ಜಂಟಿ ಕಾರ್ಯಾಚರಣೆ: 11 ಪೆಡ್ಲರ್‌ ಬಂಧನ, 1 ಕೋಟಿಯ ಡ್ರಗ್ಸ್‌ ಜಪ್ತಿ, ಐವರು ವಿದೇಶಿಗರೂ ಸೆರೆ, ವಿದ್ಯಾರ್ಥಿ ವೀಸಾದಲ್ಲಿ ಬಂದು ದಂಧೆ

ಬೆಂಗಳೂರು(ನ.01): ರಾಜಧಾನಿಯ ಡ್ರಗ್ಸ್‌ ಮಾಫಿಯಾದ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿರುವ ಕಬ್ಬನ್‌ ಪಾರ್ಕ್ ಹಾಗೂ ಅಶೋಕ ನಗರ ಠಾಣೆ ಪೊಲೀಸರು, ಐವರು ವಿದೇಶಿ ಪ್ರಜೆಗಳು ಸೇರಿದಂತೆ 11 ಮಂದಿ ಪೆಡ್ಲರ್‌ಗಳನ್ನು ಬಂಧಿಸಿ 1 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ಕೇರಳ ಮೂಲದ ಮೊಹಮ್ಮದ್‌ ಹಾರೋನ್‌, ಮೊಹಮ್ಮದ್‌ ಒರುವಿಲ್‌, ಮೊಹಮ್ಮದ್‌ ಇಲಿಯಾಸ್‌, ಮಂಶನ್ನಿಶೀದ್‌, ತೆಲಂಗಾಣದ ಹೈದರಾಬಾದ್‌ನ ಮೊಹಮ್ಮದ್‌ ಬಿಲಾಲ್‌, ಯೆಮೆನಾ ದೇಶದ ಅಬ್ದುರಬು, ಸುಡಾನ್‌ ದೇಶದ ಅಹ್ಮದ್‌ ಮೊಹಮದ್‌ ಮೂಸ, ನೈಜೀರಿಯಾದ ಜಾನ್‌ ಪಾಲ್‌, ಜೋಸೆಫ್‌ ಬೆಂಜಾಮಿನ್‌, ಇಸ್ಮಾಯಿಲ್‌ ಹಾಗೂ ರಾಮಮೂರ್ತಿ ನಗರದ ಶರ್ವಿನ್‌ ಬಂಧಿತರಾಗಿದ್ದಾರೆ. ಆರೋಪಿಗಳಿಂದ 1 ಕೇಜಿ ಎಂಡಿಎಂಎ, 1.1 ಕೇಜಿ ಗಾಂಜಾ, 11 ಮೊಬೈಲ್‌ಗಳು, .4300 ನಗದು, 2 ಕಾರು ಹಾಗೂ ಬೈಕ್‌ ಸೇರಿ .1.09 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಪ್ರತ್ಯೇಕವಾಗಿ ನಗರದಲ್ಲಿ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಕಬ್ಬನ್‌ ಪಾರ್ಕ್ ಹಾಗೂ ಅಶೋಕ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.

ಬೆಂಗಳೂರು: ಡ್ರಗ್ಸ್‌ ಮಾರುತ್ತಿದ್ದ ವಿದೇಶಿಗರನ್ನು ಗ್ರಾಹಕರ ವೇಷದಲ್ಲಿ ಹಿಡಿದ ಪೊಲೀಸ್‌..!

ವಿದ್ಯಾರ್ಥಿ ಹಾಗೂ ಪ್ರವಾಸ ವೀಸಾದಡಿ ಭಾರತಕ್ಕೆ ಬಂದಿದ್ದ ಈ ಐವರು ವಿದೇಶಿ ಪ್ರಜೆಗಳು ಬೆಂಗಳೂರಿಗೆ ಬಂದು ಹೆಣ್ಣೂರು ಸಮೀಪ ನೆಲೆಸಿದ್ದರು. ಹಣದಾಸೆಗೆ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲದಿಂದ ಡ್ರಗ್ಸ್‌ ಖರೀದಿಸಿ ಬಳಿಕ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ವಿದೇಶಿ ಪೆಡ್ಲರ್‌ಗಳ ತಂಡಕ್ಕೆ ಕೇರಳ ಮೂಲದ ಪೆಡ್ಲರ್‌ಗಳು ಸಾಥ್‌ ಕೊಟ್ಟಿದ್ದಾರೆ. ಆನ್‌ಲೈನ್‌ ಮೂಲಕ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.