ನಿರ್ದಿಷ್ಟ ಜಾಗಕ್ಕೆ ಗ್ರಾಹಕರಿಗೆ ಬರಲು ಸೂಚನೆ, ಅಲ್ಲಿ ಹಣ ಇಟ್ಟ ಬಳಿಕ ಡ್ರಗ್ಸ್‌ ಇಟ್ಟು ಪರಾರಿಯಾಗುತ್ತಿದ್ದ ಖದೀಮರು 

ಬೆಂಗಳೂರು(ನ.01):  ಅಕ್ರಮವಾಗಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಡ್ರಗ್ಸ್‌ ಪೆಡ್ಲರ್‌ಗಳನ್ನು ಶಂಕರಪುರಂ ಠಾಣೆ ಪೊಲೀಸರು ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿಗಳಾದ ತಾನೂಸೆಕಾ ಮತ್ತು ಎಗ್ವಾತ್‌ ಇಂಪೇನಿ ಬಂಧಿತರು. ಆರೋಪಿಗಳಿಂದ .33 ಲಕ್ಷ ಮೌಲ್ಯದ 1.10 ಕೆ.ಜಿ. ತೂಕದ ಎಂಡಿಎಂಎ ಮಾದಕವಸ್ತು ಜಪ್ತಿ ಮಾಡಲಾಗಿದೆ. ಈ ದಂಧೆಯಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾ ಮೂಲದ ಆರೋಪಿಗಳು ನಾಲ್ಕು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಬಂದು ನಗರದ ಕಾಡುಗೋಡಿಯಲ್ಲಿ ಬಾಡಿಗೆಗೆ ಮನೆ ಪಡೆದು ನೆಲೆಸಿದ್ದರು. ವಿದೇಶಿ ಪೆಡ್ಲರ್‌ಗಳಿಂದ ಕಡಿಮೆ ದರಕ್ಕೆ ಪೋಸ್ಟ್‌, ಡಾರ್ಕ್ ವೆಬ್‌, ಸ್ಮಗ್ಲಿಂಗ್‌ ಮೂಲಕ ಮಾದಕವಸ್ತು ತರಿಸುತಿದ್ದರು. ಬಳಿಕ ವಾಟ್ಸಾಪ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಮಾದಕವಸ್ತು ಮಾರಾಟ ಮಾಡುತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಪೂರೈಕೆ; ಮಿಜೋರಾಂ ಮೂಲದ ವ್ಯಕ್ತಿ ಬಂಧನ

ಆರೋಪಿಗಳು ಗ್ರಾಹಕರನ್ನು ನಿಗದಿತ ಜಾಗಕ್ಕೆ ಬರಲು ಹೇಳುತ್ತಿದ್ದರು. ಆ ಜಾಗದಲ್ಲಿ ಗ್ರಾಹಕ ಹಣ ಇರಿಸಬೇಕು. ಬಳಿಕ ಆರೋಪಿಗಳು ಆ ಹಣ ತೆಗೆದುಕೊಂಡು ಮಾದಕವಸ್ತು ಇರಿಸುತ್ತಿದ್ದರು. ನಂತರ ಗ್ರಾಹಕರು ಆ ಮಾದಕವಸ್ತು ತೆಗೆದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ಸಿಕ್ಕಿ ನಿಖರ ಮಾಹಿತಿ ಮೇರೆಗೆ ಗ್ರಾಹಕರ ಸೋಗಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಶಂಕರಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.