ವಿಧಾನಸೌಧದಲ್ಲಿ ಅಧಿಕಾರಿ ಬಳಿ ಸಿಕ್ತು 10 ಲಕ್ಷ ಕ್ಯಾಶ್: ಪಿಡಬ್ಲ್ಯುಡಿ ಎಂಜಿನಿಯರ್ ಬಂಧನ
ರಾಜ್ಯದ ‘ಅಧಿಕಾರ ಶಕ್ತಿ ಕೇಂದ್ರ’ ಆವರಣದಲ್ಲಿ ಮತ್ತೆ ಕಾಂಚಾಣದ ಸದ್ದು ಕೇಳಿ ಬಂದಿದ್ದು, ವಿಧಾನಸೌಧಕ್ಕೆ 10 ಲಕ್ಷ ರು. ಹಣ ಸಾಗಿಸುತ್ತಿದ್ದ ಆರೋಪದ ಮೇರೆಗೆ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ವೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜ.06): ರಾಜ್ಯದ ‘ಅಧಿಕಾರ ಶಕ್ತಿ ಕೇಂದ್ರ’ ಆವರಣದಲ್ಲಿ ಮತ್ತೆ ಕಾಂಚಾಣದ ಸದ್ದು ಕೇಳಿ ಬಂದಿದ್ದು, ವಿಧಾನಸೌಧಕ್ಕೆ 10 ಲಕ್ಷ ರು. ಹಣ ಸಾಗಿಸುತ್ತಿದ್ದ ಆರೋಪದ ಮೇರೆಗೆ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ವೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಹಾಯಕ ಎಂಜಿನಿಯರ್ ಜಗದೀಶ್ ಬಂಧಿತರಾಗಿದ್ದು, ಜಪ್ತಿಯಾದ ಹಣಕ್ಕೆ ಸೂಕ್ತ ದಾಖಲೆ ಸಲ್ಲಿಸದ ಕಾರಣಕ್ಕೆ ಗುರುವಾರ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲಸದ ನಿಮಿತ್ತ ವಿಧಾನಸೌಧಕ್ಕೆ ತೆರಳಲು ಬುಧವಾರ ಸಂಜೆ ಕಾರಿನಲ್ಲಿ ಜಗದೀಶ್ ಆಗಮಿಸಿದ್ದರು. ಆಗ ವಿಧಾನಸೌಧದ ಪಶ್ಚಿಮ ಪ್ರವೇಶ ದ್ವಾರದಲ್ಲಿ ಅವರನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಆದರೆ ಕಾರಿನಲ್ಲಿ ಸಿಕ್ಕಿದ ಹಣದ ಬಗ್ಗೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆ ಕೂಡಲೇ ಹಿರಿಯ ಅಧಿಕಾರಿಗಳಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ. ಬಳಿಕ ಹಣದ ಸಮೇತ ಜಗದೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ಗೌಡ ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ಹೈವೇ ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಈ ಹಣದ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ತಮಗೆ ಹಣದ ಬಗ್ಗೆ ಸರಿಯಾದ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶವನ್ನು ನೀಡುವಂತೆ ಜಗದೀಶ್ ಕೋರಿದ್ದರು. ಇದಕ್ಕೆ ಸಮ್ಮತಿಸಿ ಗುರುವಾರ ವಿಚಾರಣೆಗೆ ದಾಖಲೆ ಸಮೇತ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಯಿತು. ಆದರೆ ಮರುದಿನ ವಿಚಾರಣೆಗೆ ಹಾಜರಾದ ಅವರು ತನಿಖೆಗೆ ಅಸಹಕಾರ ತೋರಿದರು. ಹೀಗಾಗಿ ಜಗದೀಶ್ ಅವರನ್ನು ಸುದೀರ್ಘ ವಿಚಾರಣೆ ಬಳಿಕ ಬಂಧಿಸಲಾಯಿತು ಎಂದು ಡಿಸಿಪಿ ಹೇಳಿದ್ದಾರೆ.
ವಿಧಾನಸೌಧದ ಪಶ್ಚಿಮ ಪ್ರವೇಶ ದ್ವಾರದಲ್ಲೇ 2016ರಲ್ಲಿ ಹಿರಿಯ ವಕೀಲರೊಬ್ಬರ ಬಳಿ 1.08 ಕೋಟಿ ರು. ಹಾಗೂ 2019ರಲ್ಲಿ ಆಗಿನ ಸಮಾಜ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿಅವರಿಗೆ ಸೇರಿದ್ದು ಎನ್ನಲಾದ 50 ಲಕ್ಷ ರು. ನಗದು ಜಪ್ತಿಯಾಗಿತ್ತು. ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಈ ಪ್ರಕರಣಗಳನ್ನು ಮರೆಯುವ ಮುನ್ನವೇ ಮತ್ತೆ ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಫಲವತ್ತಾದ ಇಲಾಖೆ ಎನ್ನಲಾದ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಬಳಿ ಹಣ ಸಿಕ್ಕಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ.
ಡೀಲ್‌ಗೆ ಸಂಬಂಧಿಸಿದ ಹಣ?: ಹಲವು ದಿನಗಳಿಂದ ಮಂಡ್ಯ ಜಿಲ್ಲೆಯ ಪಿಡಬ್ಲ್ಯುಡಿ ಇಲಾಖೆಯ ಸಹಾಯಕ ಎಂಜಿನಿಯರ್ ಆಗಿ ಜಗದೀಶ್ ಕಾರ್ಯನಿರ್ವಹಿಸುತ್ತಿದ್ದು, ಕಾಮಗಾರಿಯೊಂದರ ‘ಡೀಲ್’ ಸಲುವಾಗಿ ವಿಧಾನಸೌಧಕ್ಕೆ ಅಧಿಕಾರಿಯೊಬ್ಬರ ಭೇಟಿಗೆ ಅವರು ತೆರಳುತ್ತಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಈ ಹಣದಲ್ಲಿ ಪಿಡಬ್ಲ್ಯುಡಿ ಇಲಾಖೆಯ ಮತ್ತೊಬ್ಬ ಹಿರಿಯ ಅಧಿಕಾರಿ ಪಾತ್ರ ಸಹ ಇದ್ದು, ಆ ಅಧಿಕಾರಿ ಸೂಚನೆ ಮೇರೆಗೆ ಮಂಡ್ಯದಿಂದ ಹಣ ತೆಗೆದುಕೊಂಡು ಜಗದೀಶ್ ಬಂದಿದ್ದರು ಎನ್ನಲಾಗಿದೆ.
ಏನಿದು ಪ್ರಕರಣ?
- ಮಂಡ್ಯದ ಲೋಕೋಪಯೋಗಿ ಸಹಾಯಕ ಎಂಜಿನಿಯರ್ ವಿಧಾನಸೌಧಕ್ಕೆ
- ಕಾರಿನಲ್ಲಿ ಆಗಮಿಸಿದ ಅವರನ್ನು ಪರಿಶೀಲಿಸಿದಾಗ 10 ಲಕ್ಷ ಹಣ ಮೊತ್ತ
- ದಾಖಲೆ ಕೇಳಿದ ಪೊಲೀಸರು. ಒದಗಿಸಲು ಎಂಜಿನಿಯರ್ ವಿಫಲ. ವಶಕ್ಕೆ
- ಪ್ರಕರಣ ದಾಖಲು. ಎಂಜಿನಿಯರ್ ಕೋರಿಕೆಯಂತೆ 1 ದಿನ ಸಮಯಾವಕಾಶ
- ಮರುದಿನವೂ ಹಣದ ಮೂಲವನ್ನು ಎಂಜಿನಿಯರ್ ತಿಳಿಸದ್ದರಿಂದ ಬಂಧನ
ಕುಕ್ಕರ್ ಬಾಂಬ್ ಸ್ಫೋಟ ತನಿಖೆ ತೀವ್ರ: ರಾಜ್ಯದ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ
ವಿಧಾನಸೌಧದಲ್ಲಿ ದೊರೆತ .10 ಲಕ್ಷ ‘ಪೇ-ಸಿಎಂ’ ವಸೂಲಿಗೆ ಸಾಕ್ಷಿ. ನಡ್ಡಾ ರಾಜ್ಯ ಭೇಟಿಗೂ ಇದಕ್ಕೂ ಸಂಬಂಧವಿದೆಯೇ? ಸಿಎಂ ಕುರ್ಚಿ ಅಡಿಯಲ್ಲೇ ಹವಾಲಾ, ಹಫ್ತಾ ವಸೂಲಿ ನಡೆಯುತ್ತಿದೆ.
- ರಾಜ್ಯ ಕಾಂಗ್ರೆಸ್
ತಮ್ಮ ಬಳಿ ಪತ್ತೆಯಾದ ಹಣದ ಬಗ್ಗೆ ಎಎಇ ಜಗದೀಶ್ ಸೂಕ್ತ ದಾಖಲೆ ಸಲ್ಲಿಸಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಹಣದ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ
-ಶ್ರೀನಿವಾಸಗೌಡ, ಡಿಸಿಪಿ, ಕೇಂದ್ರ ವಿಭಾಗ