ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಆಸ್ಟ್ರೇಲಿಯಾ ವಿರುದ್ಧ 23 ರನ್‌ಗಳ ಸ್ಮರಣೀಯ ಜಯ ಸಾಧಿಸಿದೆ. 170 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಆರ್‌ಸಿಬಿ ಮಾಜಿ ವೇಗಿ ಬ್ಲೆಸಿಂಗ್ ಮುಜರಬಾನಿ ಅವರ 4 ವಿಕೆಟ್‌ಗಳ ಮಾರಕ ದಾಳಿಗೆ ನಲುಗಿ 146 ರನ್‌ಗಳಿಗೆ ಸರ್ವಪತನ ಕಂಡಿತು.

ಕೊಲಂಬೋ: 2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ್ದ ಜಿಂಬಾಬ್ವೆ ತಂಡವು ಇದೀಗ 10ನೇ ಆವೃತ್ತಿಯಲ್ಲಿಂದು ಮಾಜಿ ಚಾಂಪಿಯನ್ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಬ್ಲೆಸಿಂಗ್ ಮುಜರಬಾನಿ 4 ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಸ್ಟ್ರೇಲಿಯಾ ಎದುರು ಜಿಂಬಾಬ್ವೆ ತಂಡವು 23 ರನ್‌ಗಳ ಸ್ಮರಣೀಯ ಜಯ ದಾಖಲಿಸಿತು.

Add Asianetnews Kannada as a Preferred SourcegooglePreferred

ಇಲ್ಲಿನ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ಗೆಲ್ಲಲು 170 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕಾಂಗರೂ ಪಡೆ ಕೇವಲ 29 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಜೋಶ್ ಇಂಗ್ಲಿಶ್ 8 ರನ್ ಗಳಿಸಿದರೆ, ಕ್ಯಾಮರೋನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು. ಇನ್ನು ನಾಯಕ ಟ್ರ್ಯಾವಿಸ್ ಹೆಡ್ ಬ್ಯಾಟಿಂಗ್ ಕೇವಲ 17 ರನ್‌ಗಳಿಗೆ ಸೀಮಿತವಾಯಿತು.

ಮ್ಯಾಕ್ಸ್‌ವೆಲ್-ರೆನ್‌ಶೋ ಹೋರಾಟ: 

ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಐದನೇ ವಿಕೆಟ್‌ಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮ್ಯಾಟ್ ರೆನ್‌ಶೋ ಆಸರೆಯಾದರು. ಈ ಜೋಡಿ ಅಮೂಲ್ಯ 77 ರನ್‌ಗಳ ಜತೆಯಾಟವಾಡುವ ಮೂಲಕ ಕಾಂಗರೂ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿತು. ಆದರೆ 31 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್ ವಿಕೆಟ್ ಪತನವಾಗುತ್ತಿದ್ದಂತೆಯೇ ಆಸ್ಟ್ರೇಲಿಯಾ ಬಂಡಿ ಹಳಿತಪ್ಪಿತು.

ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಮ್ಯಾಟ್ ರೆನ್‌ಶೋ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 65 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 19.3 ಓವರ್‌ಗಳಲ್ಲಿ 146 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಜಿಂಬಾಬ್ವೆ ಟೂರ್ನಿಯಲ್ಲಿ 23 ರನ್‌ಗಳ ಅವಿಸ್ಮರಣೀಯ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.

Scroll to load tweet…

ಪಂದ್ಯ ಗೆಲ್ಲಿಸಿದ ಆರ್‌ಸಿಬಿ ವೇಗಿ:

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಮಧ್ಯ ಭಾಗದಲ್ಲಿ ಬ್ಯಾಕ್‌ಅಪ್ ಆಟಗಾರನಾಗಿ ಆರ್‌ಸಿಬಿ ತಂಡ ಕೂಡಿಕೊಂಡಿದ್ದ ಬ್ಲೆಸ್ಸಿಂಗ್ ಮುಜರಾಬಾನಿ 4 ಓವರ್ ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪ್ರದರ್ಶನಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿತು.