ಕೌಶಲ್ಯ ಭವನದ ವಿಭಾಗೀಯ ಕಚೇರಿಯ ಪ್ರಥಮ ದರ್ಜೆ ಸಹಾಯಕಿಎಂ.ಶೋಭಾ ಹಣ ಕಳೆದುಕೊಂಡವರು. ದೂರಿನ ಮೇರೆಗೆ ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡ ಪೊಲೀಸರು.
ಬೆಂಗಳೂರು(ಡಿ.14): ಹೊಸೂರು ರಸ್ತೆಯ ಕೌಶಲ್ಯ ಭವನದ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನದ ಡಿಕ್ಕಿ ತೆರೆದು ಅದರಲ್ಲಿದ್ದ 1.50 ಲಕ್ಷವನ್ನು ದುಷ್ಕರ್ಮಿಗಳು ಎಗರಿಸಿರುವ ಘಟನೆ ನಡೆದಿದೆ. ಕೌಶಲ್ಯ ಭವನದ ವಿಭಾಗೀಯ ಕಚೇರಿಯ ಪ್ರಥಮ ದರ್ಜೆ ಸಹಾಯಕಿ(ಎಫ್‌ಡಿಎ) ಎಂ.ಶೋಭಾ ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಚಿಕ್ಕಮಗಳೂರು ಮೂಲದ ಶೋಭಾ ಅವರು ಕೌಶಲ್ಯ ಭವನದಲ್ಲಿ ಎಫ್‌ಡಿಎ ಆಗಿ ಕೆಲಸ ಮಾಡುತ್ತಿದ್ದಾರೆ. ಊರಿನ ಮನೆಯ ರಿಪೇರಿ ಮಾಡಿಸುವ ಉದ್ದೇಶದಿಂದ ಖಾತೆಯಿಂದ .1.50 ಲಕ್ಷ ಡ್ರಾ ಮಾಡಿ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇರಿಸಿದ್ದರು. ಅಂದು ಮಧ್ಯಾಹ್ನ 12.30ರ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಡೈರಿ ಸರ್ಕಲ್ ಬಳಿ ಇರುವ ಐಟಿಐ ಕಾಲೇಜು ಆವರಣದ ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ, ಡಿಕ್ಕಿಯಲ್ಲಿದ್ದ ಮೊಬೈಲ್ ಹಾಗೂ ಕಚೇರಿ ಕೀ ತೆಗೆದುಕೊಂಡು ದ್ವಿಚಕ್ರ ವಾಹನದ ಕೀಯನ್ನು ಮರೆತು ಡಿಕ್ಕಿಯಲ್ಲೇ ಬಿಟ್ಟು ಕಚೇರಿಗೆ ತೆರಳಿದ್ದಾರೆ.
ಮನೆ ಕಳ್ಳತನಕ್ಕೆ ಬಂದವನಿಗೆ ಗುಂಡು ಹಾರಿಸಿದ ಮಾಲೀಕ
ಮಧ್ಯಾಹ್ನ 2.30ಕ್ಕೆ ಊಟ ಸಮಯವಾದ್ದರಿಂದ ಊಟದ ಬ್ಯಾಗ್ ನೆನಪಾಗಿದೆ. ಈ ವೇಳೆ ದ್ವಿಚಕ್ರ ವಾಹನದ ಕೀ ಹುಡುಕಿದಾಗ ದ್ವಿಚಕ್ರ ವಾಹನದಲ್ಲೇ ಮರೆತು ಕೀ ಬಿಟ್ಟಿರುವುದು ನೆನಪಾಗಿದೆ. ಕೂಡಲೇ ಪಾರ್ಕಿಂಗ್ ಸ್ಥಳಕ್ಕೆ ಬಂದು ನೋಡಿದಾಗ ದ್ವಿಚಕ್ರ ವಾಹನದಲ್ಲಿ ಕೀ ಇರಲಿಲ್ಲ. ಬಳಿಕ ಸೆಕ್ಯೂರಿಟಿ ಚೇರ್ ಮೇಲೆ ಕೀ ಕಂಡು ಬಂದಿದೆ. ಆ ಕೀ ತೆಗೆದುಕೊಂಡು ಡಿಕ್ಕಿ ತೆರೆದು ನೋಡಿದಾಗ ಬ್ಯಾಗ್‌ನಲ್ಲಿ ಇರಿಸಿದ್ದ .1.50 ಲಕ್ಷ ಇರಲಿಲ್ಲ. ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಹಾಗೂ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಯಾರೊಬ್ಬರು ತಮಗೆ ಗೊತ್ತಿಲ್ಲ ಎಂದಿದ್ದಾರೆ. ಹೀಗಾಗಿ ಶೋಭಾ ಅವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
