತಿರುವುದನ್ನು ವೈದ್ಯರು ಖಚಿತ ಪಡಿಸಿದರು. ಸದಾ ಮನೆ, ಊರ ತುಂಬೆಲ್ಲಾ ಓಡಾಡಿಕೊಂಡಿದ್ದ ಸ್ನೇಹಿತ ಇನ್ನಿಲ್ಲ ಎಂಬ ನೋವು ಎಲ್ಲರನ್ನೂ ಅತಿಯಾಗಿ ಬಾಧಿಸುತ್ತಿದೆ. ಬೇಸರದ ಸಂಗತಿ ಎಂದರೆ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನು ಕಳೆದುಕೊಂಡಿದ್ದ ಕಾವ್ಯಶ್ರೀ, ಇದೀಗ ಮಗನನ್ನೂ ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದ್ದಾಳೆ. 11ವರ್ಷಕ್ಕೇ ಸ್ನೇಹಿತ್ ಅಗಲಿದ ಸೂತಕ, ನೋವು ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿ ಆತಂಕ ಇಮ್ಮಡಿಗೊಳಿಸಿದೆ.
ದತ್ತಪೀಠ, ಮುಳ್ಳಯ್ಯನಗಿರಿ ಸೇರಿದಂತೆ ಗಿರಿ ಪ್ರದೇಶದ ಗ್ರಾಮಗಳಿಗೆ ಇಲ್ಲ ಸರ್ಕಾರಿ ಬಸ್: ಜನರ ಪರದಾಟ
ಆರಿದ ಜೀವ ಕಾರಂಜಿ: ಕಳೆದ ಗುರುವಾರ ಪ್ರತಿಭಾ ಕಾರಂಜಿ ಸ್ಪರ್ಧೆಗಾಗಿ ಶಾಲೆ ಪರವಾಗಿ ಆಲೂರಿಗೆ ಹೋಗಿದ್ದ. ಅದರಿಂದ ಆಯಾಸವಾಗಿ ಶುಕ್ರವಾರ ಶಾಲೆಗೆ ಹೋಗಿರಲಿಲ್ಲ. ನೀನೂ ಇವತ್ತು ಸ್ಕೂಲಿಗೆ ಹೋಗ ಬೇಡ ಅಣ್ಣನ್ನು ಉಳಿಸಿಕೊಂಡಿದ್ದ. ಬೆಳಗ್ಗೆ ತಾಯಿ ಕಾವ್ಯಶ್ರೀ ಮಕ್ಕಳು, ಹಿರಿಯರಿಗೆ ಕಡುಬು ಮಾಡಿಟ್ಟು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ವಾಪಸ್ ಬರುವುದರೊಳಗೆ ಮುದ್ದಿನ ಕರುಳಕುಡಿ ಅಮ್ಮನಿಂದ ಕಣ್ಮರೆಯಾಗಿದೆ.