ರಾವುಲ್ಪಿಂಡಿ ಟೆಸ್ಟ್ ಪಂದ್ಯದಲ್ಲಿ ರನ್ ಮಳೆ ಹರಿಸುತ್ತಿರುವ ಇಂಗ್ಲೆಂಡ್ಕೇವಲ 14 ಓವರ್‌ನಲ್ಲಿ ಶತಕದ ಜತೆಯಾಟ ನಿಭಾಯಿಸಿದ ಇಂಗ್ಲೆಂಡ್ ಆರಂಭಿಕರುಕೇವಲ 68 ಓವರ್‌ನಲ್ಲಿ 448 ರನ್ ಸಿಡಿಸಿದ ಇಂಗ್ಲೆಂಡ್ ತಂಡ
ರಾವುಲ್ಪಿಂಡಿ(ಡಿ.01): ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ರಾವುಲ್ಪಿಂಡಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. 17 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ತಂಡವು ಭರ್ಜರಿ ಆರಂಭವನ್ನು ಪಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿರುವ ಇಂಗ್ಲೆಂಡ್ ತಂಡವು ಸ್ಪೋಟಕ ಬ್ಯಾಟಿಂಗ್ ಮೂಲಕ ರನ್ ಕಲೆಹಾಕುತ್ತಿದೆ. ಇನ್ನು ಇದೇ ವೇಳೆ ಇಂಗ್ಲೆಂಡ್ ಆರಂಭಿಕರಾದ ಜಾಕ್ ಕ್ರೌವ್ಲಿ ಹಾಗೂ ಬೆನ್ ಡುಕೆಟ್ ಮೊದಲ ವಿಕೆಟ್‌ಗೆ ಸ್ಪೋಟಕ ಶತಕದ ಜತೆಯಾಟವಾಡುವ ಮೂಲಕ ದಾಖಲೆ ಬರೆದಿದ್ದಾರೆ.
ಹೌದು, ರಾವುಲ್ಪಿಂಡಿ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ರನ್ ಮಳೆ ಹರಿಸಲಾರಂಭಿಸಿದ್ದಾರೆ. ಆರಂಭಿಕ ಬ್ಯಾಟರ್ ಜಾಕ್ ಕ್ರೌವ್ಲಿ, ನಸೀಂ ಶಾ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಮೂರು ಬೌಂಡರಿ ಬಾರಿಸುವ ಮೂಲಕ ಸ್ಪೋಟಕ ಬ್ಯಾಟಿಂಗ್ ನಡೆಸುವ ಎಚ್ಚರಿಕೆ ನೀಡಿದರು. ಕ್ರೌವ್ಲಿ ಕೇವಲ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮೊದಲ ದಿನದಾಟದ ಲಂಚ್ ಬಳಿಕ ನಸೀಂ ಶಾ ಬೌಲಿಂಗ್‌ನಲ್ಲಿ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ಜಾಕ್ ಕ್ರೌವ್ಲಿ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು.
ಆಸ್ಟ್ರೇಲಿಯಾ ತಂಡದಲ್ಲಿ ಹೇಡಿಗಳಿಲ್ಲ: ಕಾಂಗರೂ ನಾಯಕ ಪ್ಯಾಟ್ ಕಮಿನ್ಸ್ ಹೀಗಂದಿದ್ದೇಕೆ..?
ಇನ್ನು ಆರು ವರ್ಷಗಳ ಬಳಿಕ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬೆನ್ ಡುಕೆಟ್ ಕೂಡಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಶತಕ ಸಿಡಿಸಿ ಸಂಭ್ರಮಿಸಿದರು. ಮೊದಲ 14 ಓವರ್‌ನಲ್ಲೇ ಶತಕದ ಜತೆಯಾಟವಾಡುವ ಮೂಲಕ ಜಾಕ್ ಕ್ರೌವ್ಲಿ ಹಾಗೂ ಬೆನ್ ಡುಕೆಟ್ ಜೋಡಿ ಇಂಗ್ಲೆಂಡ್ ತಂಡಕ್ಕೆ ಕನಸಿನ ಆರಂಭ ಒದಗಿಸಿಕೊಟ್ಟರು. 145 ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡವು ಮೊದಲ ಸೆಷನ್‌ನಲ್ಲಿಯೇ ವಿಕೆಟ್ ನಷ್ಟವಿಲ್ಲದೇ 174 ರನ್‌ಗಳ ಜತೆಯಾಟ ನಿಭಾಯಿಸಿತು.
ಅಗ್ರಕ್ರಮಾಂಕದ ಮೂವರು ಶತಕ: ಬೃಹತ್ ಮೊತ್ತದತ್ತ ಇಂಗ್ಲೆಂಡ್: ಇಲ್ಲಿನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು, ಪಾಕಿಸ್ತಾನ ಎದುರಿನ ಮೊದಲ ಟೆಸ್ಟ್‌ನ ಮೊದಲ ದಿನವೇ ಸ್ಪೋಟಕ ಆರಂಭವನ್ನೇ ಪಡೆದಿದೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು ಮೊದಲ ವಿಕೆಟ್‌ಗೆ 35.4 ಓವರ್‌ಗಳಲ್ಲಿ 233 ರನ್‌ಗಳ ಜತೆಯಾಟವಾಡಿತು. ಆರಂಭಿಕ ಬ್ಯಾಟರ್‌ಗಳಾದ ಬೆನ್ ಡುಕೆಟ್ 110 ಎಸೆತಗಳಲ್ಲಿ 15 ಬೌಂಡರಿ ಸಹಿತ 107 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಜಾಕ್ ಕ್ರೌಲಿ 111 ಎಸೆತಗಳಲ್ಲಿ 21 ಬೌಂಡರಿ ಸಹಿತ 122 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಓಲಿ ಪೋಪ್ 102 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ರೂಟ್ 23 ರನ್ ಬಾರಿಸಿದರೆ, ಮತ್ತೋರ್ವ ಬ್ಯಾಟರ್ ಹ್ಯಾರಿ ಬ್ರೂಕ್ 84 ರನ್ ಬಾರಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. 67 ಓವರ್ ಅಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು 448 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದೆ.
