Asianet Suvarna News Asianet Suvarna News

Shubman Gill: ಗಿಲ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಲೇ ಕಾಲೆಳೆದ ಯುವರಾಜ್ ಸಿಂಗ್..!

* 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶುಭ್‌ಮನ್‌ ಗಿಲ್‌
* ಶುಭ್‌ಮನ್‌ ಗಿಲ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಯುವರಾಜ್ ಸಿಂಗ್

Yuvraj Singh teases birthday boy Shubman Gill for his driving skills in social Media kvn
Author
First Published Sep 8, 2022, 5:41 PM IST

ನವದೆಹಲಿ(ಸೆ.08): ಟೀಂ ಇಂಡಿಯಾ ಯುವ ಪ್ರತಿಭಾನ್ವಿತ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಗುರುವಾರವಾದ ಇಂದು(ಸೆ.08) ತಮ್ಮ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗಿಲ್‌ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಗಿಲ್‌ ಹುಟ್ಟುಹಬ್ಬಕ್ಕೆ ತಮಾಷೆಯಾಗಿ ಶುಭಕೋರಿದ್ದಾರೆ.

ಯುವರಾಜ್ ಸಿಂಗ್, ಶುಭ್‌ಮನ್‌ ಗಿಲ್ ಅವರ ಡ್ರೈವಿಂಗ್‌ ಸ್ಕಿಲ್‌ ಬಗ್ಗೆ ಕಾಲೆಳೆದಿದ್ದಾರೆ. ಶುಭ್‌ಮನ್‌ ಗಿಲ್ ಅವರು ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತಿರುವ ವಿಡಿಯೋ ಪೋಸ್ಟ್‌ ಮಾಡಿರುವ ಯುವರಾಜ್ ಸಿಂಗ್, ಇವರು ಕಾರು ಡ್ರೈವ್‌ಗಿಂತ ಕ್ರಿಕೆಟ್‌ನ ಡ್ರೈವ್ ಚೆನ್ನಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ, ಜನ್ಮದಿನದ ಶುಭಾಶಯಗಳು ಶುಭ್‌ಮನ್ ಗಿಲ್‌. ರಸ್ತೆ ಮೇಲಿನ ಡ್ರೈವಿಂಗ್‌ಗಿಂತ ಪಿಚ್‌ ಮೇಲಿನ ಡ್ರೈವ್ ನೋಡಲು ಚೆನ್ನಾಗಿರುತ್ತದೆ. ನಿಮಗೆ ಶುಭವಾಗಲಿ, ನಿಮ್ಮ ಬ್ಯಾಟ್ ಘರ್ಜಿಸುತ್ತಿರಲಿ ಎಂದು ಯುವಿ ಶುಭ ಹಾರೈಸಿದ್ದಾರೆ

ಶುಭ್‌ಮನ್‌ ಗಿಲ್ ವೃತ್ತಿ ಜೀವನ ಆರಂಭದಿಂದ, ಟೀಂ ಇಂಡಿಯಾ ಪ್ರತಿನಿಧಿಸುವವರೆಗೂ ಯುವರಾಜ್ ಸಿಂಗ್ ತನ್ನದೇ ಪಾತ್ರ ನಿಭಾಯಿಸಿದ್ದಾರೆ. ಶುಭ್‌ಮನ್‌ ಗಿಲ್‌, ಪಂಜಾಬ್ ದೇಶಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವಾಗ ಯುವರಾಜ್ ಸಿಂಗ್ ಮೆಂಟರ್‌ ಆಗಿ ಕಾರ್ಯ ನಿರ್ವಹಿಸಿದ್ದರು. 

ಇನ್ನು ಶುಭ್‌ಮನ್‌ ಗಿಲ್‌ ತಾವು ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಿ ಬ್ಯಾಟಿಂಗ್ ಸಲಹೆಯನ್ನು ಪಡೆದಿದ್ದಾಗಿ ತಿಳಿಸಿದ್ದರು. ಜಿಂಬಾಬ್ವೆ ಎದುರಿನ ಏಕದಿನ ಸರಣಿಯಲ್ಲಿ ಶುಭ್‌ಮನ್‌ ಗಿಲ್ ಚೊಚ್ಚಲ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದ್ದರು.

ಶಮಿಯನ್ನು ಮನೆಯಲ್ಲಿ ಕೂರಿಸಿದ್ದು ದಿಗ್ಬ್ರಮೆ ಮೂಡಿಸಿತು: ಟೀಂ ಇಂಡಿಯಾ ಆಯ್ಕೆಯನ್ನು ಟೀಕಿಸಿದ ರವಿಶಾಸ್ತ್ರಿ..!

ಶುಭ್‌ಮನ್‌ ಗಿಲ್‌, ವೆಸ್ಟ್‌ ಇಂಡೀಸ್ ಪ್ರವಾಸದ ವೇಳೆಯಲ್ಲಿಯೇ ಶತಕ ಸಿಡಿಸುವ ಅವಕಾಶ ಬಂದಿತ್ತಾದರೂ, ಕೊನೆಯ ಕ್ಷಣದಲ್ಲಿ ಸಾಧ್ಯವಾಗಿರಲಿಲ್ಲ. ಆದರೆ ಜಿಂಬಾಬ್ವೆ ಪ್ರವಾಸದ ವೇಳೆಯಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಶುಭ್‌ಮನ್‌ ಗಿಲ್ ಯಶಸ್ವಿಯಾಗಿದ್ದರು.  ನಾನು ಜಿಂಬಾಬ್ವೆಗೆ ಬಂದಿಳಿಯುವ ಮುನ್ನ ನಾನು ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ಅವರು, ನೀನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತೀಯ. ಪಿಚ್‌ಗೆ ಹೊಂದಿಕೊಂಡ ಬಳಿಕ ಸಾಕಷ್ಟು ಕ್ರೀಸ್‌ನಲ್ಲಿರಲು ಪ್ರಯತ್ನಿಸು ಎಂದಿದ್ದರು. ಇದಷ್ಟೇ ಅಲ್ಲದೇ ಅವರು ಶತಕ ಸಿಡಿಸಲು ಪ್ರೇರೇಪಿಸುತ್ತಿದ್ದರು ಎಂದು ಶುಭ್‌ಮನ್‌ ಗಿಲ್ ಹೇಳಿದ್ದರು.

ಶುಭ್‌ಮನ್ ಗಿಲ್ ಭಾರತ ಪರ 11 ಟೆಸ್ಟ್‌ ಹಾಗೂ 9 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 579 ಹಾಗೂ 499 ರನ್‌ ಬಾರಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿರುವ ಗಿಲ್‌ ಒಟ್ಟು 74 ಐಪಿಎಲ್ ಪಂದ್ಯಗಳನ್ನಾಡಿ 1900 ರನ್ ಬಾರಿಸಿದ್ದಾರೆ.

Follow Us:
Download App:
  • android
  • ios