Asianet Suvarna News Asianet Suvarna News

'ಮುಂದೊಂದು ದಿನ ಖಂಡಿತಾ ದೊಡ್ಡ ಆಲ್ರೌಂಡರ್‌ ಆಗ್ತೀಯಾ..' ಸಚಿನ್‌ ಪುತ್ರನಿಗೆ ಯುವರಾಜ್‌ ತಂದೆಯ ಸಂದೇಶ!

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಅರ್ಜುನ್ ತೆಂಡುಲ್ಕರ್‌ಗೆ ಚಂಡೀಗಢದಲ್ಲಿ ತರಬೇತಿ ನೀಡಿದ್ದರು. ತರಬೇತಿ ಮುಗಿಸಿ ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಅರ್ಜುನ್‌ ತೆಂಡುಲ್ಕರ್‌ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಗಮನಸೆಳೆದಿದ್ದಾರೆ. ಸ್ವತಃ ಸಚಿನ್‌ ತೆಂಡುಲ್ಕರ್‌, ಯೋಗರಾಜ್‌ ಸಿಂಗ್‌ಗೆ ಮಗನಿಗೆ ತರಬೇತಿ ನೀಡುವಂತೆ ಮನವಿ ಮಾಡಿದ್ದರು.
 

Yuvraj Singh father Yograj singh message to Sachin Tendulkar son Arjun Tendulkar san
Author
First Published Dec 15, 2022, 6:26 PM IST

ಚಂಡೀಗಢ (ಡಿ.15): ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಆಲ್ರೌಂಡರ್‌ ಅರ್ಜುನ್‌ ತೆಂಡುಲ್ಕರ್‌, ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದಾರೆ. ಗೋವಾ ಪರವಾಗಿ ರಾಜಸ್ಥಾನ ವಿರುದ್ಧ ಆಡಿದ ತಮ್ಮ ಮೊದಲ ಪಂದ್ಯದಲ್ಲಿಯೇ ಅರ್ಜುನ್‌ ತೆಂಡುಲ್ಕರ್‌ ಶತಕ ಬಾರಿಸಿದ್ದಾರೆ. ಅದರೊಂದಿಗೆ 34 ವರ್ಷಗಳ ಹಿಂದೆ ತಂದೆ ನಿರ್ಮಿಸಿದ್ದ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ. 1988ರ ಡಿಸೆಂಬರ್‌ನಲ್ಲಿಯೇ ಸಚಿನ್‌ ತೆಂಡುಲ್ಕರ್‌ ತಮ್ಮ ಪಾದಾರ್ಪಣಾ ಪಂದ್ಯದಲ್ಲಿ ಶತಕ ಸಿಡಿಸಿದ ದಾಖಲೆ ಮಾಡಿದ್ದರು. ಇನ್ನು ಅರ್ಜುನ್‌ ತೆಂಡುಲ್ಕರ್‌ ಅವರ ಅಭಿಮಾನಿಗಳು ಕೂಡ ಇವರ ಹೊಸ ಅವತಾರವನ್ನು ನೋಡಿ ಖುಷಿಯಾಗಿದ್ದಾರೆ. ಅದರಲ್ಲಿ ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್‌ ಸಿಂಗ್‌ ಕೂಡ ಒಬ್ಬರು. ಅರ್ಜುನ್‌ ತೆಂಡುಲ್ಕರ್‌ ಅವರ ಪ್ರಗತಿಯಲ್ಲಿ ಯೋಗರಾಜ್‌ ಸಿಂಗ್‌ ಅವರ ಪಾತ್ರವೇ ಬಹಳ ಮುಖ್ಯವಾಗಿದೆ. ರಣಜಿ ಟ್ರೋಫಿಗೂ ಮುನ್ನ ಅರ್ಜುನ್‌ ತೆಂಡುಲ್ಕರ್‌, ಯೋಗರಾಜ್‌ ಸಿಂಗ್‌ ಅವರ ಬಳಿ ಕಠಿಣ ತರಬೇತಿಗೆ ತೆರಳಿದ್ದರು. ಈ ಕಾರಣಕ್ಕಾಗಿ ಬೌಲಿಂಗ್‌ನಲ್ಲಿ ಗಮನಸೆಳೆದಿದ್ದ ಅರ್ಜುನ್‌ ತೆಂಡುಲ್ಕರ್‌, ಆಲ್ರೌಂಡರ್‌ ಆಗಿ ಬ್ಯಾಟಿಂಗ್‌ನಲ್ಲಿಯೂ ಗಮನಾರ್ಹವಾದ ಪ್ರಗತಿ ಕಂಡಿದ್ದಾರೆ.


ತರಬೇತಿ ನೀಡುವಂತೆ ಯುವರಾಜ್‌ ಬಳಿ ಕೇಳಿಕೊಂಡಿದ್ದ ಸಚಿನ್‌: ರಾಜಸ್ಥಾನ ವಿರುದ್ಧ ಅರ್ಜುನ್‌ ತೆಂಡುಲ್ಕರ್‌ ಶತಕ ಸಾಧನೆ ಮಾಡಿದ ಬಳಿಕ, ಇಂಗ್ಲೆಂಡ್‌ನಲ್ಲಿದ್ದ ಯೋಗರಾಜ್‌ ಸಿಂಗ್‌ ಸ್ವತಃ ಅರ್ಜುನ್‌ ತೆಂಡುಲ್ಕರ್‌ಗೆ ಒಂದು ಸಂದೇಶ ಕಳಿಸಿದ್ದಾರೆ. ಅದರಲ್ಲಿ 'ನೀನು ಈಗಲೇ ಬರೆದಿಟ್ಟುಕೋ, ಮುಂದೊಂದು ದಿನ ನೀನು ಖಂಡಿತಾ ಮಹಾನ್‌ ಆಲ್ರೌಂಡರ್‌ ಆಗ್ತೀಯಾ' ಎಂದು ಅವರು ಬರೆದಿದ್ದರು. ಇಂಡಿಯನ್‌ ಎಕ್ಸ್‌ಪ್ರೆಸ್‌ ಈ ವರದಿಯನ್ನು ಮಾಡಿದ್ದು, ಸ್ವತಃ ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಅವರ ಬಳಿ ಮಗನಿಗೆ  ತರಬೇತಿ ನೀಡುವಂತೆ ಕೇಳಿಕೊಂಡಿದ್ದನ್ನು ಬಹಿರಂಗ ಪಡಿಸಿದ್ದಾರೆ. ಆದರೆ, ಯುವರಾಜ್‌ ಸಿಂಗ್‌ ಅವರನ್ನು ಆಲ್ರೌಂಡರ್‌ ಆಗಿ ರೂಪಿಸಿದ್ದು ಅವರ ತಂದೆ ಯೋಗರಾಜ್‌ ಸಿಂಗ್‌. ತನಗಿಂತ ಅರ್ಜುನ್‌ರನ್ನು ತರಬೇತಿ ಮಾಡಲು ತಂದೆ ಯೋಗರಾಜ್‌ ಸಿಂಗ್‌ ಅವರೇ ಸರಿಯಾದ ವ್ಯಕ್ತಿ ಎಂದುಕೊಂಡ ಯುವರಾಜ್‌, ತಂದೆಯ ಬಳಿ ಈ ಮಾತನ್ನು ಹೇಳಿದ್ದಾರೆ. ಯೋಗರಾಜ್‌ ಸಿಂಗ್‌ ಸಂತೋಷದಿಂದಲೇ ಇದನ್ನು ಒಪ್ಪಿಕೊಂಡಿದ್ದು, ಅರ್ಜುನ್‌ ಅವರಿಗೆ ತರಬೇತಿ ನೀಡಿದ್ದರು.

ಎರಡು ವಾರಗಳ ಕಾಲ ಯೋಗರಾಜ್‌ ಸಿಂಗ್‌ರಿಂದ ತರಬೇತಿ: ತುಂಬಾ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದ್ದೀಯ ಮಗನೆ. ಒಂದು ದಿನ ನೀನು ಖಂಡಿತವಾಗಿ ದೊಡ್ಡ ಆಲ್ರೌಂಡರ್‌ ಆಗ್ತೀಯ. ಇದನ್ನು ಬೇಕಾದರೆ ಈಗಲೇ ಬರೆದಿಟ್ಟಿಕೋ ಎಂದು ಯೋಗರಾಜ್‌ ಸಿಂಗ್‌ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ. ಆ ಬಳಿಕ ಈ ವಿಚಾರವಾಗಿ ಮಾತನಾಡಿರುವ ಅವರು, 'ಸೆಪ್ಟೆಂಬರ್‌ ಮೊದಲ ವಾರದಲ್ಲಿ ನನಗೆ ಯುವರಾಜ್‌ ಕರೆ ಮಾಡಿದ್ದ. ಅರ್ಜುನ್‌ ಚಂಡೀಗಢದಲ್ಲಿ ಎರಡು ವಾರ ಇರುತ್ತಾನೆ ಎಂದು ಸಚಿನ್‌ ಹೇಳಿದ್ದು, ಅವರಿಗೆ ತರಬೇತಿ ನೀಡಲು ಸಾಧ್ಯವೇ ಎಂದು ಕೇಳಿದ್ದಾಗಿ ತಿಳಿಸಿದ್ದ' ಎಂದಿದ್ದಾರೆ. ಬಳಿಕ ಮಾತನಾಡಿದ ಅವರು, ಸಚಿನ್‌ ಮಾತನ್ನು ನಾನು ಹೇಗೆ ನಿರಾಕರಿಸಲು ಸಾಧ್ಯ, ಆತ ನನ್ನ ಹಿರಿಯ ಮಗನಿದ್ದಂತೆ. ಆದರೆ, ನಾನೊಂದು ಷರತ್ತನ್ನು ಹೇಳಿದ್ದೆ. ನನ್ನ ತರಬೇತಿ ಯಾವ ರೀತಿ ಇರುತ್ತದೆ ಎನ್ನುವುದು ನಿನಗೆ ಗೊತ್ತು. ನನ್ನ ಮತ್ತು ತರಬೇತಿ ಪಡೆಯುತ್ತಿರುವ ವ್ಯಕ್ತಿಯ ಮಧ್ಯೆ ಯಾರೊಬ್ಬರೂ ಬರಬಾರದು ಎಂದು ಹೇಳಿದ್ದೆ. ಅದಕ್ಕೆ ಅವರೂ ಕೂಡ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.

ಅಪ್ಪನ ದಾರಿಯಲ್ಲಿ ಮಗ, ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಅರ್ಜುನ್‌ ತೆಂಡುಲ್ಕರ್‌ ಶತಕ!

ಇನ್ನು 15 ದಿನ ಚಂಡೀಗಢದಲ್ಲಿದ್ದ ವೇಳೆ, ಅರ್ಜುನ್‌ಗೆ ನೀನು ಸಚಿನ್‌ ತೆಂಡುಲ್ಕರ್‌ ಅವರ ಮಗ ಎನ್ನುವುದನ್ನೇ ಮರೆತುಬಿಡು ಎಂದು ಹೇಳಿದ್ದೆ. ಅರ್ಜುನ್ ಅವರೊಂದಿಗಿನ ಎರಡು ವಾರಗಳನ್ನು ಬೂಟ್ ಕ್ಯಾಂಪ್‌ಗೆ ಹೋಲಿಸಬಹುದು ಎಂದು ಯೋಗರಾಜ್ ಹೇಳಿದ್ದಾರೆ. ಯೋಗರಾಜ್‌ ಸಿಂಗ್‌ ಗರಡಿಯಲ್ಲಿ ಅರ್ಜುನ್‌ ತರಬೇತಿ ಪಡೆಯುತ್ತಿರುವ ಚಿತ್ರಗಳು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Ranji Trophy: ಗೋವಾ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆ

"ಮುಂದಿನ 15 ದಿನಗಳವರೆಗೆ  ಸಚಿನ್ ತೆಂಡುಲ್ಕರ್ ಅವರ ಮಗ ಎಂಬುದನ್ನು ಮರೆಯಬೇಕು ಎಂದು ನಾನು ಆತನಿಗೆ ಹೇಳಿದ್ದೆ. ತೆಂಡುಲ್ಕರ್‌ ಮಗ ಎನ್ನುವ ಕಾರಣಕ್ಕಾಗಿಯೇ ಕೋಚ್‌ಗಳಿಂದ ಆತನಿಗೆ ಮೋಸವಾಗಿದೆ ಎಂದು ನಾನು ಭಾವಿಸುತ್ತೇನೆ. ಅರ್ಜುನ್‌ ಮೊದಲಿಗೆ ತಂದೆಯ ನೆರಳಿನಿಂದ ಹೊರಬರಬೇಕು ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios